ಕರ್ನಾಟಕದಲ್ಲಿ ಮುಂದಿನ ವರ್ಷ 7000 ಸರ್ಕಾರಿ ಶಾಲೆ ಬಂದ್‌?

Kannadaprabha News   | Kannada Prabha
Published : Nov 14, 2025, 05:20 AM IST
 Govt School

ಸಾರಾಂಶ

ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯನ್ನು ಒಟ್ಟುಗೂಡಿಸಿ ‘ಕರ್ನಾಟಕ ಪಬ್ಲಿಕ್‌ ಶಾಲೆ’ಯಾಗಿ ಪರಿವರ್ತಿಸಲು ಅನುಮತಿ ನೀಡಿರುವ ಶಿಕ್ಷಣ ಇಲಾಖೆ ಈ ಶಾಲೆಯ ಸುತ್ತಲ 6 ಕಿ.ಮೀ. ವ್ಯಾಪ್ತಿಯ 7 ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಲು ಒಪ್ಪಿಗೆ ನೀಡಿದೆ.

ಲಿಂಗರಾಜು ಕೋರಾ

ಬೆಂಗಳೂರು : ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಹೊಂಗನೂರಿನ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯನ್ನು ಒಟ್ಟುಗೂಡಿಸಿ ‘ಕರ್ನಾಟಕ ಪಬ್ಲಿಕ್‌ ಶಾಲೆ’ಯಾಗಿ ಪರಿವರ್ತಿಸಲು ಅನುಮತಿ ನೀಡಿರುವ ಶಿಕ್ಷಣ ಇಲಾಖೆ ಈ ಶಾಲೆಯ ಸುತ್ತಲ 6 ಕಿ.ಮೀ. ವ್ಯಾಪ್ತಿಯ 7 ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಲು ಒಪ್ಪಿಗೆ ನೀಡಿದೆ. ಅದರಂತೆ ಶಾಲೆಗಳ ವಿಲೀನಕ್ಕೆ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿ ಕ್ರಮ ವಹಿಸಿದ್ದಾರೆ.

ಇದು, ಒಂದು ಕರ್ನಾಟಕ ಪಬ್ಲಿಕ್‌ ಶಾಲೆಯ(ಕೆಪಿಎಸ್‌) ಉದಾಹರಣೆಯಷ್ಟೆ. ಗ್ರಾ.ಪಂ.ಗೆ ಒಂದರಂತೆ ಇಂಥ 700 ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು 2026-27ನೇ ಸಾಲಿನಲ್ಲಿ ಹೊಸದಾಗಿ ಆರಂಭಿಸಲು ಈಗಾಗಲೇ ಸರ್ಕಾರ ಅನುಮತಿ ನೀಡಿದೆ. ಈ ಒಂದೊಂದು ಕೆಪಿಎಸ್‌ ಶಾಲೆಗಳಿಗೂ ಸುತ್ತಮುತ್ತಲ ಐದಾರು ಕಿ.ಮೀ. ವ್ಯಾಪ್ತಿಯ ಕನಿಷ್ಠ 5ರಿಂದ ಗರಿಷ್ಠ 10 ಶಾಲೆಗಳ ವಿಲೀನಕ್ಕೆ ಸದ್ದಿಲ್ಲದೆ ಪ್ರಕ್ರಿಯೆ ಆರಂಭವಾಗಿದೆ. ಇದರಿಂದ ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ಕನಿಷ್ಠ 5 ಸಾವಿರದಿಂದ ಗರಿಷ್ಠ 7 ಸಾವಿರ ಸರ್ಕಾರಿ ಶಾಲೆಗಳು ಈ ಕೆಪಿಎಸ್‌ ಶಾಲೆಗಳಲ್ಲಿ ವಿಲೀನವಾಗುವ ಮೂಲಕ ಬಂದ್‌ ಆಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಇದೇ ಮೊದಲಲ್ಲ:

ಹೌದು, ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಎಲ್ಲ ಶಾಲೆಗಳಿಗೂ ಅಗತ್ಯ ಶಿಕ್ಷಕರು, ಕಟ್ಟಡ, ಮೂಲಸೌಲಭ್ಯ ಒದಗಿಸಲು ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕೆ ಗ್ರಾ.ಪಂ. ಗೊಂದು ಕರ್ನಾಟಕ ಪಬ್ಲಿಕ್‌ ಶಾಲೆ ಆರಂಭಿಸಿ ಅಲ್ಲಿ ಎಲ್‌ಕೆಜಿಯಿಂದ 12ನೇ ತರಗತಿ ವರೆಗೂ ಒಂದೇ ಕಡೆ ಶಿಕ್ಷಣ ಒದಗಿಸಲು ಉದ್ದೇಶಿಸಲಾಗಿದೆ. ಅದರಂತೆ ಪ್ರತಿ ಕೆಪಿಎಸ್‌ ಶಾಲೆಗೂ ಸುತ್ತಮುತ್ತಲ ಐದರಿಂದ ಹತ್ತು ಶಾಲೆಗಳನ್ನು ವಿಲೀನಗೊಳಿಸಲು ನಿರ್ಧರಿಸಿದೆ. ಈಗಾಗಲೇ ರಾಜ್ಯದಲ್ಲಿ 307 ಕೆಪಿಎಸ್‌ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಶಾಲೆಗಳಿಗೆ ಸಾವಿರಾರು ಶಾಲೆಗಳನ್ನು ಹಿಂದೆ ಸರ್ಕಾರ ವಿಲೀನಗೊಳಿಸಿತ್ತು.

ಇದೀಗ ಇತ್ತೀಚೆಗೆ ಶಿಕ್ಷಣ ಇಲಾಖೆಯೇ ಹೊರಡಿಸಿರುವ ಆದೇಶದಲ್ಲಿ 2026-27ನೇ ಸಾಲಿನಿಂದ ರಾಜ್ಯದಲ್ಲಿ ಹೊಸದಾಗಿ 700 ಕೆಪಿಎಸ್‌ ಶಾಲೆಗಳನ್ನು (ಕಲ್ಯಾಣ ಕರ್ನಾಟದಲ್ಲಿ 200 ಕೆಪಿಎಸ್‌ ಸೇರಿ) ಆರಂಭಿಸಲು ಅನುಮೋದನೆ ನೀಡಿದೆ. ಇಲಾಖಾ ಅಧಿಕಾರಿಗಳು ಹೇಳುವ ಪ್ರಕಾರ, ಪ್ರತಿಯೊಂದು ಕೆಪಿಎಸ್‌ ಶಾಲೆಗೂ ಸುತ್ತಮುತ್ತಲ ಐದರಿಂದ ಹತ್ತು ಶಾಲೆಗಳನ್ನು ವಿಲೀನ ಮಾಡಲಾಗುತ್ತದೆ. ಶಾಲೆಗಳ ವಿಲೀನ ಪ್ರಕ್ರಿಯೆಯನ್ನು ಜಿಲ್ಲಾ ಡಿಡಿಪಿಐಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಸದ್ದಿಲ್ಲದೆ ಶುರು ಮಾಡಿಯಾಗಿದೆ.

ಪ್ರತಿ ವರ್ಷ 6000 ಶಿಕ್ಷಕರು ನಿವೃತ್ತಿ

60 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಇದೆ. ಪ್ರತೀ ವರ್ಷ 6 ಸಾವಿರ ಶಿಕ್ಷಕರು ನಿವೃತ್ತರಾಗುತ್ತಿದ್ದಾರೆ. ಆದರೆ, ಅಧಿಕಾರಕ್ಕೆ ಬಂದ ಸರ್ಕಾರಗಳು ಖಾಲಿ ಹುದ್ದೆ ಭರ್ತಿ ಮಾಡುವ ಗೋಜಿಗೇ ಹೋಗುತ್ತಿಲ್ಲ. ಮಕ್ಕಳು ಎಷ್ಟೇ ಇದ್ದರೂ ಕಾನೂನಾತ್ಮಕವಾಗಿ ಆ ಎಲ್ಲಾ ಶಾಲೆಗಳಿಗೂ ಕನಿಷ್ಠ ವಿಷಯಕ್ಕೊಬ್ಬ ಶಿಕ್ಷಕರನ್ನು ನೇಮಿಸಬೇಕು. ಅದಾಗದಿದ್ದರೆ ಕನಿಷ್ಠ ತರಗತಿಗೊಬ್ಬ ಶಿಕ್ಷಕರನ್ನಾದರೂ ನೇಮಕ ಮಾಡಲು ಶಿಕ್ಷಕರ ಸಂಘ ಆಗ್ರಹಿಸಿದೆ. ತರಗತಿಗೊಂದು ಕೊಠಡಿ, ಬೋಧನಾ ಸಾಮಗ್ರಿ, ಬಿಸಿಯೂಟ ಕೊಠಡಿ, ಸಿಬ್ಬಂದಿ, ಗ್ರಂಥಾಲಯ, ಶೌಚಾಲಯ ಸೇರಿ ಪ್ರತಿಯೊಂದು ಮೂಲಸೌಕರ್ಯವನ್ನೂ ಕೊಡಬೇಕು. ಈ ಎಲ್ಲಾ ಕಾರಣಗಳಿಂದ ಸರ್ಕಾರಿ ಶಾಲೆ ಮುಚ್ಚುವುದಿಲ್ಲ ಎಂದು ಹೇಳಿಕೊಂಡೇ ಅಧಿಕಾರಕ್ಕೆ ಬಂದ ಸರ್ಕಾರಗಳು ಒಂದಷ್ಟು ಶಾಲೆಗಳನ್ನು ವಿಲೀನದ ಹೆಸರಲ್ಲಿ ಬಂದ್‌ ಮಾಡುತ್ತಾ ಸಾಗುತ್ತಿವೆ. ಇದರ ಪರಿಣಾಮ 2010ರಲ್ಲಿ ರಾಜ್ಯದಲ್ಲಿದ್ದ 50 ಸಾವಿರ ಶಾಲೆಗಳ ಸಂಖ್ಯೆ ಈಗ 46 ಸಾವಿರಕ್ಕೆ ಇಳಿದಿದೆ.

ಈ ಆಘಾತಕಾರಿ ವಿಷಯವನ್ನು ಬಹುಶಃ ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಪಾಲಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಾರದೆ ಸಚಿವರೇ ಮಾಡಿರುವ ನಿರ್ಧಾರವಾಗಿರುವಂತೆ ಕಾಣುತ್ತದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿ ಅವರೇ ಜನತೆಗೆ ಉತ್ತರ ನೀಡಬೇಕು.

- ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ

ಮುಂದೆ 25000 ಶಾಲೆಗಳಿಗೆ ಕುತ್ತು?

ಶಿಕ್ಷಣ ಇಲಾಖೆ ನೀಡಿರುವ ಮಾಹಿತಿ ಪ್ರಕಾರ. ರಾಜ್ಯದಲ್ಲಿ ಸುಮಾರು 10ಕ್ಕಿಂತ ಕಡಿಮೆ ಮಕ್ಕಳಿರುವ 5,000 ಶಾಲೆಗಳೂ ಸೇರಿ 50ಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳ ಸಂಖ್ಯೆ 25 ಸಾವಿರಕ್ಕೂ ಹೆಚ್ಚಿದೆ. ವರ್ಷ ಪ್ರತಿ ಗ್ರಾ.ಪಂ.ಗೆ ಒಂದರಂತೆ ಹಂತ ಹಂತವಾಗಿ ಪ್ರತಿ ವರ್ಷ ಒಂದಷ್ಟು ಕೆಪಿಎಸ್‌ ಶಾಲೆಗಳನ್ನು ಆರಂಭಿಸಿ ಕಡಿಮೆ ಮಕ್ಕಳಿರುವ ಶಾಲೆಗಳನ್ನು ಆ ಶಾಲೆಗಳಲ್ಲಿ ವಿಲೀನ ಮಾಡುವ ಆಲೋಚನೆ ಸರ್ಕಾರದ್ದಾಗಿದೆ. ಈಗಾಗಲೇ ರಾಜ್ಯದ 46 ಸಾವಿರ ಸರ್ಕಾರಿ ಶಾಲೆಗಳಲ್ಲಿ ಒಟ್ಟಾರೆ 15 ವರ್ಷಗಳಲ್ಲಿ ಮಕ್ಕಳ ದಾಖಲಾತಿ ಪ್ರಮಾಣ ಶೇ.30ರಷ್ಟು ಕುಸಿದಿದೆ.

ಶಾಶ್ವತ ರಜೆ- ಡಿಡಿಪಿಐಗಳು, ಬಿಇಒಗಳಿಂದ ಸದ್ದಿಲ್ಲದೆ ಕೆಲಸ ಶುರು

ಸಾವಿರಾರು ಶಾಲೆ ವಿಲೀನ ಬೆನ್ನಲ್ಲೇ ಮತ್ತೊಂದು ಸುತ್ತಿನ ಕಸರತ್ತುಶಾಲೆಗಳನ್ನು ಬಂದ್‌ಮಾಡುತ್ತಿರುವುದೇಕೆ?1. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಎಲ್ಲ ಶಾಲೆಗೂ ಶಿಕ್ಷಕರು, ಕಟ್ಟಡ, ಮೂಲಸೌಕರ್ಯಗಳನ್ನು ಒದಗಿಸಲು ಆಗುತ್ತಿಲ್ಲ2. ಗ್ರಾ.ಪಂ.ಗೊಂದರಂತೆ ‘ಕರ್ನಾಟಕ ಪಬ್ಲಿಕ್‌ ಶಾಲೆ’ (ಕೆಪಿಎಸ್‌) ಆರಂಭಿಸಿ ಎಲ್‌ಕೆಜಿಯಿಂದ 12ನೇ ತರಗತಿವರೆಗೆ ರಾಜ್ಯ ಸರ್ಕಾರದಿಂದ ಶಿಕ್ಷಣ 3. ಈ ಕೆಪಿಎಸ್‌ ಶಾಲೆಗಳಿಗೆ ಸುತ್ತಲಿನ ಐದರಿಂದ 10 ಶಾಲೆಗಳನ್ನು ವಿಲೀನಗೊಳಿಸುವ ಪ್ರಕ್ರಿಯೆ ಆರಂಭಿಸಿರುವ ಸರ್ಕಾರ4. ರಾಜ್ಯದಲ್ಲಿ ಈಗಾಗಲೇ 307 ಕೆಪಿಎಸ್‌ ಶಾಲೆಗಳು ಕಾರ್ಯನಿರ್ವಹಣೆ. ಅವುಗಳಲ್ಲಿ ಸಹಸ್ರಾರು ಶಾಲೆಗಳು ಈ ಹಿಂದೆ ವಿಲೀನ5. ಇದೀಗ ಮುಂದಿನ ವರ್ಷ ಹೊಸದಾಗಿ 700 ಕೆಪಿಎಸ್‌ ಶಾಲೆ ಆರಂಭಿಸುತ್ತಿರುವ ಸರ್ಕಾರ. ಅದರಲ್ಲಿ ಸುತ್ತಲಿನ ಶಾಲೆಗಳು ವಿಲೀನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಮತ್ತೊಂದು ಲವ್ ಜಿಹಾದ್ ಕೇಸ್; ಇಸ್ಲಾಂಗೆ ಮತಾಂತರ ಆಗದಿದ್ರೆ ಹುಡುಗಿಯನ್ನ 32 ಪೀಸ್ ಮಾಡೋದಾಗಿ ಬೆದರಿಕೆ!
Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!