ಚಿತ್ರಕಲಾ ಶಿಕ್ಷಕನ ರಕ್ತದಲ್ಲಿ ಅರಳಿದ ಸಿದ್ದಗಂಗಾ ಶ್ರೀ| ಜ.೨೧ರಂದು ಶಿವೈಕ್ಯರಾದ ಸಿದ್ದಗಂಗಾ ಮಠಧ ಡಾ.ಶಿವಕುಮಾರ ಸ್ವಾಮೀಜಿ| ರಕ್ತದಲ್ಲಿ ಶ್ರೀಗಳ ಚಿತ್ರ ಬಿಡಿಸಿದ ಚಿತ್ರಕಲಾ ಶಿಕ್ಷಕ ಸಂಗಮೇಶ ಬಗಲಿ| ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದ ಚಿತ್ರಕಲಾ ಶಿಕ್ಷಕ| ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿರುವ ಬಗಲಿ
ಮಲ್ಲಿಕಾರ್ಜುನ ಹೊಸಮನಿ
ಜಮಖಂಡಿ(ಜ.23): ಕಳೆದ ಜ.21ರಂದು ಶಿವೈಕ್ಯರಾದ ಸಿದ್ದಗಂಗಾ ಮಠಧ ಡಾ.ಶಿವಕುಮಾರ ಸ್ವಾಮೀಜಿ ನಿಧನಕ್ಕೆ ಇಡೀ ರಾಜ್ಯವೇ ಕಂಬನಿ ಮಿಡಿಯುತ್ತಿದೆ. ಅಂತೆಯೇ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದ ಚಿತ್ರಕಲಾ ಶಿಕ್ಷಕನೋರ್ವ ವಿಶಿಷ್ಟವಾಗಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಇಲ್ಲಿನ ಸರ್ಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಸಂಗಮೇಶ ಬಗಲಿ ಎಂಬುವರು ತಮ್ಮ ರಕ್ತದಿಂದಲೇ ಸಿದ್ದಗಂಗಾ ಶ್ರೀಗಳ ಭಾವಚಿತ್ರ ಬಿಡಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ
ಸಿದ್ದಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಶ್ರೀಗಳ ಚಿತ್ರವನ್ನು ರಕ್ತದಲ್ಲಿ ಬಿಡಿಸಿರುವ ಬಗಲಿ, ಶಾಲಾ ಅವಧಿಯ ಬಳಿಕ ತಮ್ಮ ಜಮಖಂಡಿಯ ಆರ್ಟ್ ಗ್ಯಾಲರಿಯಲ್ಲಿ ಚಿತ್ರ ಬಿಡಿಸುತ್ತಾರೆ.
ಈ ಹಿಂದೆ ಅಬ್ದುಲ್ ಕಲಾಂ, ಅಟಲ್ ಬಿಹಾರಿ ವಾಜಪೇಯಿ ನಿಧನರಾದಾಗಲೂ ತಮ್ಮ ರಕ್ತದಿಂದಲೇ ಬಗಲಿ ಗಣ್ಯರ ಚಿತ್ರ ಬಿಡಿಸಿದ್ದರು. ಅಲ್ಲದೇ ಸ್ವಾತಂತ್ರ್ಯ ಯೋಧರು, ದಾರ್ಶನಿಕರು, ಸಾಹಿತಿಗಳು , ಶರಣರು ಸೇರಿದಂತೆ 250ಕ್ಕೂ ಅಧಿಕ ಕಲಾಕೃತಿಗಳನ್ನು ಸಂಗಮೇಶ್ ಬಗಲಿ ಬಿಡಿಸಿದ್ದಾರೆ.
ತಮ್ಮ ರಕ್ತದಿಂದಲೇ ಭಾವಚಿತ್ರ ಬಿಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿರುವ ಬಗಲಿ, ಇದೀಗ ಸಿದ್ದಗಂಗಾ ಶ್ರೀಗಳಿಗೆ ವಿಶೇಷ ಶೃದ್ದಾಂಜಲಿ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.