Basavaraj Bommai: ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಜನವರಿ 28ಕ್ಕೆ 6 ತಿಂಗಳು

By Kannadaprabha News  |  First Published Jan 17, 2022, 1:00 AM IST

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಇದೇ ತಿಂಗಳ 28ಕ್ಕೆ ಆರು ತಿಂಗಳು ಪೂರೈಸುತ್ತಿದ್ದು, ಕೋವಿಡ್‌ ಮೂರನೇ ಅಲೆಯ ಸಂಕಷ್ಟದ ನಡುವೆಯೂ ಒಂದಿಷ್ಟುಹೊಸ ಕಾರ್ಯಕ್ರಮಗಳನ್ನು ಘೋಷಿಸುವ ಸಾಧ್ಯತೆ ಬಗ್ಗೆ ಚಿಂತನೆ ನಡೆಸಿದ್ದಾರೆ.
 


ಬೆಂಗಳೂರು (ಜ. 17): ಬಸವರಾಜ ಬೊಮ್ಮಾಯಿ (Basavaraja Bommai) ಅವರು ಮುಖ್ಯಮಂತ್ರಿಯಾಗಿ (Chief Minister) ಅಧಿಕಾರ ಸ್ವೀಕರಿಸಿ ಇದೇ ತಿಂಗಳ 28ಕ್ಕೆ ಆರು ತಿಂಗಳು ಪೂರೈಸುತ್ತಿದ್ದು, ಕೋವಿಡ್‌ ಮೂರನೇ ಅಲೆಯ (Covid 3rd Wave) ಸಂಕಷ್ಟದ ನಡುವೆಯೂ ಒಂದಿಷ್ಟು ಹೊಸ ಕಾರ್ಯಕ್ರಮಗಳನ್ನು ಘೋಷಿಸುವ ಸಾಧ್ಯತೆ ಬಗ್ಗೆ ಚಿಂತನೆ ನಡೆಸಿದ್ದಾರೆ.

ಕೋವಿಡ್‌ನಿಂದಾಗಿ (Covid19) ತೆರಿಗೆ ಸಂಗ್ರಹ ತನ್ನ ಗುರಿ ಸಾಧಿಸದೇ ಇರುವುದರಿಂದ ಹೊಸ ಕಾರ್ಯಕ್ರಮಗಳನ್ನು ಘೋಷಿಸಬೇಕೊ ಅಥವಾ ಮುಂದಿನ ತಿಂಗಳು ಮಂಡಿಸಲಿರುವ 2022-23ನೇ ಸಾಲಿನ ಹಾಗೂ ತಮ್ಮ ಚೊಚ್ಚಲ ಬಜೆಟ್‌ನಲ್ಲೇ ಎಲ್ಲವನ್ನೂ ಪ್ರಕಟಿಸಬೇಕೊ ಎಂಬ ಜಿಜ್ಞಾಸೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರು ಇದ್ದಾರೆ ಎನ್ನಲಾಗಿದೆ.

Tap to resize

Latest Videos

ಆರು ತಿಂಗಳು ಪೂರೈಸಿರುವುದರಿಂದ ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಸಮಾರಂಭವೊಂದನ್ನು ಆಯೋಜಿಸಬೇಕು ಎಂಬ ಉದ್ದೇಶವೂ ಬೊಮ್ಮಾಯಿ ಅವರ ಆಪ್ತರಲ್ಲಿದೆ. ಆದರೆ, ಕೋವಿಡ್‌ ಪ್ರಕರಣ ತೀವ್ರಗೊಂಡಲ್ಲಿ ಅದಕ್ಕೆ ಕತ್ತರಿ ಬೀಳಬಹುದು ಎಂಬ ಮಾತೂ ಕೇಳಿಬರುತ್ತಿದೆ.

National Start-up Day ಐಟಿ-ಬಿಟಿಯಲ್ಲಿ ದೇಶದಲ್ಲೇ ಕರ್ನಾಟಕ ಪ್ರಥಮ ಸ್ಥಾನ

ಈ ನಡುವೆ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಜಾರಿಗೆ ತಂದ 70ಕ್ಕೂ ಹೆಚ್ಚು ಇಲಾಖೆಗಳಿಂದ 450ಕ್ಕೂ ಹೆಚ್ಚು ಸರ್ಕಾರಿ ಸೇವೆಗಳನ್ನು ಒದಗಿಸುವ ‘ಗ್ರಾಮ ಒನ್‌’ (Grama One) ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿದ್ದಾರೆ. ಬಹುತೇಕ 28ರ ಆಸುಪಾಸು ಈ ವಿಸ್ತರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ನವೆಂಬರ್‌ 19ರಂದು ದಾವಣಗೆರೆ ಜಿಲ್ಲೆಯಲ್ಲಿ ಗ್ರಾಮ ಒನ್‌ ಯೋಜನೆಗೆ ಮುಖ್ಯಮಂತ್ರಿಗಳು ಪ್ರಾಯೋಗಿಕವಾಗಿ ಚಾಲನೆ ನೀಡಿದ್ದರು. ಸದ್ಯ ದಾವಣಗೆರೆ, ವಿಜಯಪುರ, ಚಿಕ್ಕಮಗಳೂರು ಹಾಗೂ ಬೀದರ್‌ ಜಿಲ್ಲೆಗಳಲ್ಲಿ 300ಕ್ಕೂ ಹೆಚ್ಚು ಗ್ರಾಮ ಒನ್‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಮೂಲಕ ಇಲ್ಲಿಯವರೆಗೆ 5,85,000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಯೋಜನೆಯ ಬಗ್ಗೆ ಸೋಮವಾರ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪರಿಶೀಲನೆ ಸಭೆ ನಡೆಸಲಿದ್ದಾರೆ.

ಸಾಧನಾ ವರದಿ ಬಿಡುಗಡೆಗೆ ಸಿಎಂ ಕಚೇರಿಯಿಂದ ಸಿದ್ಧತೆ:  ಇದೇ ವೇಳೆ ಆರು ತಿಂಗಳ ಅವಧಿಯಲ್ಲಿ ಆಗಿರುವ ಸಾಧನೆಗಳ ಬಗ್ಗೆ ವರದಿಯೊಂದನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿಗಳ ಕಚೇರಿ ಸಿದ್ಧತೆ ನಡೆಸಿದೆ. 28ರಂದು ಭೌತಿಕ ಕಾರ್ಯಕ್ರಮ ನಡೆಸಿದಲ್ಲಿ ಅಲ್ಲಿಯೇ ಈ ಸಾಧನಾ ವರದಿ ಬಿಡುಗಡೆಗೊಳ್ಳಲಿದೆ. ಇಲ್ಲದಿದ್ದರೆ ವರ್ಚುಯಲ್‌ ಕಾರ್ಯಕ್ರಮದ ಮೂಲಕವಾದರೂ ಮುಖ್ಯಮಂತ್ರಿಗಳು ಸಾಧನಾ ವರದಿ ಬಿಡುಗಡೆಗೊಳಿಸುವ ನಿರೀಕ್ಷೆಯಿದೆ. ಅಲ್ಲದೆ, ಸರ್ಕಾರದ ಸಾಧನೆಗಳನ್ನು ಆಡಳಿತಾರೂಢ ಬಿಜೆಪಿ ವತಿಯಿಂದಲೂ ರಾಜ್ಯಾದ್ಯಂತ ಪ್ರಚಾರ ಮಾಡಲು ಉದ್ದೇಶಿಸಲಾಗಿದೆ.

40% Commission ದಾಖಲೆ ಬಿಡುಗಡೆ ಮಾಡಿದ್ರೆ ಸರ್ಕಾರ ಪತನ, ಹೊಸ ಬಾಂಬ್ ಸಿಡಿಸಿದ ಗುತ್ತಿಗೆದಾರರ ಸಂಘ

ಸಭೆ ಕರೆದ ಸಿಎಂ ಬೊಮ್ಮಾಯಿ: ಕರ್ನಾಟಕದಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಸೋಮವಾರ (ಜ.17) ತಜ್ಞರ ಸಮಿತಿಯೊಂದಿಗೆ ಸಭೆ ನಡೆಸಲಿದ್ದಾರೆ.  ಸಂಜೆ 4 ಗಂಟೆಗೆ ಸಭೆ ನಿಗದಿಯಾಗಿದ್ದು, ವಿಡಿಯೋ ಕಾನ್ಫರೆನ್ಸ್​ ಮೂಲಕ ಮುಖ್ಯಮಂತ್ರಿ ಸಭೆ ನಡೆಸಲಿದ್ದಾರೆ. 

ಆರೋಗ್ಯ ಸಚಿವ ಡಾ.ಕೆ.ಸುಧಾಕರ, ಕಂದಾಯ ಸಚಿವ ಆರ್​.ಅಶೋಕ್ ಮತ್ತು ಕೊವಿಡ್​-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯರು, ಆರೋಗ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಕೊರೊನಾ ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ನಿರ್ಬಂಧಗಳು ಜ.19ಕ್ಕೆ ಅಂತ್ಯವಾಗಲಿವೆ. ಕಠಿಣ ನಿಯಮಗಳನ್ನು ಮುಂದುವರಿಸುವ ಔಚಿತ್ಯ ಮತ್ತು ಫೆಬ್ರುವರಿಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಲಿದೆ.

click me!