
ಅಥಣಿ (ಅ.22): ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗ್ತೀನಿ ಅಂತ ನಾನು ಎಲ್ಲಿ ಕೂಡ ಹೇಳಿಲ್ಲ, ಅಪೇಕ್ಷಿತನೂ ಅಲ್ಲ. ಸಹಕಾರಿ ರಂಗದಲ್ಲಿ ಅಪೇಕ್ಷ ಬ್ಯಾಂಕಿನ ಅಧ್ಯಕ್ಷನಾಗಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸಿದ್ದೇನೆ ಜೊತೆಗೆ ಸಹಕಾರಿ ಸಚಿವನಾಗಿ ಕೆಲಸವನ್ನು ಮಾಡಿದ್ದೇನೆ, ರಾಜ್ಯದ ಉಪ ಮುಖ್ಯಮಂತ್ರಿಯಾಗಿ ತಿರುಗಿ ಜಿಲ್ಲಾ ಮಧ್ಯವರ್ತಿ ಬ್ಯಾಂಕಿಗೆ ಅಧ್ಯಕ್ಷನಾಗುವ ಭ್ರಮೆ ನನಗೆ ಇಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುವ ಅಪೇಕ್ಷೆ ನನಗೆ ಇಲ್ಲ. ಕ್ಷೇತ್ರದ ಜನರು ನನ್ನನ್ನು ತುಂಬಾ ಎತ್ತರಕ್ಕೆ ಬೆಳೆಸಿದ್ದಾರೆ. ನಾನು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುತ್ತೇನೆಂದು ಎಲ್ಲೂ ಹೇಳಿಲ್ಲ, ಯಾವುದೇ ಉದಾಹರಣೆ ಇಲ್ಲ. ಚುನಾವಣೆ ಇತ್ತೀಚಿಗೆ ಮುಗಿದಿದೆ. ಇನ್ನೂ ನಾಲ್ಕು ಕ್ಷೇತ್ರಗಳ ಫಲಿತಾಂಶ ಬಾಕಿಯಿದ್ದು, ಕೋರ್ಟ್ ತೀರ್ಪು ಬಂದ ನಂತರ ಘೋಷಣೆಯಾಗುತ್ತದೆ. ನಂತರ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಆ ಸಂದರ್ಭಕ್ಕೆ ಅನುಗುಣವಾಗಿ ಅವತ್ತು ನಾವು ಮಾತನಾಡಬೆಕಾಗುತ್ತದೆ. ರಾಜಕಾರಣ ಯಾವತ್ತೂ ನಿಂತ ನೀರಲ್ಲ, ಹರಿಯುತ್ತಿರುತ್ತದೆ. ರಾಜಕಾರಣದಲ್ಲಿ ಶತ್ರುಗಳು ಮಿತ್ರರಾಗುತ್ತಾರೆ, ಮಿತ್ರಗಳು ಶತ್ರುಗಳಾಗುತ್ತಾರೆ. ಕಾಲಾನುಸಾರ ಸಂದರ್ಭ ಬಂದಾಗ ಚರ್ಚೆ ಮಾಡುತ್ತೇನೆ ಎಂದು ಹೇಳಿದರು. ರಮೇಶ್ ಕತ್ತಿ ಹಾಗೂ ಜಾರಕಿಹೊಳಿ ಪೆನಲ್‌ನಿಂದ ಯಾರು ಅಧ್ಯಕ್ಷರಾಗಿರುತ್ತಾರೆ ಎಂಬುದು ಇನ್ನೂ ಕಾದ ನೋಡಬೇಕೆಂದು ಎಂದರು.
ಡಿಸೆಂಬರನಲ್ಲಿ ನನಗೆ ಶುಕ್ರದೆಸೆ ಪ್ರಾರಂಭ:
ಡಿಸೆಂಬರ್‌ನಲ್ಲಿ ನನಗೆ ಶುಕ್ರದೆಸೆ ಪ್ರಾರಂಭವಾಗುತ್ತದೆ, ಯಾವ ರೀತಿ ಅಂತ ಹೇಳುವುದಿಲ್ಲ. ಆ ಗೊಂದಲ ಅಲ್ಲಿಯವರಿಗೆ ಹಾಗೇ ಇರಬೇಕು, ಅದು ಉದಯ ಆದ ಮೇಲೆ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಸಚಿವ ಸ್ಥಾನ ಅಥವಾ ಡಿಸಿಎಂ ಎಂಬುವುದು ಹೇಳುವುದಕ್ಕೆ ಬರುವುದಿಲ್ಲ. ಅದಕ್ಕೆ ಯಾವುದು ಅರ್ಥವೂ ಕೂಡ ಉಳಿಯಲ್ಲ. ಸಂದರ್ಭ ಬಂದಾಗ ನಿಮಗೆ ಎಲ್ಲ ಗೊತ್ತಾಗುತ್ತದೆ. ಡಿಸೆಂಬರ್ ತಿಂಗಳ ಕಳೆದ ಬಳಿಕ ೨೦೨೬ ಬರುತ್ತದೆ, ಎಲ್ಲರಿಗೂ ಒಳ್ಳೆಯದಾಗುತ್ತದೆ. ರಾಜ್ಯಕ್ಕೆ, ದೇಶಕ್ಕೆ ಶುಕ್ರದೆಸೆ ಪ್ರಾರಂಭವಾಗುತ್ತದೆ, ಮುಂದೆ ಒಳ್ಳೆಯದಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.
ಬೆಳಗಾವಿ ಮಧ್ಯವರ್ತಿ ಚುನಾವಣೆಯಲ್ಲಿ ನನ್ನ ಕ್ಷೇತ್ರದ ಜನರು ಅಭೂತಪೂರ್ವ ಆಗಿ ಆಯ್ಕೆ ಮಾಡಿಕೊಟ್ಟಿದ್ದಾರೆ. ಅ ಗೆಲುವಿಗೆ ಶ್ರಮಿಸಿದ ಎಲ್ಲಾ ಗುರು ಹಿರಿಯರಿಗೆ ಮತ್ತು ಮತದಾರರಿಗೆ, ಎಲ್ಲಾ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗಳಿಗೆ, ಹಿತೈಷಿಗಳಿಗೆ ಧನ್ಯವಾದಗಳು ಸಲ್ಲಿಸುತ್ತೇನೆ ಎಂದು ಹೇಳಿದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ