
ಹೊಸಪೇಟೆ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಕ್ಫ್ ಕಾಯಿದೆ ವಿರೋಧಿಸಿ ನಗರದ ಚಿತ್ತವಾಡ್ಗಿ ಜಾಮೀಯಾ ಮಸೀದಿ ಅಡಳಿತ ಮಂಡಳಿ ನೇತೃತ್ವದಲ್ಲಿ ಶುಕ್ರವಾರ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಹೊಸಪೇಟೆಯ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎಚ್.ಎನ್. ಮಹಮ್ಮದ್ ಇಮಾಮ್ ನಿಯಾಜಿ ಮಾತನಾಡಿ, ಅಂಜುಮನ್ ಕಮಿಟಿ ಹೊಸಪೇಟೆ, ಚಿತ್ತವಾಡ್ಗಿ ಜಾಮೀಯಾ ಮಸೀದಿ ಅಡಳಿತ ಮಂಡಳಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ 2025ರ ವಕ್ಫ್ ಕಾಯಿದೆ ವಿರೋಧಿಸಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸುತ್ತಿದ್ದೇವೆ. ವಕ್ಫ್ ಕಾಯ್ದೆ ಸಂಪೂರ್ಣ ಸಂವಿಧಾನ ವಿರೋಧಿಯಾಗಿದ್ದು, ಈ ಒಂದು ತಿದ್ದುಪಡಿ ಸಂವಿಧಾನದ 14, 25, 26 ಮತ್ತು 29ನೇ ವಿಧಿಗಳಲ್ಲಿ ಪ್ರತಿಪಾದಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆ ಆಗಿರುತ್ತದೆ. ವಕ್ಫ್ ಮಂಡಳಿ ಮತ್ತು ಕೇಂದ್ರ ವಕ್ಫ್ ಮಂಡಳಿಯಲ್ಲಿ ಮುಸ್ಲಿಮರು ಮಾತ್ರ ಸದಸ್ಯರಾಗಿರಬೇಕು ಎಂಬ ನಿಯಮ ಕೊನೆಗಾಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಕ್ಫ್ ಕಾಯಿದೆ ಹಿಂಪಡೆಯುವ ವರೆಗೂ ಕೇವಲ ವಿಜಯನಗರ ಜಿಲ್ಲೆಯಲ್ಲಿ ಮಾತ್ರವಲ್ಲದೆ, ಎಲ್ಲ ರಾಜ್ಯಗಳಲ್ಲಿ, ಎಲ್ಲ ಜಿಲ್ಲೆಗಳಲ್ಲಿ, ಎಲ್ಲ ತಾಲೂಕುಗಳಲ್ಲಿ ನಿರಂತರವಾಗಿ ಹೋರಾಟಗಳನ್ನು ಮಾಡುತ್ತೇವೆ. ಆನಂತರವೂ ಕಾಯ್ದೆ ಹಿಂಪಡೆಯದೇ ಹೋದರೆ ಮುಂದಿನ ದಿನಗಳಲ್ಲಿ ದೇಶದಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ಕೇಂದ್ರ ಸರ್ಕಾರಕ್ಕೆ ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆ ವೇಳೆ ಅಂಜುಮನ್ ಕಮಿಟಿಯ ಗುಲಾಮ ರಸೂಲ್, ನಗರಸಭೆ ಸದಸ್ಯ ಅಸ್ಲಂ ಮಾಳಗಿ, ಮುಸ್ಲಿಂ ಸಮಾಜದ ಮುಖಂಡರಾದ ನಾಸಿರ್, ಸಿ. ಇಮ್ತಿಯಾಜ್, ಆಜಾಮ್, ಚಾಂದ್ ಬಾಷಾ, ಕೆ. ನಜೀರ್, ತಪ್ಪಡ್ ಸಾಹೇಬ್, ಲಿಯಾಕತ್, ಖಾಜಾ ಹುಸೇನ್ ನಿಯಾಜಿ ಹಾಗೂ ಮುಸ್ಲಿಂ ಮುಖಂಡರು ಭಾಗವಹಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ