ಪುನೀತ್ ಕೆರೆಹಳ್ಳಿ ಮಾಡಿದ್ದು ಅಪರಾಧವೋ ಅಥವಾ ಸರ್ಕಾರದ ಕೆಲಸವೋ? ಅಕ್ರಮ ವಲಸಿಗರ ವಿಚಾರದಲ್ಲಿ ಪೊಲೀಸರಿಗೆ ಹೈಕೋರ್ಟ್ ತಪರಾಕಿ!

Kannadaprabha News, Ravi Janekal |   | Kannada Prabha
Published : Feb 05, 2026, 08:12 AM IST
Illegal Migrants: HC pulls up Cops; asks if Puneet Kerehalli did their job!

ಸಾರಾಂಶ

ಬೆಂಗಳೂರಿನಲ್ಲಿ ಸುಮಾರು 20 ಲಕ್ಷ ಅಕ್ರಮ ವಲಸಿಗರು ನೆಲೆಸಿದ್ದು, ಅವರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಈ ವಲಸಿಗರನ್ನು ಪತ್ತೆಹಚ್ಚಿ ಗಡಿಪಾರು ಮಾಡಲು ಕೈಗೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಬೆಂಗಳೂರು (ಫೆ.5): ಅಕ್ರಮ ವಲಸಿಗರಿಂದ ದೇಶದ ಭದ್ರತೆ ಅಪಾಯವಿದೆ ಎಂದು ಪುನರುಚ್ಚರಿಸಿರುವ ಹೈಕೋರ್ಟ್‌, ರಾಜ್ಯ ಸರ್ಕಾರದ ಅಂದಾಜಿನ ಪ್ರಕಾರ ಬೆಂಗಳೂರಿನಲ್ಲಿ ಸುಮಾರು 20 ಲಕ್ಷ ಅಕ್ರಮ ವಲಸಿಗರು ನೆಲೆಸಿದ್ದಾರೆ. ಈ ಅಕ್ರಮ ವಲಸಿಗರನ್ನು ಪತ್ತೆ ಮಾಡಲು ಮತ್ತು ದೇಶದಿಂದ ಹೊರಹಾಕಲು ಕೈಗೊಂಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಸರ್ಕಾರ ನಿರ್ದೇಶಿಸಿದೆ.

ಬಾಂಗ್ಲಾ ಅಕ್ರಮ ವಲಸಿಗರಿಗೆ ಸಂಬಂಧಿಸಿ ಹೋರಾಟ ಮಾಡಿದ ಸಂಬಂಧ ಬೆಂಗಳೂರಿನ ಸೋಲದೇವನಹಳ್ಳಿ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ರದ್ದುಪಡಿಸುವಂತೆ ಕೋರಿ ಪುನೀತ್‌ ಕೆರೆಹಳ್ಳಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಸೂಚನೆ ನೀಡಿದೆ. ಅಲ್ಲದೆ, ಪುನೀತ್‌ ಕೆರೆಹಳ್ಳಿ ವಿರುದ್ಧದ ಎಫ್‌ಐಆರ್‌ಗಳಿಗೆ ತಡೆಯಾಜ್ಞೆ ನೀಡಿ ವಿಚಾರಣೆ ಮುಂದೂಡಿತು.

ಇದಕ್ಕೂ ಮುನ್ನ ವಿಚಾರಣೆ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಎಫ್‌ಆರ್‌ಆರ್‌ಒನಲ್ಲಿ ನೋಂದಣಿ ಮಾಡಿಸದ ಜನರನ್ನು ಪತ್ತೆ ಮಾಡುವುದು ರಾಜ್ಯ ಸರ್ಕಾರದ ಕೆಲಸ. ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಪುನೀತ್‌ ತೋರಿಸಿದ್ದಾರೆ. ಅದಕ್ಕೆ ನೀವು ಅವರ ವಿರುದ್ಧ ಪ್ರಕರಣ ದಾಖಲಿಸಿದರೆ ಹೇಗೆ? ವಿದೇಶದಿಂದ ಬಂದಿರುವವರು ಬೆಂಗಳೂರಿನ ಎಲ್ಲ ಕಡೆ ನೆಲೆಸಿದ್ದಾರೆ. ಯಾರ ಬಳಿಯೂ ವೀಸಾ, ಪರ್ಮಿಟ್‌ ಇಲ್ಲ. ಅದಾಗ್ಯೂ ಅವರು ಇಲ್ಲಿ ನೆಲೆಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಪುನೀತ್‌ ಅದನ್ನು ತೋರಿಸಿದ್ದಕ್ಕೆ ನಿಮಗೆ ಸಮಸ್ಯೆಯೇ? ಎಂದು ಸರ್ಕಾರಕ್ಕೆ ಚಾಟಿ ಬೀಸಿತು.

ರಾಜ್ಯ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಬಿ.ಎನ್‌. ಜಗದೀಶ್‌ ಉತ್ತರಿಸಿ, ಪುನೀತ್‌ ದಾಖಲೆ ತೋರಿಸಲಿ. ಆದರೆ, ಅಕ್ರಮ ವಲಸಿಗರನ್ನು ಗುರುತಿಸಲು ವಿಧಾನವಿದೆ. ಪುನೀತ್‌ ನೇರವಾಗಿ ಅಲ್ಲಿಗೆ ಹೋಗಿ ಹಲ್ಲೆ ನಡೆಸಲಾಗದು. ಅಕ್ರಮ ವಲಸಿಗರನ್ನು ಬಂಧನದಲ್ಲಿಡಲಾಗಿದೆ. ದೇಶದಿಂದ ಹೊರಗೆ ಕಳುಹಿಸುವುದರ ಕುರಿತು ಎಫ್‌ಆರ್‌ಆರ್‌ಒ ಕ್ರಮಕೈಗೊಳ್ಳಬೇಕು. ಬಾಂಗ್ಲಾದೇಶದ ವಲಸಿಗರ ಕುರಿತು ಎಫ್‌ಆರ್‌ಆರ್‌ಒಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿತು.

ಅದಕ್ಕೆ ನ್ಯಾಯಪೀಠ, ಅಕ್ರಮ ವಲಸಿಗರನ್ನು ಪತ್ತೆ ಮಾಡುವುದು ಸರ್ಕಾರದ ಕೆಲಸ. ಪುನೀತ್‌ ಅದನ್ನು ಬಿಂಬಿಸಿದ್ದಾರೆ ಅಷ್ಟೆ. ತನಿಖೆ ನಡೆಸಿ, ಸರ್ಕಾರ ಪ್ರಕರಣ ದಾಖಲಿಸಬೇಕು. ಪುನೀತ್‌ ಅಲ್ಲಿ ಹಲ್ಲೆ ನಡೆಸಿಲ್ಲ, ಅದನ್ನು ಬಿಂಬಿಸಿದ್ದಾರೆ ಅಷ್ಟೆ. ಅಕ್ರಮ ವಲಸಿಗರು ಎಲ್ಲಾ ಕಡೆ ಇದ್ದಾರೆ. ಒಂದು ದೇಶ ಅಥವಾ ಇನ್ನೊಂದು ದೇಶದ ಬಗ್ಗೆ ಮಾತನಾಡುತ್ತಿಲ್ಲ. ಅಕ್ರಮವಾಗಿ ನೆಲೆಸಿರುವ ವಿದೇಶಿಯರ ವಿರುದ್ಧ ಸರ್ಕಾರ ಏನಾದರೂ ಕ್ರಮಕೈಗೊಂಡಿದೆಯೇ? ಅವರನ್ನು ಯಾವಾಗ ದೇಶದಿಂದ ಹೊರಗೆ ಕಳುಹಿಸಲಾಗಿದೆ? ಅವಧಿ ಮೀರಿ ಬೆಂಗಳೂರಿನಲ್ಲಿ ನೆಲೆಸಿರುವ ವಿದೇಶಿಗರ ವಿರುದ್ಧ ಸರ್ಕಾರ ಯಾವ ಕ್ರಮಕೈಗೊಂಡಿದೆ ಎಂದು ಪ್ರಶ್ನಿಸಿ, ಈ ಕುರಿತು ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

State News Live: ಪುನೀತ್ ಕೆರೆಹಳ್ಳಿ ಮಾಡಿದ್ದು ಅಪರಾಧವೋ ಅಥವಾ ಸರ್ಕಾರದ ಕೆಲಸವೋ? ಅಕ್ರಮ ವಲಸಿಗರ ವಿಚಾರದಲ್ಲಿ ಪೊಲೀಸರಿಗೆ ಹೈಕೋರ್ಟ್ ತಪರಾಕಿ!
ಬೆಂಗಳೂರಿಂದ ಪುಣೆಗೆ ಹೊಸ ಹೈಸ್ಪೀಡ್‌ ರೈಲು ಘೋಷಣೆ?