ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

By Web DeskFirst Published Jan 21, 2019, 10:57 AM IST
Highlights

ಮಲ್ಪೆ ಮೀನುಗಾರರ ನಾಪತ್ತೆ ಪ್ರಕರಣ ಇದೀಗ ಹೊಸ ಟ್ವಿಸ್ಟ್ ಪಡೆದುಕೊಂಡಿದೆ. ಹಿಂದೆ ಅನುಮಾನಪಟ್ಟಂತೆ ಬೋಟಿಗೆ ಡಿಕ್ಕಿ ಹೊಡೆದಿದ್ದು ಪ್ರಯಾಣಿಕರ ಹಡಗಲ್ಲ, ಬದಲಾಗಿ ನೌಕಾಪಡೆಯ ಯುದ್ಧ ಹಡಗು ಎಂಬ ಹೊಸ ಮಾಹಿತಿ ಲಭ್ಯವಾಗಿದೆ.

ಉಡುಪಿ :  ಅರಬ್ಬಿ ಸಮುದ್ರದಲ್ಲಿ ಏಳು ಮಂದಿ ಮೀನುಗಾರರೊಂದಿಗೆ ನಾಪತ್ತೆಯಾಗಿರುವ ಮಲ್ಪೆ ಬಂದರಿನ ಸುವರ್ಣ ತ್ರಿಭುಜ ಮೀನುಗಾರಿಕಾ ಬೋಟು ಅಪಘಾತಕ್ಕೀಡಾಗಿ ಮುಳುಗಿದೆ ಎಂದೇ ಬಲವಾಗಿ ನಂಬಿರುವ ಅಧಿಕಾರಿಗಳು, ಈ ಕುರಿತು ಇನ್ನಷ್ಟುಮಾಹಿತಿ ಕಲೆಹಾಕುತ್ತಿದ್ದಾರೆ. ಆದರೆ ಈ ಹಿಂದೆ ಅನುಮಾನಪಟ್ಟಂತೆ ಬೋಟಿಗೆ ಡಿಕ್ಕಿ ಹೊಡೆದಿದ್ದು ಪ್ರಯಾಣಿಕರ ಹಡಗಲ್ಲ, ಬದಲಾಗಿ ನೌಕಾಪಡೆಯ ಯುದ್ಧ ಹಡಗು ಎಂಬ ಹೊಸ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ಈಗ ತನಿಖೆಯೂ ಆರಂಭವಾಗಿದೆ.

ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟು ಡಿ.15ರಂದು ಮಧ್ಯರಾತ್ರಿ 1 ಗಂಟೆಗೆ ಮಹಾರಾಷ್ಟ್ರದ ಸಿಂಧುದುರ್ಗಾ ಜಿಲ್ಲೆಯ ಸಮುದ್ರ ತೀರದಲ್ಲಿ ಮೀನುಗಾರರ ಸಹಿತ ಕಾಣೆಯಾಗಿತ್ತು. ಅದೇ ದಿನ ನೌಕಾಪಡೆಯ ಯುದ್ಧ ಹಡಗೊಂದು ಅದೇ ಮಾರ್ಗವಾಗಿ ಕಾರವಾರದಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿತ್ತು. ಸಮುದ್ರ ಮಧ್ಯೆ ಅದು ಯಾವುದೋ ಅಪಘಾತಕ್ಕೆ ಈಡಾಗಿದ್ದು, ಅದರ ತಳಭಾಗದಲ್ಲಿ ಹಾನಿಯಾಗಿದೆ. ಇದು ಸಮುದ್ರದಲ್ಲಿ ಲಂಗರು ಹಾಕಿದ್ದ ಸುವರ್ಣ ತ್ರಿಭುಜ ಬೋಟು ಡಿಕ್ಕಿ ಹೊಡೆದಿದ್ದರಿಂದ ಸಂಭವಿಸಿರುವ ಸಂಶಯ ಇದೆ ಎಂದು ಸ್ವತಃ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್‌ ಅವರು ಗುರುವಾರ ವಿಧಾನಸೌಧದಲ್ಲಿ ನಡೆದ ಮೀನುಗಾರರ ಸಭೆಯಲ್ಲಿ ತಿಳಿಸಿದ್ದಾರೆ.

ಇದಕ್ಕೆ ಪೂರಕವಾಗಿ ಡಿ.16ರಂದು ಮುಂಜಾನೆ ನೌಕಾಪಡೆ ಅಧಿಕಾರಿಗಳು ಸಿಂಧುದುರ್ಗಾ ಜಿಲ್ಲೆಯ ಸಮುದ್ರ ತೀರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮಹಾರಾಷ್ಟ್ರದ ಮೀನುಗಾರರಲ್ಲಿ ಇಲ್ಲಿ ಯಾವುದಾದರೂ ಅಪಘಾತ ನಡೆದಿದೆಯೇ ಎಂದು ವಿಚಾರಿಸಿದ್ದು, ಇದನ್ನು ಮೀನುಗಾರರು ಸಿಂಧುದುರ್ಗಾ ಪೊಲೀಸರಿಗೆ ತಿಳಿಸಿದ್ದಾರೆ.

ಆರಂಭದಲ್ಲಿ ಸುವರ್ಣ ತ್ರಿಭುಜ ಬೋಟಿಗೆ ಬೃಹತ್‌ ಹಡಗು ಡಿಕ್ಕಿಯಾಗಿದೆ, ಅದು ಪ್ರವಾಸಿ ಹಡಗು ಆಗಿರಬೇಕು ಎಂದು ಅಧಿಕಾರಿಗಳು ಹೇಳಿದ್ದರು. ಈ ಬಗ್ಗೆ ಬುಧವಾರವೇ ‘ಕನ್ನಡಪ್ರಭ’ ವರದಿ ಪ್ರಕಟಿಸಿತ್ತು. ಆದರೆ ಇದೀಗ ಆ ಹಡಗು ಬಹುತೇಕ ನೌಕಾಪಡೆಯ ಯುದ್ಧ ಹಡಗು ಎಂದು ಹೇಳಲಾಗುತ್ತಿದೆ.

ಇದರ ಜೊತೆಗೆ ಮೀನುಗಾರಿಕಾ ಬೋಟಿನಲ್ಲಿದ್ದ 7 ಮಂದಿ ಮೀನುಗಾರರೂ ಬೋಟಿನೊಂದಿಗೆ ಸಮುದ್ರ ಪಾಲಾಗಿರಬೇಕು ಎಂದು ಭಾವಿಸಲಾಗುತ್ತಿದೆ. ಆದರೆ ಇದಕ್ಕೆ ಇನ್ನೂ ಸೂಕ್ತ ಪುರಾವೆ ಸಿಕ್ಕಿಲ್ಲ, ಆದ್ದರಿಂದ ಅಧಿಕಾರಿಗಳಾಗಲಿ ಅಥವಾ ಸರ್ಕಾರವಾಗಲಿ ಇದನ್ನು ಖಚಿತವಾಗಿ ಮೀನುಗಾರರಿಗೆ ಹೇಳಲು ಸಾಧ್ಯವಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬೋಟು ಸಿಗುವರೆಗೆ ಹುಡುಕಾಟ:

ಇಂತಹ ಘಟನೆಗಳಲ್ಲಿ 3 ದಿನ (72 ಗಂಟೆಗೆ)ಗಳವರೆಗೆ ಮಾತ್ರ ಹುಡುಕಾಟ ನಡೆಸಲಾಗುತ್ತದೆ. ಅದರೊಳಗೆ ಮಾಹಿತಿ ಸಿಕ್ಕದಿದ್ದಲ್ಲಿ ಪತ್ತೆಯಾಗದ ಪ್ರಕರಣ ಎಂದು ಹುಡುಕಾಟವನ್ನು ನಿಲ್ಲಿಸಲಾಗುತ್ತದೆ. ಆದರೆ ಈ ಘಟನೆಯಲ್ಲಿ 15ಕ್ಕೂ ಹೆಚ್ಚು ದಿನಗಳಿಂದ ನೌಕಾಪಡೆ ಹುಡುಕಾಟ ನಡೆಸುತ್ತಿದೆ, ಇದಕ್ಕೆ ಕೇಂದ್ರ ರಕ್ಷಣಾ ಸಚಿವರ ಆದೇಶವೇ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಮುದ್ರದಲ್ಲಿ ಮುಳುಗಿದೆ ಎಂದೇ ಭಾವಿಸಲಾಗಿರುವ ಸುವರ್ಣ ತ್ರಿಭುಜ ಬೋಟಿಗಾಗಿ 5 ದಿನಗಳಿಂದ ನೌಕಾಪಡೆ ಸೋನಾರ್‌ ತಂತ್ರಜ್ಞಾನದ ಮೂಲಕ ಹುಡುಕಾಟ ನಡೆಸುತ್ತಿದ್ದು, ವಿಶಾಲವಾದ ಸಾಗರದಲ್ಲಿ ಹುಡುಕಾಟಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಆದರೆ ಫಲಿತಾಂಶ ಸಿಗುವವರೆಗೂ ಹುಡುಕಾಟ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವರದಿ :  ಸುಭಾಶ್ಚಂದ್ರ ಎಸ್‌. ವಾಗ್ಳೆ

click me!