
ಗಿರೀಶ್ ಮಾದೇನಹಳ್ಳಿ
ಬೆಂಗಳೂರು(ಮೇ.04): ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆ(PSI Recruitment Scam) ಆರಂಭವಾದ ಕೆಲವೇ ಹೊತ್ತಿನಲ್ಲಿ ಕಲಬುರಗಿಯ ಬಿಜೆಪಿ(BJP) ನಾಯಕಿ ದಿವ್ಯಾ(Divya Hagaragi) ಹಾಗರಗಿ ಒಡೆತನದ ಶಾಲೆ ಹಾಗೂ ಬೆಂಗಳೂರಿನ ಖಾಸಗಿ ಶಾಲೆ ಸೇರಿದಂತೆ ಎರಡೂ ಕಡೆಯಿಂದ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿದ್ದವು ಎಂದು ರಾಜ್ಯ ಅಪರಾಧ ತನಿಖಾ ದಳದ (CID) ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಪ್ರಶ್ನೆ ಪತ್ರಿಕೆಗಳ ಫೋಟೋ ಕಾಪಿ ಪಡೆದ ಆರೋಪಿಗಳು(Accused), ಬಳಿಕ ಅವುಗಳಿಗೆ ಉತ್ತರ ಸಿದ್ಧಪಡಿಸಿ ವ್ಯಾಟ್ಸ್‌ಆ್ಯಪ್‌ನಲ್ಲಿ ತಮ್ಮ ಸಂಪರ್ಕದಲ್ಲಿದ್ದ ಅಭ್ಯರ್ಥಿಗಳಿಗೆ(Candidates) ರವಾನಿಸಿದ್ದಾರೆ. ಈ ಉತ್ತರ ಆಧರಿಸಿ ಕೆಲವರು ಬ್ಲೂಟೂತ್(Bluetooth) ಬಳಸಿ ಪರೀಕ್ಷೆ ಬರೆದರೆ, ಪರೀಕ್ಷೆ ಮುಗಿದ ನಂತರ ಒಎಂಆರ್ ಶೀಟ್ ತಿದ್ದಲು ಪರೀಕ್ಷಾ ಮೇಲ್ವಿಚಾರಕರಿಗೆ ಅನುಕೂಲವಾಗಿದೆ. ಇದುವರೆಗೆ ತನಿಖೆಯಲ್ಲಿ ಬೆಂಗಳೂರು ಹಾಗೂ ಕಲಬುರಗಿ ಪರೀಕ್ಷಾ ಕೇಂದ್ರದಿಂದ ಪ್ರಶ್ನೆ ಪತ್ರಿಕೆ ಹೊರಬಂದಿರುವ ಮಾಹಿತಿ ಸಿಕ್ಕಿದೆ. ಆದರೆ ಉತ್ತರ ಸಿದ್ಧಪಡಿಸಿರುವ ವ್ಯಕ್ತಿಗಳು ಪತ್ತೆಯಾಗಿಲ್ಲ. ಅವರಿಗೆ ಹುಡುಕಾಟ ಮುಂದುವರೆದಿದೆ ಎಂದು ಸಿಐಡಿ ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.
ಸಿಐಡಿ ಪೊಲೀಸರಿಗೇ ಚಳ್ಳೆ ಹಣ್ಣು ತಿನಿಸಿದ್ದ ಹಾಗರಗಿ: 18 ದಿನದಿಂದ ದಿವ್ಯಾ ಎಲ್ಲಿದ್ರು? ಇಂಚಿಂಚು ಮಾಹಿತಿ ಇಲ್ಲಿದೆ
ಉತ್ತರ ಸಿದ್ಧಪಡಿಸಿದ್ದು ಹೇಗೆ?:
2021ರ ಅಕ್ಟೋಬರ್ 3ರಂದು ರಾಜ್ಯದ 93 ಪರೀಕ್ಷಾ ಕೇಂದ್ರಗಳಲ್ಲಿ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆ ನಡೆದಿತ್ತು. ಇನ್ನು ಸೆಪ್ಟೆಂಬರ್‌ನಲ್ಲಿ ನಿಗದಿಯಾಗಿದ್ದ ಪರೀಕ್ಷೆಯನ್ನು ದಿಢೀರನೇ ಅಕ್ಟೋಬರ್ ತಿಂಗಳಿಗೆ ಮುಂದೂಡಿದ್ದ ನೇಮಕಾತಿ ವಿಭಾಗದ ನಿರ್ಧಾರವು ಈಗ ಶಂಕೆಗೆ ಕಾರಣವಾಗಿದೆ. ಪರೀಕ್ಷೆ ದಿನಾಂಕ ನಿಗದಿಯಾದ ಬೆನ್ನಲ್ಲೇ ಪರೀಕ್ಷಾ ಅಕ್ರಮಕ್ಕೆ ಕಲಬುರಗಿಯ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ, ಕಾಂಗ್ರೆಸ್ ಮುಖಂಡ ರುದ್ರಗೌಡ ಹಾಗೂ ಬೆಂಗಳೂರಿನ ಕೆಲವರು ಸಂಚು ರೂಪಿಸಿದ್ದರು. ಪೂರ್ವನಿಗದಿಯಂತೆ ಅಂದು ಪರೀಕ್ಷೆಗೆ ಗೈರಾದ ಅಭ್ಯರ್ಥಿಗಳ ಹೆಸರಿನಲ್ಲಿ ವಿತರಣೆಯಾಗಿದ್ದ ಪ್ರಶ್ನೆ ಪತ್ರಿಕೆಯನ್ನು ತಮ್ಮ ಸಂಪರ್ಕದಲ್ಲಿದ್ದ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಂದ ಪಡೆದ ಆರೋಪಿಗಳು, ಬಳಿಕ ಅವುಗಳಿಗೆ ಕ್ಷಣಾರ್ಧದಲ್ಲಿ ಉತ್ತರ ಸಿದ್ಧಪಡಿಸಿ ವಾಟ್ಸ್ ಆ್ಯಪ್ ಮೂಲಕ ಹಂಚಿಕೆ ಮಾಡಿದ್ದಾರೆ. ಇಷ್ಟುಕಡಿಮೆ ಅವಧಿಯಲ್ಲಿ ಉತ್ತರ ಸಿದ್ಧಪಡಿಸಿದ ಆರೋಪಿಗಳಿಗೆ ಹುಡುಕಾಟ ನಡೆದಿದೆ. ಈ ಬಗ್ಗೆ ವಿಚಾರಣೆ ವೇಳೆ ರುದ್ರೇಗೌಡ ಹಾಗೂ ದಿವ್ಯಾ ಹಾಗರಗಿ ಬಾಯಿ ಬಿಡುತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಿಎಸ್‌ಐ ನೇಮಕಾತಿ ರದ್ದುಗೊಳಿಸಿ ಸರಕಾರ ಮಹತ್ವದ ಆದೇಶ
ಎಸ್‌ಐ ಮಾದರಿಯನ್ನೇ ಜೆಇಗೆ ಬಳಸಿದ ಮೇಳಕುಂದಿ
2021ರ ಅಕ್ಟೋಬರ್‌ನಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ತಾವು ರೂಪಿಸಿದ ಸಂಚಿನಂತೆ ಅಕ್ರಮ ನಡೆಸಿ ಯಶಸ್ವಿಗೊಂಡಿದ್ದ ಕಲಬುರಗಿ(Kalaburagi) ಜಿಲ್ಲೆಯ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಮಂಜುನಾಥ್ ಮೇಳಕುಂದಿ(Majunath Melakundi) ತಂಡವು, ಇದೇ ಮಾದರಿಯಂತೆ ಅದೇ ವರ್ಷ ಡಿಸೆಂಬರ್ 13ರಂದು ನಡೆದ ಲೋಕೋಪಯೋಗಿ ಇಲಾಖೆಯ(PWD) ಕಿರಿಯ ಎಂಜಿನಿಯರ್‌ಗಳ ನೇಮಕಾತಿ ಪರೀಕ್ಷೆಯಲ್ಲಿ ಕೂಡಾ ಅಕ್ರಮ ಎಸಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷೆಗೂ ಮುನ್ನವೇ ಪ್ರಶ್ನೆಗಳು ಬಯಲು?
ಪಿಎಸ್‌ಐ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಕೆಲವು ಪ್ರಶ್ನೆಗಳು ಪರೀಕ್ಷೆಗೂ ಮುನ್ನವೇ ಆರೋಪಿಗಳಿಗೆ ಲಭ್ಯವಾಗಿರುವ ಬಗ್ಗೆ ಸಹ ಅನುಮಾನವಿದೆ. ಪರೀಕ್ಷೆ ಆರಂಭವಾದ ಕೆಲವೇ ಕ್ಷಣಗಳಲ್ಲಿ ಉತ್ತರ ಸಿದ್ಧಪಡಿಸಲು ಹೇಗೆ ಸಾಧ್ಯವಾಗುತ್ತದೆ? ಈ ಹಿನ್ನೆಲೆಯಲ್ಲಿ ನೇಮಕಾತಿ ವಿಭಾಗದ ಕೆಲವರ ಮೇಲೆ ಗುಮಾನಿ ಮೂಡಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ