ಬೆಳಗಾವಿ ಸೇರಿ ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಕೊಲ್ಲಾಪುರದಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧವೇ ಶನಿವಾರ ಪ್ರತಿಭಟನೆ ನಡೆಯಿತು.
ಬೆಳಗಾವಿ/ಬೆಂಗಳೂರು (ಡಿ.11): ಬೆಳಗಾವಿ ಸೇರಿ ಕರ್ನಾಟಕದ ಮರಾಠಿ ಭಾಷಿಕ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಕೊಲ್ಲಾಪುರದಲ್ಲಿ ಮಹಾರಾಷ್ಟ್ರ ಸರ್ಕಾರದ ವಿರುದ್ಧವೇ ಶನಿವಾರ ಪ್ರತಿಭಟನೆ ನಡೆದರೆ, ಕರ್ನಾಟಕದಲ್ಲಿ ಎಂಇಎಸ್, ಮಹಾರಾಷ್ಟ್ರ ರಾಜಕಾರಣಿಗಳು ಮತ್ತು ಮರಾಠಿ ಪುಂಡರ ವಿರುದ್ಧ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮಹಾವಿಕಾಸ ಆಘಾಡಿ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸದಸ್ಯರು ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್ ಸೇರಿ ಕರ್ನಾಟಕದಲ್ಲಿರುವ ಮರಾಠಿ ಬಹುಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು, ಜತೆಗೆ ಏಕನಾಥ ಶಿಂಧೆ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದರು.
ಮಹಾರಾಷ್ಟ್ರ-ಕರ್ನಾಟಕ ನಡುವೆ ಬಸ್‌ಗಳ ಓಡಾಟ ಭಾಗಶಃ ಶುರು
ಈ ವೇಳೆ ಮಾತನಾಡಿದ ಮಾಜಿ ಸಚಿವ ಹಸನ್ ಮುಶ್ರೀಫ್, ಕರ್ನಾಟಕ ಸಿಎಂ ಬೊಮ್ಮಾಯಿ ಗಡಿ ವಿವಾದದ ಕಿಡಿ ಹೊತ್ತಿಸಿದ್ದರಿಂದ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವರು ಬೆಳಗಾವಿ ಪ್ರವಾಸ ಕೈಗೊಂಡಿದ್ದರು. ಆದರೆ, ಕರ್ನಾಟಕ ಸರ್ಕಾರಕ್ಕೆ ಹೆದರಿ ಪ್ರವಾಸ ಕೈಬಿಟ್ಟರು. ಡಿ.19ರಂದು ಬೆಳಗಾವಿಯಲ್ಲಿ ಸಂಘಟಿಸಿರುವ ಮಹಾಮೇಳಾವದಲ್ಲಿ ಧೈರ್ಯವಿದ್ದರೆ ಮಹಾರಾಷ್ಟ್ರ ಸಚಿವರು ಪಾಲ್ಗೊಳ್ಳಬೇಕು ಎಂದು ಬಹಿರಂಗ ಸವಾಲು ಹಾಕಿದರು.
ಕರ್ನಾಟಕದಲ್ಲೂ ಆಕ್ರೋಶ: ಅದೇ ರೀತಿ ಗಡಿ ತಂಟೆ ಎಬ್ಬಿಸಿ ಕರ್ನಾಟಕದ ಸಾರಿಗೆ ಬಸ್‌ಗಳಿಗೆ ಹಾನಿ ಮಾಡುತ್ತಿರುವ ಮರಾಠಿ ಪುಂಡರು ಮತ್ತು ಅವರಿಗೆ ಬೆಂಬಲ ನೀಡುತ್ತಿರುವ ಬೆಳಗಾವಿಯ ಎಂಇಎಸ್ ಮುಖಂಡರ ವಿರುದ್ಧ ವಿಜಯಪುರ, ಹಾವೇರಿ ಮತ್ತು ಮಂಡ್ಯದಲ್ಲಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ಹೊರಹಾಕಿದವು. ವಿಜಯಪುರ ಮತ್ತು ಮಂಡ್ಯದಲ್ಲಿ ಕರವೇ ಶಿವರಾಮೇಗೌಡರ ಬಣದ ಕಾರ್ಯಕರ್ತರು, ಹಾವೇರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಡಿ.23ರವರೆಗೆ ಕೊಲ್ಲಾಪುರದಲ್ಲಿ ನಿಷೇಧಾಜ್ಞೆ: ಗಡಿ ವಿವಾದ ಮುಂದಿಟ್ಟುಕೊಂಡು ಕೊಲ್ಲಾಪುರದಲ್ಲಿ ಮಹಾ ವಿಕಾಸ ಆಘಾಡಿ ಸಂಘಟನೆ ಸದಸ್ಯರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಧರಣಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಕೊಲ್ಲಾಪುರ ಜಿಲ್ಲಾಡಳಿತ ಡಿ.9ರಿಂದ ಡಿ.23ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದೆ.
ಮೋದಿ ಇಂದು ಮಾತಾಡಲಿ: ‘ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ನಾಗಪುರಕ್ಕೆ ಅಭಿವೃದ್ಧಿ ಕಾರ‍್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಬರುತ್ತಿದ್ದಾರೆ. ಈ ವೇಳೆ ಅವರು ಗಡಿ ವಿವಾದದ ಬಗ್ಗೆ ಮೌನ ಮುರಿಯಬೇಕು. ನಿಲುವು ಸ್ಪಷ್ಟಪಡಿಸಬೇಕು’ ಎಂದು ಬಾಳಾಸಾಹೇಬ್ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಆಗ್ರಹಿಸಿದ್ದಾರೆ. ಜಾಲ್ನಾದಲ್ಲಿ ಮರಾಠಿ ಸಾಹಿತ್ಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಠಾಕ್ರೆ, ‘ಮಹಾರಾಷ್ಟ್ರ-ಬೆಳಗಾವಿ ಗಡಿ ವಿವಾದದ ಬಗ್ಗೆ ಮೋದಿ ಭಾನುವಾರ ತಮ್ಮ ನಿಲುವು ಸ್ಪಷ್ಟಪಡಿಸಬೇಕು.
ಮಹಾರಾಷ್ಟ್ರದ ಹಳ್ಳಿಗಳ ಮೇಲೆ ಹಕಕ್ಕು ಸಾಧಿಸುತ್ತಿರುವ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಗ್ಗೆಯೂ ಮೋದಿ ಮಾತನಾಡಬೇಕು’ ಎಂದು ಆಗ್ರಹಿಸಿದರು. ಇನ್ನೊಂದೆಡೆ, ‘ಸುಪ್ರೀಂ ಕೋರ್ಚ್ ವಿಳಂಬ ಮಾಡದೇ ಅತಿ ಮಹತ್ವವಾದ ಗಡಿ ವಿಷಯದ ವಿಚಾರಣೆ ನಡೆಸಬೇಕು’ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಶೇಖರ ಬಾವನ್‌ಕುಳೆ ಒತ್ತಾಯಿಸಿದ್ದಾರೆ.
ಕರ್ನಾಟಕ ಸೇರುತ್ತೇವೆಂದ ಗ್ರಾಮಸ್ಥರಿಗೆ ಮಹಾರಾಷ್ಟ್ರ ಪೊಲೀಸರಿಂದ ನೋಟಿಸ್
ಅಮಿತ್ ಶಾಗೆ ಬೊಮ್ಮಾಯಿ ಅಗೌರವ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಗೌರವ ತರುವ ರೀತಿ ನಡೆದುಕೊಂಡಿದ್ದಾರೆ ಎಂದು ಮಹಾರಾಷ್ಟ್ರದ ವಿಪಕ್ಷಗಳಾದ ಎನ್‌ಸಿಪಿ ಹಾಗೂ ಶಿವಸೇನೆ ಆರೋಪಿಸಿವೆ. ಸುದ್ದಿಗಾರರ ಜತೆ ಮಾತನಾಡಿದ ಶಿವಸೇನೆ ಸಂಸದ ಅರವಿಂದ ಸಾವಂತ್, ‘ಗಡಿ ವಿಚಾರದಲ್ಲಿ ಶಾ ಅವರಿಗೆ ನಾವು ದೂರು ನೀಡಿದ್ದೇವೆ. ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಡಿ.14ರಂದು ಮಾತನಾಡುವುದಾಗಿ ಶಾ ಹೇಳಿದ್ದಾರೆ.
ಆದರೆ, ‘ಶಾ ಹಾಗೂ ಮಹಾರಾಷ್ಟ್ರ ನಿಯೋಗದ ಭೇಟಿಯು ಉಭಯ ರಾಜ್ಯಗಳ ಗಡಿ ವಿಚಾರದ ಮೇಲೆ ಯಾವುದೇ ಪರಿಣಾಮ ಬೀರದು’ ಎಂದು ಬೊಮ್ಮಾಯಿ ಹೇಳಿದ್ದಾರೆ. ಇದು ಶಾಗೆ ಬೊಮ್ಮಾಯಿ ತೋರಿದ ಅಗೌರವ’ ಎಂದು ಕಿಡಿಕಾರಿದರು. ಬೊಮ್ಮಾಯಿ ಹೇಳಿಕೆಯು ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಸಿಕೊಂಡು ಹೇಳಿದ ಪೂರ್ವಯೋಜಿತ ಮಾತಾಗಿದೆ ಎಂದೂ ಸಾವಂತ್ ಕಿಡಿಕಾರಿದರು. ಇನ್ನು ರಾಷ್ಟ್ರವಾದಿ ಕಾಂಗ್ರೆಸ್ ವಕ್ತಾರ ಕ್ಲೈಡ್ ಕ್ರ್ಯಾಸ್ಟೊ, ‘ಕರ್ನಾಟಕ ಮುಖ್ಯಮಂತ್ರಿ ಹೇಳಿಕೆ ಕೇಂದ್ರ ಗೃಹಮಂತ್ರಿಗೆ ಹಾಗೂ ನಮ್ಮ ರಾಷ್ಟ್ರಕ್ಕೆ ಅವಮಾನ ಅಲ್ಲವೆ?’ ಎಂದು ಪ್ರಶ್ನಿಸಿದ್ದಾರೆ.