
ಕಲಬುರಗಿ(ಡಿ.6): ಹಣದ ವ್ಯವಹಾರವೇ ಇಲ್ಲದ ಮನಿ ಲ್ಯಾಂಡರಿಂಗ್ ಕೇಸ್ ಇದು, ಇದೆಲ್ಲಾ ಬಿಜೆಪಿಯವರ ಹೆದರಿಸೋ ಬೆದರಿಸೋ ತಂತ್ರಗಾರಿಕೆ ಅಷ್ಟೇ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರದ ವಿರುದ್ಧ ಕಿಡಿಕಾರಿದರು
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಸಹೋದರರಿಗೆ (DK Borthers) ಇತ್ತೀಚೆಗೆ ನೋಟಿಸ್ ನೀಡಿದ ವಿಚಾರದ ಬಗ್ಗೆ ಕಲಬುರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ಅವರು, ಈ ಪ್ರಕರಣ 'ವಿಶ್ವದಲ್ಲೇ ವಿಶಿಷ್ಟ ಪ್ರಕರಣ' ಎಂದು ವ್ಯಂಗ್ಯವಾಡಿದರು.
ನ್ಯಾಷನಲ್ ಹೆರಾಲ್ಡ್ ಆಗಿರಬಹುದು, ಯಂಗ್ ಇಂಡಿಯಾ ಆಗಿರಬಹುದು. ಏಳೆಂಟು ವರ್ಷ ಆಯ್ತು ಈ ಪ್ರಕರಣಕ್ಕೆ. ದುಡ್ಡು ಎಲ್ಲಿಂದ ಬಂತು? ಎಷ್ಟು ಬಂತು? ಯಾರಿಂದ ಬಂತು? ಯಾರಿಗೆ ಹೋಯ್ತು ಅಂತ ಏನಾದರೂ ಇದೆಯಾ? ಎಂದು ಪ್ರಶ್ನಿಸಿದರು. ಭಾರತದ ಇತಿಹಾಸದಲ್ಲಿಯೇ ಹಣದ ವ್ಯವಹಾರವೇ ಇಲ್ಲದ ಮನಿ ಲ್ಯಾಂಡ್ರಿಂಗ್ ಪ್ರಕರಣ ಅಂದರೆ ಇದೊಂದೇ. ಇದೆಲ್ಲಾ ಬಿಜೆಪಿಯವರ ಹೆದರಿಸೋ, ಬೆದರಿಸೋ ತಂತ್ರಗಾರಿಕೆ ಅಷ್ಟೇ, ಎಂದರು.
ಯಂಗ್ ಇಂಡಿಯಾ ಸಂಸ್ಥೆಯ ಟ್ರಸ್ಟಿಯಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಈ ಪ್ರಕರಣದಲ್ಲಿ ಎಳೆದು ತರುತ್ತಿರುವುದನ್ನು ತೀವ್ರವಾಗಿ ಖಂಡಿಸಿದ ಸಚಿವರು, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗ ಅವರಿಗೂ ಯಂಗ್ ಇಂಡಿಯಾಗೂ ಏನ್ರಿ ಸಂಬಂಧ? ಖರ್ಗೆ ಸಾಹೇಬರು ಎಐಸಿಸಿ ಅಧ್ಯಕ್ಷರಾಗಿದ್ದೇ ಕೇವಲ ಮೂರು ವರ್ಷದ ಹಿಂದೆ. ಈಗ ಅವರು ಟ್ರಸ್ಟಿಯಾಗಿದ್ದಾರೆ. ಅವರನ್ನೂ ಕರೆದು ಕೂರಿಸುತ್ತಾರಲ್ಲಾ, ಏಕೆ? ಎಂದು ಪ್ರಶ್ನಿಸಿದರು. ಮುಂದುವರಿದು, ಇವುಗಳಿಂದ ನಾವು ಶೇಕ್ ಆಗುವುದಿಲ್ಲ. ನಾನು ಕೇಳುವ ಪ್ರಶ್ನೆಗೆ ಅವರು ಶೇಕ್ ಆಗುತ್ತಿದ್ದಾರೆ. ಹಾಗಾಗಿಯೇ ಮೋಹನ್ ಭಾಗವತ್ ಅವರೇ ಬಂದು ನನಗೆ ಉತ್ತರ ಕೊಡುತ್ತಿದ್ದಾರೆ ವ್ಯಂಗ್ಯವಾಡಿದರು.
ಬಿಜೆಪಿಯ ಡಬಲ್ ಸ್ಟ್ಯಾಂಡರ್ಡ್ ನೀತಿಯನ್ನು ತೀವ್ರವಾಗಿ ಟೀಕಿಸಿದ ಸಚಿವ ಪ್ರಿಯಾಂಕ್ ಖರ್ಗೆ, ಬೇರೆ ಕಡೆ ಇದ್ದಾಗ ಎಲ್ಲರೂ ದುಷ್ಟರೆ, ಎಲ್ಲರೂ ಭ್ರಷ್ಟರೇ. ಅದೇ ವ್ಯಕ್ತಿಗಳು ಬಿಜೆಪಿಗೆ ಬಂದರೆ ಸಂಪೂರ್ಣವಾಗಿ ವೈಟ್‌ವಾಶ್ ಆಗಿ ಬಿಡುತ್ತಾರೆ. ಅಜಿತ್ ಪವಾರ್ ಅವರನ್ನು 'ಅತಿ ಭ್ರಷ್ಟ ರಾಜಕಾರಣಿ' ಎಂದು ಕರೆದಿದ್ದು ಇದೇ ಬಿಜೆಪಿಯವರು, ಈಗೇನಾಯಿತು? ಇನ್ನು ಹೇಮಂತ ಶರ್ಮಾ ಬಿಸ್ವಾಸ್ ಅವರನ್ನು 'ಮೋಸ್ಟ್ ಕರಪ್ಟ್ ಮ್ಯಾನ್ ಇನ್ ದಿ ವರ್ಲ್ಡ್' ಎಂದು ಹೇಳಿದ್ದು ಬಿಜೆಪಿಯವರೇ, ಈಗ ಅವರೇ ಬಿಜೆಪಿ ಮುಖ್ಯಮಂತ್ರಿಯಾಗಿದ್ದಾರೆ. ಅಜಿತ್ ಪವಾರ್ ಅವರ ಮಗ 1200 ಕೋಟಿ ರೂ. ಹಗರಣ ಮಾಡಿರುವ ಬಗ್ಗೆ ಯಾಕೆ ಬಿಜೆಪಿಯವರು ಚಕಾರ ಎತ್ತುತ್ತಿಲ್ಲ? ಇದೆಲ್ಲವೂ ರಾಜಕೀಯ ಪ್ರೇರಿತ ಎಂದು ಅವರು ಸ್ಪಷ್ಟಪಡಿಸಿದರು.
ರಾಬರ್ಟ್ ವಾದ್ರಾ ಕೇಸ್ ಏನಾಯ್ತು?'
'ದೇಶದಲ್ಲಿ ಆರ್ಥಿಕ ವ್ಯವಸ್ಥೆ ಯಾವಾಗ ಸಂಪೂರ್ಣವಾಗಿ ಕುಸಿದು ಹೋಗುತ್ತದೆಯೋ, ಯಾವಾಗ ಮೋದಿಯವರಿಗೆ ಉತ್ತರ ಕೊಡಲು ಆಗುವುದಿಲ್ಲವೋ, ಆ ಸಂದರ್ಭದಲ್ಲಿ ವಿರೋಧ ಪಕ್ಷಗಳ ಮೇಲೆ ಈ ರೀತಿ ದಾಳಿ ಮಾಡುತ್ತಾರೆ ಎಂದು ಆರೋಪಿಸಿದ ಪ್ರಿಯಾಂಕ್ ಖರ್ಗೆ ಅವರು, ಹತ್ತು ವರ್ಷಗಳ ಹಿಂದೆ ರಾಬರ್ಟ್ ವಾದ್ರಾ ಅವರ ವಿರುದ್ಧ ಏನೇನು ಹೇಳಿದ್ದರು? ಕಳೆದ ಹತ್ತು ವರ್ಷಗಳಿಂದ ಇವರೇ ಅಧಿಕಾರದಲ್ಲಿದ್ದಾರಲ್ಲವೇ? ಆ ಕೇಸ್ ಏನಾಯಿತು? ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಎಲ್ಲರ ಮೇಲೂ ಕೇಸು ಹಾಕಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಜೈಲಿಗೆ ಕಳಿಸಿದ್ದೂ ಆಯ್ತು, ಆದರೆ ಮುಂದೇನಾಯ್ತು? ಎಂದು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣ ರೀತಿ RSS ವಿರುದ್ಧ ಏಕಿಲ್ಲ?
ನ್ಯಾಷನಲ್ ಹೆರಾಲ್ಡ್ ಪ್ರಕರಣಗಳ ರೀತಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ವಿರುದ್ಧ ಯಾಕೆ ಕೇಸ್ ಇಲ್ಲ ಎಂದು ನೇರವಾಗಿ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ ಅವರು ಇಲ್ಲಿವರೆಗೆ ಅವರ ಆದಾಯ ಏನು ಅನ್ನುವುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಅವರಿಗೆ ಏಕೆ ಐಟಿ (IT) ಇಲ್ಲ? ಗುರುದಕ್ಷಿಣೆ ತಗೋತೀವಿ ಅಂತ ಹೇಳ್ತಾರೆ, ಹಾಗಾದ್ರೆ ಅವರ ಗುರು ಯಾರು? ಧ್ವಜದ ಮೇಲೆ ಅವರು ದುಡ್ಡು ತೆಗೆದುಕೊಳ್ಳುತ್ತಿದ್ದಾರೆ. 330 ಸಾವಿರ ಡಾಲರ್ ಅನ್ನು RSS ನವರು ಅಮೆರಿಕಾದಲ್ಲಿ ಇಟ್ಟಿದ್ದಾರೆ, ಇಷ್ಟು ದುಡ್ಡು ಅವರಿಗೆ ಎಲ್ಲಿಂದ ಬಂತು? ಎಂದು ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ