ಸರ್ಕಾರಿ ಹುದ್ದೆ ಭರ್ತಿಗೆ ಆಗ್ರಹಿಸಿ ಧಾರವಾಡದಲ್ಲಿ ಭುಗಿಲೆದ್ದ ಹೋರಾಟ - ನಿರುದ್ಯೋಗಿಗಳ ಸಿಟ್ಟು ಸ್ಫೋಟ

Kannadaprabha News   | Kannada Prabha
Published : Feb 25, 2026, 05:22 AM IST
Dharwad

ಸಾರಾಂಶ

ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಸುಮಾರು 2.6 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಹೋರಾಟ ಧಾರವಾಡದಲ್ಲಿ ಮಂಗಳವಾರ ತೀವ್ರ ಸ್ವರೂಪ ಪಡೆದಿದೆ.

ಧಾರವಾಡ : ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಸುಮಾರು 2.6 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಹೋರಾಟ ಧಾರವಾಡದಲ್ಲಿ ಮಂಗಳವಾರ ತೀವ್ರ ಸ್ವರೂಪ ಪಡೆದಿದೆ. ಉದ್ಯೋಗದ ನಿರೀಕ್ಷೆಯಲ್ಲಿರುವ ಯುವಕರು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಿರಂತರ ಏಳು ಗಂಟೆಗಳ ಕಾಲ ಹೋರಾಟ ನಡೆಸಿ, ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಇತರ ಇಲಾಖೆಗಳ ಸಚಿವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಭಾವಚಿತ್ರ ಹರಿದು, ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ತಮ್ಮ ಆಕ್ರೋಶ ಹೊರಹಾಕಿದರು. ರಸ್ತೆ ಬದಿಯ ಪೋಸ್ಟರ್‌, ಬ್ಯಾನರ್‌ ಹರಿದು, ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಆಕ್ರೋಶ ಹೊರ ಹಾಕಿದರು. ಈ ವೇಳೆ, ವಿದ್ಯಾಗಿರಿ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಫೀಕ್ ತಹಶೀಲ್ದಾರ್ ಅವರ ತಲೆಗೆ ಕಟ್ಟಿಗೆಯ ಬೋರ್ಡ್‌ ತಗುಲಿ ಅವರು ಗಾಯಗೊಂಡರು.

ಈ ಮಧ್ಯೆ, ಮುಖ್ಯಮಂತ್ರಿಯವರು ನೇಮಕಾತಿಗೆ ಅಧಿಸೂಚನೆ ಹೊರಡಿಸುವವರೆಗೂ ಅನಿರ್ದಿಷ್ಟಾವಧಿ ಹೋರಾಟ ನಡೆಸುವುದಾಗಿ ಪಟ್ಟು ಹಿಡಿದಿರುವ ಪ್ರತಿಭಟನಾಕಾರರು, ಕೆಲವೇ ದಿನಗಳಲ್ಲಿ ಧಾರವಾಡದಿಂದ ಬೆಂಗಳೂರಿನ ವಿಧಾನಸೌಧದವರೆಗೂ ಪಾದಯಾತ್ರೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.ಕಾಲಿಗೆ ಬಿದ್ದು, ಕಣ್ಣೀರು ಹಾಕಿದರು:

ಬೆಳಗ್ಗೆ 10 ಗಂಟೆಗೆ ಇಲ್ಲಿಯ ಶ್ರೀನಗರ-ಜಯನಗರ ವೃತ್ತದಲ್ಲಿ ಸೇರಿದ ಸುಮಾರು 2,000ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು. ಸ್ವತಃ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಆಗಮಿಸಿ, ಉದ್ಯೋಗಾಕಾಂಕ್ಷಿಗಳನ್ನು ಸಮಾಧಾನ ಪಡಿಸಲು ಯತ್ನಿಸಿದರಾದರೂ, ಅವರ ಪ್ರಯತ್ನ ವಿಫಲವಾಯಿತು. ಕೆಲ ಹೊತ್ತು ಪೊಲೀಸ್‌ ಆಯುಕ್ತರನ್ನೇ ಸುತ್ತುವರೆದು ಉದ್ಯೋಗಾಕಾಂಕ್ಷಿಗಳು, ತಮ್ಮ ಆಕ್ರೋಶ ಹೊರಹಾಕಿದರು.

ಕೆಲವರಂತೂ ಕಾಲಿಗೆ ಬಿದ್ದು, ಕಣ್ಣೀರು ಹಾಕುತ್ತಾ, ನಮಗೆ ಉದ್ಯೋಗ ಕೊಡಿ ಎಂದು ದುಂಬಾಲು ಬಿದ್ದ ಪ್ರಸಂಗಗಳು ಸಹ ನಡೆದವು. ಪ್ರತಿಭಟನೆಯ ಕಾವು ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘದ ರಾಜ್ಯಾಧ್ಯಕ್ಷ ಕಾಂತಕುಮಾರ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಆದರೆ, ಉದ್ಯೋಗಾಕಾಂಕ್ಷಿಗಳ ತೀವ್ರ ಆಗ್ರಹದ ಹಿನ್ನೆಲೆಯಲ್ಲಿ ಮತ್ತೆ ಅವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆ ತರಲಾಯಿತು.

ಈ ವೇಳೆ ಮಾತನಾಡಿದ ಕಾಂತಕುಮಾರ, ಪ್ರಾಣ ಹೋದರೂ ಹೋರಾಟ ಮಾತ್ರ ಬಿಡುವುದಿಲ್ಲ ಎಂದು ಘೋಷಿಸಿದರು. ಮುಖ್ಯಮಂತ್ರಿಯವರು ಶೀಘ್ರವೇ ನೇಮಕಾತಿಗೆ ಅಧಿಸೂಚನೆ ಹೊರಡಿಸಬೇಕು ಎಂದು ಆಗ್ರಹಿಸಿದರು.

ಬಳಿಕ, ಪ್ರತಿಭಟನಾ ರ್‍ಯಾಲಿ ನಡೆಯಿತು.

ಅನುಮತಿ ಇಲ್ಲದಿದ್ದರೂ ಜ್ಯುಬಿಲಿ ವೃತ್ತಕ್ಕೆ ಹೋಗಿ, ರಸ್ತೆ ಬಂದ್‌ ಮಾಡಿ, ಪ್ರತಿಭಟನೆ ನಡೆಸಿದರು. ಈ ವೇಳೆ, ಹೋರಾಟದಲ್ಲಿ ಭಾಗವಹಿಸಲು ಬಿಜೆಪಿ ಮುಖಂಡರು ಆಗಮಿಸಿದಾಗ ಅವರಿಗೆ ತೀವ್ರ ವಿರೋಧ ವ್ಯಕ್ತವಾಯಿತು. ಮೂರು ವರ್ಷಗಳ ಕಾಲ ನೀವು ವಿರೋಧ ಪಕ್ಷದಲ್ಲಿದ್ದು, ನೇಮಕಾತಿಗಾಗಿ ಏನು ಮಾಡಿದ್ದೀರಿ? ಈಗ ಹೋರಾಟದ ಲಾಭ ಪಡೆಯಲು ಬಂದಿದ್ದೀರಾ? ಎಂದು ಗೋಬ್ಯಾಕ್‌ ಘೋಷಣೆಗಳನ್ನು ಕೂಗಿದರು. ಶಾಸಕ ಅರವಿಂದ ಬೆಲ್ಲದ ಮಾತನಾಡುವಾಗ ಉದ್ಯೋಗಾಕಾಂಕ್ಷಿಗಳು ನೀರಿನ ಬಾಟಲ್‌ ಒಗೆದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ಕಾವು ಏರುತ್ತಿದ್ದಂತೆ ಸಂಜೆ 4 ಗಂಟೆಗೆ ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌. ಆಗಮಿಸಿ, ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಈ ವೇಳೆ, ಪೊಲೀಸರು ವಿದ್ಯಾರ್ಥಿ ಮುಖಂಡ ಕಾಂತಕುಮಾರ ಅವರನ್ನು ಬಂಧಿಸಿ, ಪ್ರತಿಭಟನಾಕಾರರನ್ನು ಚದುರಿಸುವ ಮೂಲಕ ಹೋರಾಟಕ್ಕೆ ತೆರೆ ಎಳೆದರು.

ಹೋರಾಟಕ್ಕೆ ಬಿಜೆಪಿ ಸಾಥ್‌

ಈ ಮಧ್ಯೆ, ವಿಧಾನಸಭೆಯ ವಿಪಕ್ಷ ನಾಯಕ ಆರ್‌.ಅಶೋಕ್‌, ವಿಧಾನ ಪರಿಷತ್‌ ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹಾಗೂ ಉಪ ನಾಯಕ ಅರವಿಂದ ಬೆಲ್ಲದ ಸೇರಿ ಬಿಜೆಪಿ ಮುಖಂಡರು ಜಯನಗರ ವೃತ್ತದಿಂದ ಮಿಚಿಗಿನ್‌ ಕಾಂಪೌಂಡ್‌ವರೆಗೆ ಪ್ರತ್ಯೇಕವಾಗಿ ಪ್ರತಿಭಟನಾ ರ್‍ಯಾಲಿ ನಡೆಸಿ, ಸರ್ಕಾರಿ ಹುದ್ದೆಗಳನ್ನು ತುಂಬದ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಉದ್ಯೋಗಾಕಾಂಕ್ಷಿಗಳು ಬೀದಿಗಿಳಿದು ಹೋರಾಟ ಮಾಡಿದರೆ, ನಾವು ವಿಧಾನಸೌಧದ ಒಳಗೆ ನಿಮ್ಮ ಪರವಾಗಿ ಹೋರಾಟ ಮಾಡುತ್ತೇವೆ ಎಂದು ಭರವಸೆ ನೀಡಿದರು. ವಿದ್ಯಾರ್ಥಿ ಮುಖಂಡ ಕಾಂತಕುಮಾರ ಕೂಡ ಈ ಪ್ರತಿಭಟನೆಯಲ್ಲಿ ಭಾಗಿಯಾದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕನಿಷ್ಠ ಐವರಿಗೆ ಮಂತ್ರಿ ಸ್ಥಾನ ನೀಡಲು ಹೈಕಮಾಂಡ್‌ಗೆ ಮನವಿ
ರಾಯರ ಸನ್ನಿಧಿಯಲ್ಲಿ ಕಾಂಗ್ರೆಸ್ ವಿರುದ್ಧ ಅಶ್ವತ್ಥ್ ನಾರಾಯಣ ಕಿಡಿ: ದೇಶದಲ್ಲೇ ನಂಬರ್ 1 ಭ್ರಷ್ಟ ಸರ್ಕಾರ ಎಂದು ವಾಗ್ದಾಳಿ!