
ಬೆಂಗಳೂರು (ನ.18): ಸೋನಿಯಾ ಗಾಂಧಿ(Sonia Gandhi) ಅವರು ಕೇವಲ ಕಾಂಗ್ರೆಸ್ ಪಕ್ಷದ ನಾಯಕಿಯಲ್ಲ. ಈ ದೇಶದ ಏಕತೆ, ಸಮಗ್ರತೆ, ಪ್ರಜಾಪ್ರಭುತ್ವ ಹಾಗೂ ದುರ್ಬಲ ವರ್ಗಗಳ ಹಕ್ಕುಗಳ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ನಾಯಕಿ. ಅಧಿಕಾರಕ್ಕಿಂತ ದೇಶದ ಹಿತವೇ ಎಂಬುದನ್ನು ಸಾಬೀತುಪಡಿಸಿದ ತ್ಯಾಗಮೂರ್ತಿ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್(KPCC President BK Hariprasad) ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ಸೋನಿಯಾ ಗಾಂಧಿ ಅವರ ಆತ್ಮಕಥನ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಎರಡು ದಶಕಗಳ ತಮ್ಮ ಒಡನಾಟ ಮೆಲುಕು ಹಾಕಿದ ಅವರು, 1996, 1998 ಹಾಗೂ 1999ರ ಲೋಕಸಭಾ ಚುನಾವಣೆಗಳ ಕಾಲಘಟ್ಟ ಹಾಗೂ ಸವಾಲುಗಳು, ಅದನ್ನು ನಿಭಾಯಿಸಿದ ರೀತಿಯನ್ನು ವಿವರಿಸಿದರು.
ಅನೇಕ ರಾಜಕೀಯ ಸವಾಲುಗಳು, ಸೋಲುಗಳು, ಟೀಕೆಗಳು ಮತ್ತು ವೈಯಕ್ತಿಕ ದಾಳಿಗಳನ್ನು ಎದುರಿಸಿದರೂ ಪಕ್ಷದ ಸಿದ್ಧಾಂತ ಹಾಗೂ ಜಾತ್ಯತೀತ ಮೌಲ್ಯಗಳ ವಿಚಾರದಲ್ಲಿ ಅವರು ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಬಳ್ಳಾರಿಯ ಜನತೆ 1999 ರಲ್ಲಿ ಸೋನಿಯಾ ಗಾಂಧಿ ಅವರ ಕೈ ಹಿಡಿದದ್ದೂ ಐತಿಹಾಸಿಕ ಕ್ಷಣ.
ಸೋನಿಯಾ ಗಾಂಧಿ ಅವರ ಬದುಕು ಸಾಮಾನ್ಯವಾದ ಬದುಕಲ್ಲ. ಸಂಜಯ್ ಗಾಂಧಿ ಅವರ ಅಕಾಲಿಕ ಮರಣ, ತಮ್ಮ ಅತ್ತೆ ಇಂದಿರಾ ಗಾಂಧಿ ಅವರ ಹತ್ಯೆ, ತಮ್ಮ ಪತಿ ರಾಜೀವ್ ಗಾಂಧಿ ಅವರ ಭೀಕರ ಹತ್ಯೆಯಂತಹ ಸಾಲು-ಸಾಲು ದುರಂತಗಳನ್ನು ಎದುರಿಸಿದ ಮಹಿಳೆ ಅವರು ಎಂದು ಗುಣಗಾನ ಮಾಡಿದರು.
ಎಷ್ಟೇ ನೋವು, ಸಂಕಟ ಎದುರಾದರೂ ದೇಶವನ್ನು ತೊರೆದು ಹೋಗದೆ, ಕಾಂಗ್ರೆಸ್ ಪಕ್ಷವನ್ನು ಉಳಿಸುವ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡರು. ಪಂಚಾಯ್ತಿ ಸ್ಥಾನವನ್ನೂ ಬಿಟ್ಟುಕೊಡದ ಕಾಲದಲ್ಲಿ ಪ್ರಧಾನಿ ಹುದ್ದೆಯನ್ನು ತ್ಯಜಿಸಿದ ಅಪರೂಪದ ರಾಜಕೀಯ ತ್ಯಾಗಿ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ, ಸಚಿವರಾದ ಕೆ.ಎಚ್ ಮುನಿಯಪ್ಪ, ಕೆ.ಜೆ.ಜಾರ್ಜ್, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ, ಎಐಸಿಸಿ ಕಾರ್ಯದರ್ಶಿಗಳಾದ ಪಿ.ವಿ.ಮೋಹನ್, ಗೋಪಿನಾಥ್ ಪಳನಿಯಪ್ಪನ್ ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ