ಮೈಸೂರು, ಯಶವಂತಪುರ APMCಯಲ್ಲೇ ರೈತರಿಗೆ ಅತಿಹೆಚ್ಚು ಮೋಸ; 275 ವರ್ತಕರ ಮೇಲೆ ಕೇಸ್ ಹಾಕಿದ ಸಚಿವರು!

Published : Nov 17, 2026, 08:34 PM IST
karnataka apmc market raid rizwan Arshad

ಸಾರಾಂಶ

ರಾಜ್ಯದ 9 ಪ್ರಮುಖ ಎಪಿಎಂಸಿ ಮಾರುಕಟ್ಟೆಗಳ ಮೇಲೆ ಆಹಾರ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ದಿಢೀರ್ ದಾಳಿ ನಡೆಸಿದೆ. ತೂಕದಲ್ಲಿ ರೈತರಿಗೆ ಮೋಸ ಮಾಡುತ್ತಿದ್ದ 275 ವರ್ತಕರ ವಿರುದ್ಧ ಪ್ರಕರಣ ದಾಖಲಿಸಿ 9.8 ಲಕ್ಷ ರೂ. ದಂಡ ವಿಧಿಸಲಾಗಿದೆ.

ಬೆಂಗಳೂರು (ನ.17): ರಾಜ್ಯದ ಒಂಬತ್ತು ಪ್ರಮುಖ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ (ಎಪಿಎಂಸಿ) ಏಕಕಾಲಕ್ಕೆ ದಾಳಿ ನಡೆಸಿರುವ ಆಹಾರ ಮತ್ತು ಕಾನೂನು ಮಾಪನ ಶಾಸ್ತ್ರ ಇಲಾಖೆ ಅಧಿಕಾರಿಗಳು ತೂಕದಲ್ಲಿ ಮೋಸ ಮತ್ತು ಮಾನದಂಡ ಉಲ್ಲಂಘಿಸಿದ 275 ವರ್ತಕರ ವಿರುದ್ಧ ಮೊಕದ್ದಮೆ ದಾಖಲಿಸಿದ್ದು 9.8 ಲಕ್ಷ ರು.ದಂಡ ವಿಧಿಸಿದ್ದಾರೆ.

ಸೋಮವಾರ ಆಹಾರ ಇಲಾಖೆ ಸಚಿವ ರಿಜ್ವಾನ್‌ ಅರ್ಷದ್‌ ಅವರು, ಮೈಸೂರಿನ ಬಂಡಿಪಾಳ್ಯ ಎಪಿಎಂಸಿ ಮಾರುಕಟ್ಟೆಯಲ್ಲಿ ನಡೆದ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು ವಿಶೇಷ. ಎಪಿಎಂಸಿಗಳಲ್ಲಿ ತೂಕದಲ್ಲಿ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಸಚಿವ ರಿಜ್ವಾನ್‌ ಅರ್ಷದ್‌ ಅವರ ಸೂಚನೆ ಮೇರೆಗೆ 10ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಂಗಳೂರು, ಮೈಸೂರು, ಗಂಗಾವತಿ, ರಾಯಚೂರು, ತುಮಕೂರು, ಹುಬ್ಬಳ್ಳಿ ಮತ್ತು ಬ್ಯಾಡಗಿ ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಏಕಕಾಲಕ್ಕೆದಾಳಿ ನಡೆಸಿ ತಪಾಸಣೆ ಆರಂಭಿಸಿದರು.

275 ವರ್ತಕರ ವಿರುದ್ಧ ಮೊಕದ್ದಮೆ

ರಾಜ್ಯಾದ್ಯಂತ 9 ಮಾರುಕಟ್ಟೆಗಳಲ್ಲಿ ಒಟ್ಟು 711 ಅಂಗಡಿಗಳನ್ನು ತಪಾಸಣೆ ನಡೆಸಿದ ಅಧಿಕಾರಿಗಳು, ತೂಕದಲ್ಲಿ ಮೋಸ, ದೋಷಪೂರಿತ ಯಂತ್ರಗಳ ಬಳಕೆ, ನಿಗದಿತ ಅವಧಿಯೊಳಗೆ ಇಲಾಖೆಯಿಂದ ತೂಕದ ಯಂತ್ರಗಳ ಸತ್ಯಾಪನೆ ಮತ್ತು ಮುದ್ರೆ ಮಾಡಿಸಿಕೊಳ್ಳದಿರುವುದು, ಸತ್ಯಾಪನೆ ಪ್ರಮಾಣಪತ್ರವನ್ನು ತಮ್ಮ ಅಂಗಡಿಗಳಲ್ಲಿ ಪ್ರದರ್ಶನ ಮಾಡದಿರುವ ಆರೋಪಗಳ ಮೇಲೆ 275 ವರ್ತಕರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ನಿಯಮ ಉಲ್ಲಂಘನೆಗಳಿಗಾಗಿ 9.80 ಲಕ್ಷ ರು. ದಂಡ ವಿಧಿಸಿದ್ದಾರೆ. ಜೊತೆಗೆ ಇದೋಷಪೂರಿತ ತೂಕದ ಯಂತ್ರಗಳು ಹಾಗು ಸತ್ಯಾಪನೆ ಮತ್ತು ಮುದ್ರೆ ಮಾಡಿಸಿಕೊಳ್ಳದ ತೂಕದ ಯಂತ್ರಗಳನ್ನು ವಶಪಡಿಸಿಕೊಂಡರು.

ಮೈಸೂರಿನ ಬಂಡಿಪಾಳ್ಯ ಮಾರುಕಟ್ಟೆಯಲ್ಲಿ ಸಚಿವ ರಿಜ್ವಾನ್ ಅರ್ಷದ್ ಅವರು ಹಲವು ಮಳಿಗೆಗಳಲ್ಲಿ ರೈತರ ಉತ್ಪನ್ನಗಳನ್ನು ಖುದ್ದಾಗಿ ತೂಕ ಮಾಡಿಸಿ ದೋಷಪೂರಿತ ಎಂದು ಕಂಡು ಬಂದ ಯಂತ್ರಗಳನ್ನು ಜಪ್ತಿ ಮಾಡಿಸಿದರು. ಮೈಸೂರಿನ ಎಪಿಎಂಸಿ ಮಾರುಕಟ್ಟೆಯೊಂದರಲ್ಲೇ ಸೋಮವಾರ 180 ತಪಾಸಣೆ ನಡೆಸಿ 60 ಮೊಕದ್ದಮೆಗಳನ್ನು ದಾಖಲಿಸಲಾಯಿತು.

ಎಲ್ಲೆಲ್ಲಿ ಎಷ್ಟೆಷ್ಟು ಪ್ರಕರಣ:

  • ರಾಯಚೂರು ಎಪಿಎಂಸಿ 22,
  • ತುಮಕೂರು ಎಪಿಎಂಸಿಯಲ್ಲಿ 14,
  • ಹುಬ್ಬಳ್ಳಿ 21,
  • ಬ್ಯಾಡಗಿ 37,
  • ಮೈಸೂರು 58,
  • ಬೆಂಗಳೂರು ಹುಸ್ಕೂರು 37,
  • ಯಶವಂತಪುರ 51,
  • ಬೆಂಗಳೂರು-ದಾಸನಪುರ 26,
  • ಗಂಗಾವತಿ 9
  • ಒಟ್ಟು 275 ಪ್ರಕರಣ ದಾಖಲಿಸಲಾಗಿದೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಣೆ to ಬೆಂಗಳೂರು ಪ್ರಯಾಣ ಇನ್ನು ಜಸ್ಟ್ 8 ಗಂಟೆ, ₹50,000 ಕೋಟಿ ವೆಚ್ಚದಲ್ಲಿ ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ!
ಕಾವೇರಿ ಬಿಕ್ಕಟ್ಟು ಶಮನಕ್ಕೆ ಪ್ರಧಾನಿ ಮೋದಿಗೆ 6 ಪುಟಗಳ ಪತ್ರ ಬರೆದ HD Devegowda