ಪ್ರಿಯಾಂಕ್‌ ಖರ್ಗೆ ತವರು ಕ್ಷೇತ್ರ ಚಿತ್ತಾಪುರ ದಂಗಲ್‌ ಭವಿಷ್ಯ 30ಕ್ಕೆ

Kannadaprabha News   | Kannada Prabha
Published : Oct 25, 2025, 06:00 AM IST
Kalaburagi Court

ಸಾರಾಂಶ

ಸಚಿವ ಪ್ರಿಯಾಂಕ್‌ ಖರ್ಗೆ ತವರು ಕ್ಷೇತ್ರ ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನಕ್ಕೆ ಅನುಮತಿ ಕೋರಿ ಆರೆಸ್ಸೆಸ್‌ ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ಕೈಗೆತ್ತಿಕೊಂಡಿದ್ದ ಕಲಬುರಗಿ ಹೈಕೋರ್ಟ್‌ ಪೀಠ ವಿಚಾರಣೆಯನ್ನು ಅ.30ಕ್ಕೆ ಮುಂದೂಡಿದೆ.

ಕಲಬುರಗಿ : ಸಚಿವ ಪ್ರಿಯಾಂಕ್‌ ಖರ್ಗೆ ತವರು ಕ್ಷೇತ್ರ ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನಕ್ಕೆ ಅನುಮತಿ ಕೋರಿ ಆರೆಸ್ಸೆಸ್‌ ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ಕೈಗೆತ್ತಿಕೊಂಡಿದ್ದ ಕಲಬುರಗಿ ಹೈಕೋರ್ಟ್‌ ಪೀಠ ವಿಚಾರಣೆಯನ್ನು ಅ.30ಕ್ಕೆ ಮುಂದೂಡಿದೆ.

ನ.2ರಂದೇ ಚಿತ್ತಾಪುರದಲ್ಲಿ ಪಥ ಸಂಚಲನ ಮಾಡುತ್ತೇವೆಂದು ಕೋರಿರುವ, ಹೇಳಿಕೆ ಕೊಟ್ಟಿರುವ ಸಂಘಟನೆಗಳೊಂದಿಗೆ, ನಾಗರಿಕರೊಂದಿಗೆ ಅ.28ಕ್ಕೆ ಶಾಂತಿ ಸಭೆ ನಡೆಸಿ ವರದಿ ಸಲ್ಲಿಸಲಿ. ಅ.30ರಂದು ವಿಚಾರಣೆ ನಡೆಸೋಣ. ಎಲ್ಲವೂ ಸರಿ ಎಂದು ಕಂಡು ಬಂದಲ್ಲಿ ನ.2ರಂದು ಚಿತ್ತಾಪುರದಲ್ಲಿ ಆರೆಸ್ಸೆಸ್‌ ಪಥಸಂಚಲನ ನಡೆಸಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಚಿತ್ತಾಪುರದಲ್ಲಿ ಕಳೆದ ಅ.19ರಂದು ಆರೆಸ್ಸೆಸ್‌ ಸಂಘ ಶತಾಬ್ದಿ ಪಥಸಂಚಲನ ನಡೆಸಲು ಅನುಮತಿ ನಿರಾಕರಿಸಿದ್ದ ಅಲ್ಲಿನ ತಹಸೀಲ್ದಾರ್‌ ಕ್ರಮವನ್ನು ಆಕ್ಷೇಪಿಸಿ ಆರೆಸ್ಸೆಸ್‌ನ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್‌ ಪಾಟೀಲ್‌ ಸಲ್ಲಿಸಿರುವ ಅರ್ಜಿಯನ್ನು ಶುಕ್ರವಾರ ಹೈಕೋರ್ಟ್‌ ಕಲಬುರಗಿ ಪೀಠದ ನ್ಯಾಯಮೂರ್ತಿ ಎಂಜಿಎಸ್ ಕಮಲ ವಿಚಾರಣೆ ನಡೆಸಿದರು.

ಪಥ ಸಂಚಲನ ಮಾಡುತ್ತೇವೆ, ರಕ್ಷಣೆ ಕೊಡಿ- ಆರೆಸ್ಸೆಸ್‌:

ಆರ್‌ಎಸ್‌ಎಸ್‌ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು ಅರ್ಜಿದಾರರ ಪರವಾಗಿ ಬೆಂಗಳೂರಿನಿಂದಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ವಾದ ಮಂಡಿಸಿ ಹೆಚ್ಚಿನ ಸಮಯಾವಕಾಶ ನೀಡುವುದು ಬೇಡ. ನಮ್ಮ ಅರ್ಜಿದಾರರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದರು.

ಕಲಬುರಗಿ ಹೈಕೋರ್ಟ್‌ ಪೀಠದ ನ್ಯಾಯಾಲಯದ ನಿರ್ದೇಶನದಂತೆ ನಾವು ಮನವಿ ಸಲ್ಲಿಸಿದ್ದೇವೆ. ನ.2ಕ್ಕೆ ಪಥ ಸಂಚಲನಕ್ಕೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ. ಈಗಾಗಲೇ ವಿಳಂಬವಾಗಿದ್ದು, ದಿನಕ್ಕೊಂದು ಸಂಘಟನೆಗಳು ಬರುತ್ತಿವೆ. ನ.2ರಂದು ಮೆರವಣಿಗೆ ನಡೆಸಲು ಒಪ್ಪಿಕೊಂಡಿದ್ದೇವೆ. ದಿನಕ್ಕೊಂದು ಹೇಳಿಕೆ ನೀಡುವವರು ಸಮಸ್ಯೆ ಹುಟ್ಟು ಹಾಕುತ್ತಿದ್ದಾರೆ. ಸಮಸ್ಯೆಯನ್ನು ಅವರು ಸೃಷ್ಟಿಸುತ್ತಿದ್ದಾರೆ. ಇತರ ಸಂಘಟನೆಗಳು ನ.2ರಂದೇ ಮೆರವಣಿಗೆ ನಡೆಸುವ ಮೂಲಕ ನಮ್ಮ ಮಾರ್ಗ ಮೆರವಣಿಗೆಯನ್ನು ತಡೆಯಲು ಯತ್ನಿಸುತ್ತಿವೆ ಎಂದು ಅರ್ಜಿದಾರರ ಪರ ವಕೀಲ ಅರುಣ ಶ್ಯಾಮ್‌ ಹೇಳಿದರು.

ನಾವು ನಮ್ಮ ಕಾರ್ಯಕ್ರಮವನ್ನು ಮುಂದುವರಿಸುತ್ತೇವೆ. ತಕ್ಕ ರಕ್ಷಣೆಯನ್ನು ನೀಡಲಿ ಮತ್ತು ಇತರ ಸಂಘಟನೆಗಳು ಬೇರೆ ದಿನ ಪ್ರತಿಭಟನೆ ನಡೆಸಲಿ ಎಂದು ಅರುಣ ಶ್ಯಾಮ್‌ ಕೋರ್ಟ್‌ಗೆ ವಿನಂತಿ ಮಾಡಿಕೊಂಡರು.

ಸಮಯ ಕೊಡಿ- ಅಡ್ವೋಕೇಟ್‌ ಜನರಲ್‌:

ಸರ್ಕಾರದ ಪರ ಅಡ್ವೋಕೆಟ್‌ ಜನರಲ್‌ ಶಶಿಕಿರಣ ಶೆಟ್ಟಿ ವಾದ ಮಂಡಿಸಿ, ಇಡೀ ರಾಜ್ಯದಲ್ಲಿ 250ಕ್ಕೂ ಅಧಿಕ ಪಥ ಸಂಚಲನ ಸುಗಮವಾಗಿ ನಡೆದಿವೆ. ಚಿತ್ತಾಪುರದಲ್ಲಿನ ಸಮಸ್ಯೆ ಬೇರೆ ಇದೆ. ಅ ಶಾಂತಿ ಸುವ್ಯವಸ್ಥೆ ಹಿನ್ನೆಲೆಯಲ್ಲಿ ಇನ್ನಷ್ಟು ಸಮಯ ನೀಡಬೇಕು ಎಂದು ಕೋರಿದರು.

ನಾವು ಯಾವ ಅರ್ಜಿಗಳನ್ನೂ ತಿರಸ್ಕರಿಸಿಲ್ಲ, ಬಹಳಷ್ಟು ಸಂಘಟನೆಗಳು ನ.2ರಂದೇ ಪಥಸಂಚಲನಕ್ಕೆ ಮತ್ತು ಪ್ರತಿಭಟನೆಗೆ ಅರ್ಜಿ ಸಲ್ಲಿಸಿವೆ. ಎಲ್ಲಾ ಸಂಘಟನೆಗಳನ್ನು ಕರೆದು ಜಿಲ್ಲಾಡಳಿತ ಶಾಂತಿಸಭೆ ನಡೆಸಿದೆ. ರಾಜ್ಯದ ಎಲ್ಲಿಯೂ ಸಮಸ್ಯೆ ಆಗಿಲ್ಲ, ಆದರೆ ಚಿತ್ತಾಪುರದಲ್ಲಿ ಮಾತ್ರ ಆಗಿದೆ. ಕಾನೂನು- ಸುವ್ಯವಸ್ಥೆಗೆ ಭಂಗ ಬರಬಹುದಾದಂತಹ ಸ್ವರೂಪ ಅಲ್ಲಿ ಕಂಡಿದ್ದರಿಂದ ಬಂದೋಬಸ್ತ್‌ಗಾಗಿ ಎರಡು ವಾರ ಸಮಯಾವಕಾಶ ಬೇಕೆಂದು ಹೇಳಿದರು. ಆದರೆ ಸರ್ಕಾರಿ ಅಭಿಯೋಜಕರ ವಾದಕ್ಕೆ ಆರೆಸ್ಸೆಸ್‌ ಪರ ವಕೀಲ ಅರುಣ್ ಶ್ಯಾಮ್ ಆಕ್ಷೇಪ ವ್ಯಕ್ತಪಡಿಸಿದರು.

ಇವರಿಬ್ಬರ ವಾದ- ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಕಮಲ್‌ ಅವರು, ಅ.28ಕ್ಕೆ ಶಾಂತಿ ಸಭೆ ನಡೆಸಿ, ಅದನ್ನು ಜಿಲ್ಲಾ ಕೇಂದ್ರದಲ್ಲೇ ನಡೆಸಿರಿ, ಆಕ್ಷೇಪಣೆ ಸಲ್ಲಿಸಿರುವ ಎಲ್ಲಾ ಸಂಘಟನೆಗಳು, ನಾಗರಿಕರಿಗೆ ಕರೆದು ಸಭೆ ನಡೆಸಿ ವರದಿ ತನ್ನಿ ಎಂದು ಸೂಚಿಸಿ ಅ.30ಕ್ಕೆ ವಿಚಾರಣೆ ಮುಂದೂಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!