
ಬೆಂಗಳೂರು : ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಸೇರಿ ವಿಶೇಷ ಸವಲತ್ತು ಪಡೆದ ಆರೋಪ ಹೊತ್ತಿರುವ ನಾಲ್ವರು ಕೈದಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಸಜಾ ಬಂಧಿ ವಿಕೃತ ಕಾಮಿ ಉಮೇಶ್ ರೆಡ್ಡಿ ಹಾಗೂ ವಿಚಾರಣಾಧೀನ ಕೈದಿಗಳಾದ ಐಸಿಸ್‌ನ ಶಂಕಿತ ಉಗ್ರ ಜುಹಾಬ್ ಹಮೀದ್ ಶಕೀಲ್, ಚಿನ್ನ ಕಳ್ಳ ಸಾಗಣಿಕೆ ಪ್ರಕರಣದಲ್ಲಿ ಬಂಧಿತ ನಟ ತರುಣ್ ರಾಜ್ ಹಾಗೂ ಶಾಹೀದ್ ಖಾನ್ ಅಲಿಯಾಸ್ ಚೋರ್‌ಗೆ ಪೊಲೀಸರ ತನಿಖೆ ಬಿಸಿ ತಟ್ಟಿದೆ. ಆದರೆ ತಮ್ಮ ಮೇಲಿನ ಆರೋಪವನ್ನು ಈ ನಾಲ್ವರೂ ತಳ್ಳಿ ಹಾಕಿದ್ದಾರೆ.
ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡಿಕೆ ಆರೋಪ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ತನಿಖೆಗಿಳಿದಿರುವ ಪೊಲೀಸರು ವೈರಲ್ ಆದ ವಿಡಿಯೋಗಳಲ್ಲಿ ಉಮೇಶ್ ರೆಡ್ಡಿ, ಶಕೀಲ್ ಹಾಗೂ ತರುಣ್ ರಾಜ್ ಮೊಬೈಲ್‌ನಲ್ಲಿ ಮಾತನಾಡುವ ದೃಶ್ಯಗಳಿದ್ದ ಕಾರಣಕ್ಕೆ ವಿಚಾರಣೆ ನಡೆಸಿದ್ದಾರೆ. ತಮಗೆ ಬಲವಂತದಿಂದ ಮೊಬೈಲ್ ಕೊಟ್ಟ ರೌಡಿ ವಡ್ಡ ನಾಗ ಹೆಸರನ್ನು ಉಮೇಶ್ ರೆಡ್ಡಿ ಹಾಗೂ ಮೊಹಮ್ಮದ್ ಶಾಜೀಲ್ ಖಾನ್ ಎಂಬಾತ ಹೆಸರನ್ನು ತರುಣ್ ಹೇಳಿದ್ದಾರೆ. ಇನ್ನು ತನಗೆ ಯಾರು ಮೊಬೈಲ್ ಕೊಟ್ಟಿದ್ದಾರೆಂಬುದು ಮರೆತೇ ಹೋಗಿದೆ ಎಂದು ಶಂಕಿತ ಉಗ್ರ ಶಕೀಲ್ ವಿಚಾರಣೆ ವೇಳೆ ತಿಳಿಸಿರುವುದಾಗಿ ಮೂಲಗಳು ಹೇಳಿವೆ.
ಜೈಲಿನಲ್ಲಿ ಉಮೇಶ್ ರೆಡ್ಡಿ ಹಾಗೂ ಶಂಕಿತ ಉಗ್ರನಿಗೆ ಮೊಬೈಲ್ ಕೊಟ್ಟಿದ್ದಾರೆ ಎನ್ನಲಾದ ರೌಡಿ ವಡ್ಡ ನಾಗ ಹಾಗೂ ಶಾಜೀಲ್ ಖಾನ್ ಮತ್ತು ಜೈಲಿನಲ್ಲಿ ನೃತ್ಯ ಮಾಡಿದ್ದ ಆರೋಪಿಗಳ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಜೈಲಿನ ವಿಶೇಷ ಸೌಲಭ್ಯ ವ್ಯವಸ್ಥೆಯ ವಿಡಿಯೋಗಳು ಬಹಿರಂಗ ಆದ ಬಳಿಕ ಆರೋಪಿಗಳು ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ವಿಶೇಷ ಸೌಲಭ್ಯದ ವಿಡಿಯೋ ಬಹಿರಂಗದ ಹಿಂದೆ ಪಾತ್ರವಹಿಸಿರುವ ಆರೋಪದ ಮೇರೆಗೆ ಮತ್ತೆ ನಟ ಧನ್ವೀರ್ ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಈ ಸಂಬಂಧ ನೋಟಿಸ್ ಕೊಟ್ಟಿದ್ದಾರೆ. ಈ ನೋಟಿಸ್‌ಗೆ ಪ್ರತಿಕ್ರಿಯಿಸಿರುವ ಅವರು, ಇನ್ನೆರಡು ದಿನಗಳಲ್ಲಿ ವಿಚಾರಣೆಗೆ ಬರುವುದಾಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ