
ಬೆಂಗಳೂರು (ಅ.22): ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ನ್ಯಾಯಾಲಯದ ನಿರ್ದೇಶನದಂತೆ ಅವರು ಅನುಮತಿ ಪಡೆಯುವುದಕ್ಕೆ ಅರ್ಜಿ ಸಲ್ಲಿಸಲಿ. ಅದೇ ರೀತಿ ಹಲವು ದಲಿತ ಸಂಘಟನೆಗಳು ಪಥಸಂಚಲನಕ್ಕೆ ಅನುಮತಿಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಚಿತ್ತಾಪುರ, ಕಲಬುರಗಿ, ಮೈಸೂರು ಹಾಗೂ ಚಾಮರಾಜನಗರದಲ್ಲಿಯೂ ನೀಲಿ ಶರ್ಟ್ ಧರಿಸಿ ಪಥಸಂಚಲನ ಮಾಡಲಿವೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿತ್ತಾಪುರ ಪಥಸಂಚಲನ ವಿವಾದ ಕುರಿತು ನಮ್ಮ ಲಾಯರ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅವರ ಕಡೆಯವರು ಈಗಾಗಲೇ 250 ಕಡೆ ಪಥಸಂಚಲನ ಮಾಡಿದ್ದೇವೆ ಎಂದು ಕೋರ್ಟ್‌ಗೆ ತಿಳಿಸಿದ್ದರು. 250 ಕಡೆ ಅನಧಿಕೃತವಾಗಿ ಮಾಡಿದರೆ, 251ನೇ ಕಡೆನೂ ಅನಧಿಕೃತವಾಗಿ ಮಾಡುವಂತದ್ದು ಏನೂ ಇಲ್ಲ. ಕೋರ್ಟ್ ಆದೇಶ ಕೊಟ್ಟಿದೆ. ಆದರೆ, ಕೋರ್ಟ್ ತೀರ್ಪಿನಿಂದ ಪ್ರಿಯಾಂಕ್ ಖರ್ಗೆಗೆ ಮುಖಭಂಗವಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಇದರಲ್ಲಿ ಮುಖಭಂಗ ಆಗುವಂಥದ್ದು ಏನಿದೆ? ಅ.19ಕ್ಕೆ ಪಥಸಂಚಲನ ಆಯ್ತಾ? ಆಗಿಲ್ಲ. ಹೈಕೋರ್ಟ್ ಡೈರೆಕ್ಷನ್ ಕೊಟ್ಟಿದೆ, ಅದನ್ನ ಮಿಸ್ ಇಂಟ್ರಪ್ಶನ್ (ತಪ್ಪಾಗಿ ಅರ್ಥೈಸಿಕೊಳ್ಳುವುದು) ಮಾಡ್ತಿದ್ದಾರೆ' ಎಂದು ಸ್ಪಷ್ಟಪಡಿಸಿದರು. ಹೈಕೋರ್ಟ್‌ನ ನಿರ್ದೇಶನಗಳನ್ನು ಸರಿಯಾಗಿ ಅರ್ಥೈಸಿಕೊಳ್ಳುವಂತೆ ಆಗ್ರಹಿಸಿದರು.
ಪಥಸಂಚಲನಕ್ಕಾಗಿ ದಲಿತ ಸಂಘಟನೆಗಳು ಅನುಮತಿ ಕೇಳಿರುವ ವಿಚಾರದ ಬಗ್ಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, 'ಮೊನ್ನೆ ಭೀಮ್ ಆರ್ಮಿ, ದಲಿತ ಪ್ಯಾಂಥರ್ಸ್ ಸಹ ಅನುಮತಿ ಕೇಳಿವೆ. ಚಾಮರಾಜನಗರ, ಮೈಸೂರು ಇನ್ನಿತರೆ ಕಡೆಯೂ ನೀಲಿ ಶರ್ಟ್ ಹಾಕಿಕೊಂಡು ದೊಣ್ಣೆ ಹಿಡಿದು ಪಥಸಂಚಲನ ಮಾಡುತ್ತೇವೆ ಅಂತ ಅನುಮತಿ ಕೇಳಿದ್ದಾರೆ ಎಂದರು. ಆರ್‌ಎಸ್‌ಎಸ್ ಅವರು ಮೊದಲು ಅನುಮತಿಗೆ ಮನವಿ ಕೊಡಲಿ. ಹೈಕೋರ್ಟ್ ಅನುಮತಿ ಬಗ್ಗೆ ಹೇಳಿದೆ. ವಾತಾವರಣ ಚೆನ್ನಾಗಿದ್ದರೆ ಅನುಮತಿ ಕೊಟ್ಟು ಮಾಡಲಿ. ವಾತಾವರಣ ಸರಿಯಿಲ್ಲ ಅಂದರೆ ಹೇಗೆ ಮಾಡೋಕೆ ಸಾಧ್ಯ? ಎಂದು ಪ್ರಶ್ನಿಸಿದರು. ಯಾವುದೇ ಸಂಘಟನೆಯಾಗಲಿ ಮನವಿ ಪತ್ರ ಕೊಟ್ಟು ಅನುಮತಿ ಕೇಳಬೇಕು. ಎಷ್ಟು ಜನ ಹೋಗ್ತೇವೆ ಎಂಬುದನ್ನು, ಯಾವ ಮಾರ್ಗದಲ್ಲಿ ಹೋಗ್ತೇವೆ ಎಂದು ಸ್ಪಷ್ಟವಾಗಿ ಕೇಳಬೇಕು ಎಂದರು.
ಪ್ರಿಯಾಂಕ್ ಆರ್.ಎಸ್.ಎಸ್.ಗೆ ಟಾರ್ಗೆಟ್ ಎಂಬ ಪ್ರಶ್ನೆಗೆ ಉತ್ತರಿಸಿದ ಖರ್ಗೆ, ಮುಂಚೆಯಿಂದಲೂ ನಾವೆಲ್ಲರೂ ಟಾರ್ಗೆಟ್ ಆಗಿದ್ದೇವೆ. ಸಿಎಂ, ಖರ್ಗೆ ಸಾಹೇಬರು, ಡಿಸಿಎಂ ಸಾಹೇಬರು ಎಲ್ಲರೂ ಆರ್.ಎಸ್.ಎಸ್.ಗೆ ಟಾರ್ಗೆಟ್ ಆಗಿದ್ದಾರೆ. ಬಹುಶಃ ಪ್ರಿಯಾಂಕ್ ಸ್ವಲ್ಪ ಜಾಸ್ತಿ ಇರಬೇಕು' ಎಂದು ಹೇಳುವ ಮೂಲಕ ಪರೋಕ್ಷವಾಗಿ ತಾವು ರಾಜಕೀಯ ವೈಷಮ್ಯಕ್ಕೆ ಗುರಿಯಾಗಿರುವುದನ್ನು ಖಚಿತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ