
ಮಂಗಳೂರು (ಅ.30) : ಮಂಗಳೂರಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿದ ಹಲವರ ಬ್ಯಾಂಕ್ ಖಾತೆಗಳಿಂದ ಹಣ ವರ್ಗಾವಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಬಿಹಾರ ಮೂಲದ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ದೀಪಕ್ ಕುಮಾರ್ ಹೆಂಬ್ರಮ್ (33), ವಿವೇಕ್ ಕುಮಾರ್ ಬಿಸ್ವಾಸ್ (24), ಮದನ್ ಕಮಾರ್ (23) ಎಂದು ಗುರುತಿಸಲಾಗಿದೆ. ಆಸ್ತಿ ನೋಂದಣಿಗಾಗಿ ಇರುವ ರಾಜ್ಯ ಸರ್ಕಾರದ ಕಾವೇರಿ 2 ಸಾಫ್ಟ್‌ವೇರ್ ಹ್ಯಾಕ್ ಮಾಡಿ ಆಸ್ತಿ ದಾಖಲೆ, ಬೆರಳಚ್ಚು, ಆಧಾರ್ ಮತ್ತಿತರ ಮಾಹಿತಿಯನ್ನು ಕದ್ದು ಇವರು ವಂಚಿಸಿದ್ದಾರೆ ಎನ್ನಲಾಗಿದೆ.
‘ನೋಂದಣಿ ಕಾರ‍್ಯಕ್ಕೆ ಕಾವೇರಿ ತಂತ್ರಾಂಶ ಉಪಯುಕ್ತ’
ಆರೋಪಿಗಳಿಗೆ ಸಂಬಂಧಿಸಿದ 10 ಬ್ಯಾಂಕ್ ಖಾತೆಗಳಿಂದ 3,60,242 ರು. ವಹಿವಾಟು ಸ್ಥಗಿತಗೊಳಿಸಲಾಗಿದ್ದು, ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ತಾಂತ್ರಿಕ ಪರಿಶೀಲನೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ರಾಜ್ಯಕ್ಕೆ ಸಂಬಂಧಿಸಿ 1000ಕ್ಕೂ ಹೆಚ್ಚು ನೋಂದಣೆ ಪತ್ರಗಳ ಪಿಡಿಎಫ್ ಮತ್ತು ಆಂಧ್ರ ಪ್ರದೇಶ ಹಾಗೂ ಇತರ ಕೆಲವು ರಾಜ್ಯಗಳ 300ಕ್ಕೂ ಅಧಿಕ ಪಿಡಿಎಫ್ ಪ್ರತಿಗಳನ್ನು ಆರೋಪಿಗಳು ಸಂಗ್ರಹಿಸಿಟ್ಟಿರುವುದು ತನಿಖೆ ವೇಳೆ ಕಂಡು ಬಂದಿದೆ. ಹೆಚ್ಚುವರಿ ತನಿಖೆಗಾಗಿ ಅರೋಪಿಗಳನ್ನು ಬಿಹಾರಕ್ಕೆ ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಿ ದಾಖಲೆ ಸಂಗ್ರಹಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕಾವೇರಿ 2.0 ತಂತ್ರಾಂಶ ದುರ್ಬಳಕೆ: ಆರೋಪಿಗಳು ಆಸ್ತಿ ನೋಂದಣಿಗೆ ಸಂಬಂಧಿಸಿದ ಕಾವೇರಿ-2.0 ವೆಬ್‌ಸೈಟ್‌ನಿಂದ ದಾಖಲಾತಿಗಳನ್ನು ಅಕ್ರಮವಾಗಿ ಪಡೆದು ಅದರಲ್ಲಿರುವ ಆಧಾರ್ ಸಂಖ್ಯೆ ಮತ್ತು ಹೆಬ್ಬೆರಳ ಗುರುತನ್ನು ಸಂಗ್ರಹಿಸಿ ಸ್ಕ್ಯಾನರ್ ಮೂಲಕ ಬೆರಳಚ್ಚು ಮುದ್ರೆಯನ್ನು ಸ್ಕ್ಯಾನ್ ಮಾಡಿ ಸಂತ್ರಸ್ತರ ಬ್ಯಾಂಕ್ ಖಾತೆಗಳಿಂದ ಹಣವನ್ನು ತಮ್ಮ ಖಾತೆಗಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ.
ಬೆಂಗಳೂರು: 854 ಕೋಟಿ ವಂಚಿಸಿದ್ದ ಸೈಬರ್ ಕ್ರೈಂ ಜಾಲ ಪತ್ತೆ, 6 ಖದೀಮರ ಬಂಧನ
ಕಳೆದ ಆರು ತಿಂಗಳಿನಿಂದ ಮಂಗಳೂರು ನಗರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ಹಾಗೂ ಇತರ ನೋಂದಣಿ ಮಾಡಿಸಿದ ಬಳಿಕ ಕೆಲ ನೋಂದಣಿದಾರರ ಹಣ ಕಳೆದ ಎರಡು ತಿಂಗಳಿನಿಂದೀಚೆಗೆ ಅವರ ವಿವಿಧ ಬ್ಯಾಂಕ್‌ಗಳಿಂದ ಎಇಪಿಎಸ್ ಮೂಲಕ ವರ್ಗಾವಣೆ ಆಗಿರುವ ಬಗ್ಗೆ ಮಂಗಳೂರು ಸೆನ್ ಕ್ರೈಮ್ ಪೊಲೀಸ್ ಠಾಣೆಗೆ ಹಲವು ದೂರುಗಳು ಬಂದಿದ್ದು, 10 ದೂರುಗಳು ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ