
ಬೆಂಗಳೂರು (ಮಾ.03): ನೋಂದಣಿ ವ್ಯವಸ್ಥೆಯಲ್ಲಿ ಮಧ್ಯವರ್ತಿ ಹಾವಳಿ, ವಂಚನೆ ತಡೆದು ಜನಸ್ನೇಹಿ ಸೇವೆ ನೀಡುವ ಉದ್ದೇಶದಿಂದ ಅಭಿವೃದ್ಧಿ ಪಡಿಸಿದ ‘ಕಾವೇರಿ 2.0’ ತಂತ್ರಾಂಶದ ಸೇವೆ ಮೂರು ತಿಂಗಳಲ್ಲಿ ರಾಜ್ಯಾದ್ಯಂತ ಲಭ್ಯವಾಗಲಿದೆ. ಶೀಘ್ರದಲ್ಲಿ ದೊಡ್ಡಬಳ್ಳಾಪುರದಲ್ಲಿ ಅಧಿಕೃತವಾಗಿ ಜಾರಿಗೆ ಬರಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸೇವೆ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿದ್ದು, ಅಭಿವೃದ್ಧಿ ಪಡಿಸಿದ ನೂತನ ತಂತ್ರಾಂಶದಿಂದ ಸೇವೆಗಳು ಸುಲಭವಾಗಲಿವೆ. ನಕಲಿ ದಾಖಲೆಗಳನ್ನು ನೀಡಿ ನೋಂದಣಿ ಮಾಡುವ ಪ್ರಕ್ರಿಯೆಗೆ ಕಡಿವಾಣ ಬೀಳಲಿದೆ, ಕಚೇರಿಗೆ ಬಂದು ದಿನವಿಡಿ ಕಾಯುವುದು ತಪ್ಪಲಿವೆ. ಮನೆಯಲ್ಲಿ ಕುಳಿತು ಸಂಬಂಧ ಪಟ್ಟದಾಖಲೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಕೆ ಮಾಡಿ, ನಿಗದಿಪಡಿಸಿದ ದಿನದಂದು ಕಚೇರಿಗೆ ಬಂದು ಭಾವಚಿತ್ರ, ಹೆಬ್ಬೆಟ್ಟಿನ ಗುರುತು ನೀಡಿದ ನಂತರ ನೋಂದಣಿ ಮಾಡಲಾಗುವುದು. ಈ ಪ್ರಕ್ರಿಯೆ 10 ನಿಮಿಷಗಳಲ್ಲಿ ಮುಗಿಯಲಿದೆ ಎಂದು ವಿವರಿಸಿದರು.
ಮಠಾಧೀಶರು ರಾಜಕೀಯಕ್ಕೆ ಬರುವುದು ಅವರ ವೈಯಕ್ತಿಕ: ಸಚಿವ ಅಶೋಕ್
ತಾವು ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಮನೆ ಬಾಗಿಲಿಗೆ ಖಾತೆ ನೀಡುವುದು, ಪೋಡಿ ಮಾಡುವುದು, ಕಾಫಿ ಬೆಳೆಗಾರರಿಗೆ ಕಂದಾಯ ಭೂಮಿ ಬಾಡಿಗೆ ನೀಡುವುದು ಸೇರಿದಂತೆ ಸಾಕಷ್ಟುಕೆಲಸ ಮಾಡಲಾಗಿದೆ. ನೋಂದಣಿಗೆ ಸಂಬಂಧಪಟ್ಟಂತೆ ಹಿಂದೆ ಡಿಡಿ, ಚಲನ್‌ಗಳ ಹಗರಣ ನಡೆದಿತ್ತು. ಯಾರದ್ದೋ ಹೆಸರಿಗೆ ಡಿಡಿ ಹೋಗುತ್ತಿತ್ತು. ಕಚೇರಿಯಲ್ಲಿ ಸದಾ ಜನರಿಂದ ಕೂಡಿರುತ್ತಿತ್ತು. ಹೊಸ ತಂತ್ರಾಂಶದಿಂದ ಈಗ ಎಲ್ಲ ಸಮಸ್ಯೆ ಬಗೆಹರಿಯಲಿದೆ ಎಂದು ಸಚಿವರು ಹೇಳಿದರು.
3 ಹಂತದಲ್ಲಿ ನೋಂದಣಿ ಪ್ರಕ್ರಿಯೆ
1.ನೋಂದಣಿ ಪೂರ್ವ: ನಾಗರಿಕರು ನೋಂದಣಿ ಕಚೇರಿಗೆ ಹಾಜರಾಗುವ ಮುನ್ನ ಎಲ್ಲ ಡೇಟಾ ಮತ್ತು ದಾಖಲೆಗಳನ್ನು ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಿ ಉಪನೋಂದಣಾಧಿಕಾರಿಗಳ ಕಚೇರಿಗೆ ಕಳುಹಿಸಬೇಕು. ಈ ದಾಖಲೆಗಳನ್ನು ಪರಿಶೀಲಿಸಿದ ನಂತರ ನಿಗದಿತ ಶುಲ್ಕ ಪಾವತಿಸಲು ತಿಳಿಸಲಾಗುತ್ತದೆ. ನಂತರ ನಾಗರಿಕರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ನೋಂದಣಿ ಪ್ರಕ್ರಿಯೆ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಬಹುದಾಗಿದೆ. ನಾಗರಿಕರು ತಮ್ಮ ಭಾವಚಿತ್ರ ಹೆಬ್ಬೆರಳು ಗುರುತನ್ನು ಸೆರೆ ಹಿಡಿಯುವ ಸಂಬಂಧ ನಿಗದಿತ ದಿನಾಂಕ ಮತ್ತು ಸಮಯದಲ್ಲಿ ಉಪನೋಂದಣಿ ಕಚೇರಿಗೆ ಬರಬೇಕು.
2. ನೋಂದಣಿ: ನೋಂದಣಿ ಪ್ರಕ್ರಿಯೆ 10 ನಿಮಿಷಗಳಲ್ಲಿ ಮುಗಿಯಲಿದೆ.
3. ನೋಂದಣಿ ನಂತರ: ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಡಿಜಿಟಲ್ ಸಹಿ ಮಾಡಿರುವ ದಸ್ತಾವೇಜನ್ನು ನಾಗರಿಕರ ಲಾಗಿನ್‌ಗೆ ಹಾಗೂ ಅವರ ‘ಡಿಜಿ ಲಾಕರ್’ ಖಾತೆಗೆ ಕಳುಹಿಸಿಕೊಡಲಾಗುವುದು.ದಸ್ತಾವೇಜಿನ ಮಾಹಿತಿಯನ್ನು ಸಂಬಂಧಪಟ್ಟಸಂಯೋಜಿತ ಇಲಾಖೆಗೆ ಖಾತಾ ಬದಲಾವಣೆಗೆ ಕಳುಹಿಸಲಾಗುತ್ತದೆ.
ವಂಚನೆ ರಹಿತ: ಅಭಿವೃದ್ಧಿ ಪಡಿಸಿದ ತಂತ್ರಾಂಶದಿಂದ ವಂಚನೆ ತಡೆಯಬಹುದಾಗಿದೆ. ತಂತ್ರಾಂಶವನ್ನು ಇತರೆ ಇಲಾಖೆಯ ತಂತ್ರಾಂಶಗಳೊಂದಿಗೆ ಸಂಯೋಜಿಸಲಾಗಿದೆ. ಕೃಷಿ ಜಮೀನುಗಳ ವಿವರ ಪಡೆಯಲು ‘ಭೂಮಿ’ ಗ್ರಾಮೀನ ಹಾಗೂ ನಗರ ಪ್ರವೇಶದ ಕೃಷಿಯೇತರ ಸ್ವತ್ತುಗಳಿಗೆ ‘ಇ-ಸ್ವತ್ತು ಸೇರಿದಂತೆ ‘ಸಕಾಲ’, ಖಜಾನೆ-2 ತಂತ್ರಾಂಶಗಳೊಂದಿಗೆ ಸಂಯೋಜಿಸಿರುವುದರಿಂದ ಮೋಸದ ನೋಂದಣಿ ತಡೆಯಬಹುದಾಗಿದೆ. ನೋಂದಾಯಿತ ದಸ್ತಾವೇಜಿನ ವಿವರಗಳನ್ನು ಸಂಬಂಧಪಟ್ಟಸಂಯೋಜಿತ ಇಲಾಖೆಗೆ ಮ್ಯೂಟೇಶನ್‌ಗೆ ಕಳುಹಿಸಲಾಗುವುದು.
ಕಾಲ್‌ಸೆಂಟರ್ ಸ್ಥಾಪನೆ: ನಾಗರಿಕರಿಗೆ ಜಾಗೃತಿ ಮೂಡಿಸಲು, ಹೊಸ ವ್ಯವಸ್ಥೆಯಲ್ಲಿ ಸಹಾಯ ಮಾಡಲು, ಅರ್ಜಿಯ ಸ್ಥಿತಿ ತಿಳಿಯಲು ಹಾಗೂ ಕುಂದುಕೊರತೆಗಳನ್ನು ದಾಖಲಿಸಲು ಕಾಲ್ ಸೆಂಟರ್ ಸ್ಥಾಪಿಸಲಾಗಿದೆ. ಸಾರ್ವಜನಿಕರು 080-68265316 ಸಂಖ್ಯೆಗೆ ದೂರವಾಣಿ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು.
ಸಿದ್ದರಾಮಯ್ಯಗೆ ಸೋಲಿನ ಭಯ ಕಾಡುತ್ತಿದೆ: ಸಚಿವ ಅಶೋಕ್ ವ್ಯಂಗ್ಯ
ಪಾಸ್‌ಪೋರ್ಟ್ ಮಾದರಿ ಕಚೇರಿ: ಇನ್ನು ಮುಂದೆ ನೋಂದಣಿ ಕಚೇರಿಗಳನ್ನು ಪಾಸ್‌ಪೋರ್ಟ್ ಮಾದರಿ ಕಚೇರಿಯಲ್ಲಿ ಸಿದ್ಧಪಡಿಸಲಾಗುವುದು. ನಾಗರಿಕರಿಗೆ ಕಾಯುವ ಪ್ರದೇಶ, ವಿಶ್ರಾಂತಿ ಕೊಠಡಿ, ಕ್ಯಾಂಟೀನ್, ರಾರಯಂಪ್, ಲಿಫ್‌್ಟಮುಂತಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಈಗಾಗಲೇ ಸಂಕೇಶ್ವರ, ಬೆಳಗಾವಿ ಹಾಗೂ ಬ್ಯಾಟರಾಯನಪುರ ಉಪ ನೋಂದಣಿ ಕಚೇರಿಗಳನ್ನು ಆಧುನೀಕರಣಗೊಳಿಸಲಾಗಿದೆ. ಉಳಿದವುಗಳನ್ನು ಈ ಆರ್ಥಿಕ ವರ್ಷದಲ್ಲಿ ಆಧುನೀಕರಣಗೊಳಿಸಲಾಗುವುದು ಎಂದು ಸಚಿವ ಆರ್.ಅಶೋಕ್ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ