
ವಿಧಾನಸಭೆ (ಫೆ.5): ಕೇಂದ್ರ ಸರ್ಕಾರದ ‘ವಿಬಿ ಜಿ ರಾಮ್ ಜಿ ಕಾಯ್ದೆ’ ದೇಶದ ಒಕ್ಕೂಟ ವ್ಯವಸ್ಥೆ ಹಾಗೂ ಸಂವಿಧಾನ ವಿರೋಧಿಯಾಗಿದೆ. ರಾಜ್ಯಗಳ ಮೇಲಿನ ಆರ್ಥಿಕ ಭಯೋತ್ಪಾದನೆ ಹಾಗೂ ತೆರಿಗೆ ಭಯೋತ್ಪಾದನೆಯ ಸಂಚಾಗಿದೆ. ಹೀಗಾಗಿ ಈ ಕಾಯ್ದೆ ಹಿಂಪಡೆದು ಮನರೇಗಾ ಕಾಯ್ದೆ ಪುನರ್ ಸ್ಥಾಪಿಸಬೇಕು ಎಂದು ಆರ್‌ಡಿಪಿಆರ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದರು.
ವಿರೋಧ ಪಕ್ಷಗಳ ಧರಣಿ ಹಾಗೂ ತೀವ್ರ ಗದ್ದಲ ನಡುವೆ ವಿಬಿ ಜಿ ರಾಮ್ ಜಿ ಕಾಯ್ದೆ ವಿರುದ್ಧ ರಾಜ್ಯ ಸರ್ಕಾರದ ನಿರ್ಣಯ ಸಮರ್ಥಿಸಿ ಮಾತನಾಡಿದರು. ಈ ಕಾಯ್ದೆ ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದೆ. ಗ್ರಾಮ ಪಂಚಾಯಿತಿಗಳ ಅಧಿಕಾರ ಮೊಟಕುಗೊಳಿಸಲಿದೆ. ಗ್ರಾಮೀಣ ಜನರ ಉದ್ಯೋಗ ಹಕ್ಕು ಕಸಿದುಕೊಳ್ಳಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತರರು, ಮಹಿಳೆಯರಿಗೆ ಉದ್ಯೋಗದ ಹಕ್ಕನ್ನು ವಂಚಿಸಲಿದೆ ಎಂದು ಸದನದ ಗಮನ ಸೆಳೆದರು.
ಕೇಂದ್ರ ಸರ್ಕಾರವು ಈ ಕಾಯ್ದೆಯನ್ನು ಹಿಂಪಡೆಯದಿದ್ದಲ್ಲಿ ಜನ ಬೀದಿಗಿಳಿದು ಹೋರಾಟ ಮಾಡಲಿದ್ದಾರೆ. ಕೃಷಿ ಕಾಯ್ದೆ ವಿರೋಧಿ ಹೋರಾಟದ ಮಾದರಿಯಲ್ಲಿ ಜನಪರ ಹೋರಾಟ ಮಾಡುತ್ತೇವೆ. ಮನರೇಗಾ ಕಾಯ್ದೆ ಪುನರ್ ಸ್ಥಾಪನೆವರೆಗೂ ನಮ್ಮ ಹೋರಾಟ ಇರಲಿದೆ ಎಂದು ಹೇಳಿದರು.
ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮನರೇಗಾ ಯೋಜನೆ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಹಕ್ಕು ನೀಡುವುದರ ಜೊತೆಗೆ ಘನತೆಯಿಂದ ಬದುಕುವ ಗ್ಯಾರಂಟಿ ಕೊಟ್ಟಿತ್ತು. ಈ ಯೋಜನೆ ಜಗತ್ತಿನಲ್ಲಿ ಅತಿದೊಡ್ಡ ಹಕ್ಕು ಆಧಾರಿತ ಯೋಜನೆ ಎಂದು ಮೆಚ್ಚುಗೆ ಪಡೆದಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಹಲವು ಮಂತ್ರಿಗಳು ಈ ಯೋಜನೆ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚು ಮಾತನಾಡಿದ್ದಾರೆ. ಸ್ವತಃ ಪ್ರಧಾನಿ ಮೋದಿ ಈ ಯೋಜನೆಯನ್ನು ನ್ಯಾಷನಲ್ ಪ್ರೈಡ್ ಎಂದಿದ್ದರು ಎಂದು ಸದನ ಗಮನ ಸೆಳೆದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ