ಮೂಲ ಸಮಸ್ಯೆ ಹಿಡಿದು ಬರೆದದ್ದಕ್ಕೆ ನನ್ನ ಸಾಹಿತ್ಯ ಗಟ್ಟಿ: ಭೈರಪ್ಪ

By Web DeskFirst Published Jan 21, 2019, 11:09 AM IST
Highlights

ನನ್ನ ಪ್ರತಿ ಕಾದಂಬರಿಯಲ್ಲಿಯೂ ಅಪ್ರಜ್ಞಾಪೂರ್ವಕವಾಗಿ ಮೌಲ್ಯ ಮೀಮಾಂಸೆ ಇದೆ. ಜೀವನದ ಮೌಲ್ಯ ಮತ್ತು ಮೂಲ ಸಮಸ್ಯೆ ಇರುತ್ತದೆ. ನನ್ನ ಸಾಹಿತ್ಯದಲ್ಲಿ ಗಟ್ಟಿತನವಿದೆ ಮತ್ತು ಜನ ಓದುತ್ತಿದ್ದಾರೆ ಎಂದು ಖ್ಯಾತ ಕಾದಂಬರಿಕಾರ ಡಾ. ಎಸ್‌.ಎಲ್‌.ಭೈರಪ್ಪ ತಿಳಿಸಿದ್ದಾರೆ.

ಮೈಸೂರು :  ಸಮಾಜದಲ್ಲಿ ಎಂದೆಂದಿಗೂ ಜೀವಂತಿಕೆಯಾಗಿರುವ ಮೂಲ ಸಮಸ್ಯೆಗಳನ್ನು ಹಿಡಿದು ಕಾದಂಬರಿ ಬರೆದ ಕಾರಣಕ್ಕೆ ನನ್ನ ಸಾಹಿತ್ಯದಲ್ಲಿ ಗಟ್ಟಿತನವಿದೆ ಮತ್ತು ಜನ ಓದುತ್ತಿದ್ದಾರೆ. ನನಗೆ ಸ್ಲೋಗನ್‌ ಸಾಹಿತ್ಯ, ಚಳವಳಿ ಸಾಹಿತ್ಯದ ಮೇಲೆ ನಂಬಿಕೆ ಇಲ್ಲ ಎಂದು ಖ್ಯಾತ ಕಾದಂಬರಿಕಾರ ಡಾ. ಎಸ್‌.ಎಲ್‌.ಭೈರಪ್ಪ ತಿಳಿಸಿದ್ದಾರೆ.

ನಗರದ ಕಲಾಮಂದಿರದಲ್ಲಿ ಡಾ. ಎಸ್‌.ಎಲ್‌.ಭೈರಪ್ಪ ಸಾಹಿತ್ಯ ಪ್ರತಿಷ್ಠಾನವು ಆಯೋಜಿಸಿದ್ದ ಎರಡು ದಿನಗಳ ಸಾಹಿತ್ಯೋತ್ಸವದ ಸಮಾರೋಪದಲ್ಲಿ ಅವರು ಮಾತನಾಡಿ, ನನ್ನ ಪ್ರತಿ ಕಾದಂಬರಿಯಲ್ಲಿಯೂ ಅಪ್ರಜ್ಞಾಪೂರ್ವಕವಾಗಿ ಮೌಲ್ಯ ಮೀಮಾಂಸೆ ಇದೆ. ಜೀವನದ ಮೌಲ್ಯ ಮತ್ತು ಮೂಲ ಸಮಸ್ಯೆ ಇರುತ್ತದೆ ಎಂದರು.

ನಿಜವಾದ ಸಾಹಿತ್ಯದ ಸತ್ವ ಯಾವುದು? ಯಾವುದು ಎಲ್ಲಾ ಕಾಲಕ್ಕೂ ಅನ್ವಯಿಸುತ್ತದೆಯೋ ಅದನ್ನು ಹಿಡಿದು ಬರೆಯಬೇಕು. ಆ ಸಮಸ್ಯೆ, ರಸ ಅನುಭವಿಸಲು ಓದುತ್ತಿದ್ದಾರೆಯೇ ಹೊರತು, ಜೀವನ ಸಮಸ್ಯೆ ಪರಿಹರಿಸಿಕೊಳ್ಳಲು ಓದುತ್ತಿಲ್ಲ. ಯಾರ ಜೀವನದ ಸಮಸ್ಯೆಯನ್ನೂ ನಾನು ಪರಿಹರಿಸಿಲ್ಲ ಎಂದು ಹೇಳಿದರು.

ಚಳವಳಿಗಾರರು ನಿಮ್ಮ ಲೇಖನದಲ್ಲಿ ನೀತಿಯೇನಿದೆ? ಸಾಮಾಜಿಕ ಬದ್ಧತೆ ಇದೆಯೇ ಎಂದು ನಿರಾಕರಿಸುತ್ತಾರೆ. ನಮ್ಮ ದೇಶದಲ್ಲಿ ಸಾಹಿತಿಗಳನ್ನು ಆಕ್ರಮಿಸಿಕೊಂಡಿರುವುದು ಇಂತದ್ದೆ ಪಠ್ಯ. ಬರವಣಿಗೆ ಮೂಲಕ ಸಾಮಾಜಿಕ ಸೇವೆ ಮಾಡಬೇಕು. ಸಾಮಾಜಿಕ ಬದ್ಧತೆ ಎಲ್ಲದರಲ್ಲಿಯೂ ಇರಬೇಕು ಎಂಬುದು ಕಮ್ಯುನಿಸ್ಟ್‌ ಸಿದ್ಧಾಂತ. ಕರ್ನಾಟಕದಲ್ಲಿ ಅನಕೃ, ತರಾಸು, ನಿರಂಜನ, ಬಸವರಾಜ ಕಟ್ಟಿಮನಿ, ಮುಲಕರಾಜಾನಂದ್‌ ಮುಂತಾದವರು ಆರಂಭಿಸಿದರು. ಪಕ್ಕಾ ಕಮ್ಯುನಿಸ್ಟ್‌ ಆಗಿದ್ದು ನಿರಂಜನ ಒಬ್ಬರೇ. ಅನಕೃ ಕೂಡ ಒಂದು ಕಾದಂಬರಿ ಬರೆದರು, ಆದರೆ ಅವರು ಶೃಂಗೇರಿ ಮಠಕ್ಕೆ ಹೋಗುತ್ತಿದ್ದರು. ತರಾಸು ಬರೆಯುತ್ತಿದ್ದರು. ಮನೆಯಲ್ಲಿ ಎಷ್ಟೋ ಹೋಮ, ಹವನ ಮಾಡುತ್ತಿದ್ದರು ಎಂದು ತಿಳಿಸಿದರು.

ಇದಕ್ಕೆ ಮೊದಲು ನಡೆದ ಗೋಷ್ಠಿಗಳಲ್ಲಿ ರಾಜಸ್ಥಾನದ ಲೇಖಕ ನಂದಕಿಶೋರ್‌ ಆಚಾರ್ಯ, ಹಾಸ್ಯ ಮಾತುಗಾರ ಗಂಗಾವತಿ ಪ್ರಾಣೇಶ್‌ ಭೈರಪ್ಪರ ಸಾಹಿತ್ಯದ ವಿಶೇಷತೆಗಳ ಬಗ್ಗೆ ಉಪನ್ಯಾಸ ಮಾಡಿದರು.

click me!