ಶಾಲೆಯೊಂದರ ಮುಖ್ಯೋಪಾಧ್ಯಾಯರ ವಿರುದ್ಧ ಅದೇ ಶಾಲೆಯ ಶಿಕ್ಷಕರೊಬ್ಬರು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಿಸಿದ್ದ ಸುಳ್ಳು/ನಿಷ್ಪ್ರಯೋಜಕ ಜಾತಿ ನಿಂದನೆ ಹಾಗೂ ಕೊಲೆ ಯತ್ನ ಪ್ರಕರಣವನ್ನು ರದ್ದುಪಡಿಸಿರುವ ಹೈಕೋರ್ಟ್, ಆ ಪ್ರಕರಣ ಸಂಬಂಧ ಕಾನೂನು ಹೋರಾಟ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ಪಡೆದಿದ್ದ ಒಂದೂವರೆ ಲಕ್ಷ ರು. ಸಹಾಯಧನವನ್ನು ಶಿಕ್ಷಕನಿಂದ ವಸೂಲಿ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಿ ಆದೇಶ ಹೊರಡಿಸಿದೆ.
ವಿಶೇಷ ವರದಿ
ಬೆಂಗಳೂರು (ಅ.30) : ಶಾಲೆಯೊಂದರ ಮುಖ್ಯೋಪಾಧ್ಯಾಯರ ವಿರುದ್ಧ ಅದೇ ಶಾಲೆಯ ಶಿಕ್ಷಕರೊಬ್ಬರು ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಿಸಿದ್ದ ಸುಳ್ಳು/ನಿಷ್ಪ್ರಯೋಜಕ ಜಾತಿ ನಿಂದನೆ ಹಾಗೂ ಕೊಲೆ ಯತ್ನ ಪ್ರಕರಣವನ್ನು ರದ್ದುಪಡಿಸಿರುವ ಹೈಕೋರ್ಟ್, ಆ ಪ್ರಕರಣ ಸಂಬಂಧ ಕಾನೂನು ಹೋರಾಟ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ಪಡೆದಿದ್ದ ಒಂದೂವರೆ ಲಕ್ಷ ರು. ಸಹಾಯಧನವನ್ನು ಶಿಕ್ಷಕನಿಂದ ವಸೂಲಿ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಿ ಆದೇಶ ಹೊರಡಿಸಿದೆ.
ಶಿಕ್ಷಕ ಚಂದ್ರು ರಾಥೋಡ್ ಎಂಬಾತ ತಮ್ಮ ವಿರುದ್ಧ ದಾಖಲಿಸಿದ ಪ್ರಕರಣ ರದ್ದುಪಡಿಸುವಂತೆ ಕೋರಿ ಬಾಗಲಕೋಟೆ ಹುನಗುಂದ ತಾಲೂಕಿನ ಮರಡಿ ಮಲ್ಲೇಶ್ವರ ಶಾಲೆಯ ಮುಖ್ಯೋಪಾಧ್ಯಾಯ ಶಿವಲಿಂಗಪ್ಪ ಬಿ.ಕೆರಕಲಮಟ್ಟಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ವೈಯಕ್ತಿಕ ಲಾಭಕ್ಕಾಗಿ ಅಟ್ರಾಸಿಟಿ ಕಾಯ್ದೆ ದುರ್ಬಳಕೆ: ದಲಿತ ಯುವಶಕ್ತಿ ವೇದಿಕೆ ಖಂಡನೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಸುಳ್ಳು ಹಾಗೂ ನಿಷ್ಪ್ರಯೋಜಕ ಪ್ರಕರಣಗಳನ್ನು ದಾಖಲಿಸುವುದು ಹೆಚ್ಚಾಗಿದೆ. ಇದೇ ಕಾರಣದಿಂದ ನಿಜವಾಗಿಯೂ ಜಾತಿ ನಿಂದನೆ ಪ್ರಕರಣದಲ್ಲಿ ನೊಂದವರಿಗೆ ತೊಂದರೆಯಾಗುತ್ತಿದೆ. ಕಾನೂನು ಪ್ರಕ್ರಿಯೆಯ ದುರುಪಯೋಗ ಪ್ರಕರಣಗಳು ನಾಯಿ ಕೊಡೆಗಳಂತೆ ದೊಡ್ಡ ಸಂಖ್ಯೆಯಲ್ಲಿ ಬೆಳೆಯುತ್ತಿರುವುದರಿಂದ, ಅವುಗಳ ಮಧ್ಯೆ ನೈಜ ಪ್ರಕರಣಗಳನ್ನು ಹುಡುಕುವುದೇ ಕಷ್ಟವಾಗಿದೆ ಎಂದು ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿದೆ.
ಪ್ರಕರಣದ ವಿವರ :
ಪರಿಶಿಷ್ಟ ಜಾತಿಗೆ ಸೇರಿದ ದೂರುದಾರ ಚಂದ್ರು ರಾಥೋಡ್ 1988ರಲ್ಲಿ ಬಾಗಲಕೋಟೆ ಹುನಗುಂದ ತಾಲೂಕಿನ ಮರಡಿ ಮಲ್ಲೇಶ್ವರ ಶಾಲೆಗೆ ಶಿಕ್ಷಕರಾಗಿ ಸೇರಿಕೊಂಡಿದ್ದರು. ಕೆಲವೊಂದು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ 2012ರ ಡಿ.5ರಂದು ಸೇವೆಯಿಂದ ಅವರು ವಜಾಗೊಂಡಿದ್ದರು. ಚಂದ್ರ ಅವರನ್ನು ಎಲ್ಲ ಹಿಂಬಾಕಿಯೊಂದಿಗೆ ಸೇವೆಗೆ ಮರು ನೇಮಕ ಮಾಡುವಂತೆ ಹೈಕೋರ್ಟ್ 2020ರ ಜ.27ರಂದು ಆದೇಶಿಸಿತ್ತು.
ಆದರೆ, ಮರು ನೇಮಕ ಮತ್ತು ಹಿಂಬಾಕಿ ವೇತನ ಪಾವತಿಗೆ ಕೋರಿದಾಗ ಶಾಲೆಯ ಮುಖ್ಯೋಪಾಧ್ಯಾಯರಾದ ಶಿವಲಿಂಗಪ್ಪ 10 ಲಕ್ಷ ರು.ಗೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿ ಚಂದ್ರು ಕ್ರಿಮಿನಲ್ ದೂರು ಸಲ್ಲಿಸಿದ್ದರು. ನಂತರ 2020ರ ಜೂ.23ರಂದು ಕರ್ತವ್ಯಕ್ಕೆ ಹಾಜರಾಗಲು ಮೋಟಾರು ಸೈಕಲ್‌ನಲ್ಲಿ ಹೋಗುತ್ತಿದ್ದ ತನ್ನನ್ನು ತಡೆದ ಶಿವಲಿಂಗಪ್ಪ ಹಾಗೂ ಇತರೆ ಮೂವರು, ಜಾತಿ ಹೆಸರಿನಲ್ಲಿ ನಿಂದಿಸಿದರು ಹಾಗೂ ಸೈಕಲ್ ಚೈನ್‌ನಿಂದ ಹಲ್ಲೆ ಮಾಡಿದ್ದರು ಎಂದು ಆರೋಪಿಸಿ 2020ರ ಜೂ.28ರಂದು ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಗೆ ಮತ್ತೊಂದು ದೂರು ನೀಡಿದ್ದರು. ಇದರಿಂದ ಜಾತಿ ನಿಂದನೆ, ಉದ್ದೇಶಪೂರ್ವಕ ಅವಮಾನ, ಭಾರತೀಯ ದಂಡ ಸಂಹಿತೆಯಡಿ ಜೀವ ಬೆದರಿಕೆ, ಕೊಲೆಯತ್ನ, ಅಕ್ರಮವಾಗಿ ನಿರ್ಬಂಧಿಸಿದ ಮತ್ತು ಹಲ್ಲೆ ನಡೆಸಿದ ಸಂಬಂಧ ಪೊಲೀಸರು ಎಫ್‌ಐಆರ್ ಸಲ್ಲಿಸಿದ್ದರು.
ತನಿಖೆ ಪೂರ್ಣಗೊಳಿಸಿ ಅರ್ಜಿದಾರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣವು ಬಾಗಲಕೋಟೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ವಿಚಾರಣೆ ಹಂತದಲ್ಲಿತ್ತು. ದೋಷಾರೋಪ ಪಟ್ಟಿ ರದ್ದುಪಡಿಸಲು ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್, ಅರ್ಜಿದಾರರ ವಿರುದ್ಧ ಒಂದೇ ಮಾದರಿಯ ಆರೋಪಗಳ ಸಂಬಂಧ ಮೂರು ಪ್ರತ್ಯೇಕ ದೂರುಗಳನ್ನು ವಿಭಿನ್ನ ಪೊಲೀಸ್ ಠಾಣೆಯಲ್ಲಿ ಚಂದ್ರು ದಾಖಲಿಸಿದ್ದಾರೆ. ಹೀಗಾಗಿ, ದೂರು ದಾಖಲಿಸುವುದು ಚಂದ್ರುಗೆ ರೂಢಿಗತವಾಗಿದೆ ಹಾಗೂ ತಾನೂ ದಾಖಲಿಸಿದ ಎಲ್ಲ ದೂರುಗಳ ವಿಚಾರಣೆಗೆ ಸಾಕ್ಷಿಗಳನ್ನು ಸ್ಟಾಕ್ ಮಾಡಿಕೊಂಡಿರುತ್ತಿದ್ದರು ಎಂಬುದಾಗಿ ಯಾವುದೇ ಅನುಮಾನವಿಲ್ಲದೇ ಹೇಳಬಹುದು. ಇದು ಎಸ್ಸಿ-ಎಸ್ಟಿ ಸಮುದಾಯದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ದುರ್ಬಳಕೆಯಲ್ಲದೇ ಮತ್ತೇನು ಅಲ್ಲ ಎಂದು ಕಟುವಾಗಿ ನುಡಿದಿದೆ.
ಅಲ್ಲದೆ, ಪ್ರತಿ ದೂರು ದಾಖಲಿಸಿದಾಗಲೂ ವ್ಯಾಜ್ಯಗಳನ್ನು ಮುಂದುವರಿಸಲು ಸಮಾಜ ಕಲ್ಯಾಣ ಇಲಾಖೆಯಿಂದ ಸಹಾಯಧನ ಪಡೆದಿದ್ದಾರೆ. ನಿಷ್ಪ್ರಯೋಜಕ ದೂರುಗಳ ಸಂಬಂಧ ಕಾನೂನು ಹೋರಾಟ ಮಾಡಲು ಸರ್ಕಾರ ಸಾರ್ವಜನಿಕ ಹಣದಿಂದ ಸಹಾಯಧನ ಪಾವತಿಸಿದೆ. ಇದನ್ನು ಸರ್ಕಾರ ತಡೆಹಿಡಿಯಬೇಕಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿದಾರರ ಮೇಲಿನ ಪ್ರಕರಣ ರದ್ದುಪಡಿಸಿತು. ಜತೆಗೆ, ಈ ಪ್ರಕರಣ ಸಂಬಂಧ ದೂರುದಾರ ಚಂದ್ರು ಪಡೆದಿರುವ ಒಂದೂವರೆ ಲಕ್ಷ ರು. ಸಹಾಯಧನವನ್ನು ಆತನಿಂದ ವಸೂಲಿ ಮಾಡಬೇಕು ಎಂದು ನಿರ್ದೇಶಿಸಿದೆ.