
ಬೆಂಗಳೂರು (ಫೆ.10) : ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಸಿದ್ಧತೆ ಕಾರ್ಯ ನಡೆಸುತ್ತಿದ್ದು, ಎಲ್ಲಾ 224 ಕ್ಷೇತ್ರಗಳಿಗೂ ಚುನಾವಣಾಧಿಕಾರಿಗಳನ್ನು ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಿದೆ.
ಈ ಸಂಬಂಧ ಕೇಂದ್ರ ಚುನಾವಣಾ ಆಯೋಗವು ರಾಜ್ಯ ಮುಖ್ಯಚುನಾವಣಾಧಿಕಾರಿಗೆ ಪತ್ರ ಬರೆದು ಮಾಹಿತಿ ನೀಡಿದೆ. ಪ್ರತಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಚುನಾವಣಾಧಿಕಾರಿಗಳನ್ನಾಗಿ ಮತ್ತು ತಹಶೀಲ್ದಾರ್‌ಗಳು ಸೇರಿದಂತೆ ಇತರೆ ಅಧಿಕಾರಿಗಳನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನಿಯೋಜನೆ ಮಾಡಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸಿದ್ಧತೆ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಜಿಲ್ಲಾಧಿಕಾರಿಗಳು ಜಿಲ್ಲಾ ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದು, ಅವರಿಗೆ ಪೂರಕವಾಗಿ ಚುನಾವಣಾಧಿಕಾರಿಗಳು ಮತ್ತು ಸಹಾಯಕ ಚುನಾವಣಾಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.
ಚುನಾವಣೆ ಗೆಲ್ಲಲು ಬಿಜೆಪಿಯಿಂದ ರಥಯಾತ್ರೆ, ಕಾಂಗ್ರೆಸ್‌ನಲ್ಲಿ ಹೆಚ್ಚಾಯ್ತಾ ಅಸಾಮಾಧಾನ ಕಿಡಿ?
ಪ್ರತಿ ಕ್ಷೇತ್ರದ ಕುರಿತು ಸಂಬಂಧಪಟ್ಟಅಧಿಕಾರಿಗಳಿಗೆ ಮಾಹಿತಿ ಇರುವ ಹಿನ್ನೆಲೆಯಲ್ಲಿ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನೇ ಚುನಾವಣಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಶೀಘ್ರದಲ್ಲಿಯೇ ಅವರಿಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ತರಬೇತಿಯನ್ನು ಸಹ ನೀಡಲಾಗುತ್ತದೆ.
ಚುನಾವಣೆಗೆ 1.3 ಲಕ್ಷ ಸೀಸೆ ಇಂಕ್ ಸಿದ್ಧ ಮಾಡಲು ಸೂಚನೆ
ಮೈಸೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಳಿಸಲಾಗದ ಶಾಯಿ ಸಿದ್ಧಪಡಿಸಿಕೊಳ್ಳಲು ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ. ಚುನಾವಣೆಗೆ ಸಿದ್ಧತೆ ಆರಂಭವಾಗುತ್ತಿರುವಂತೆಯೇ ಮೈಸೂರಿನ ಮೈಲ್ಯಾಕ್‌ಗೆ ಸೂಚನೆ ಬಂದಿದೆ. ಅಳಿಸಲಾಗದ ಶಾಯಿ ಮತ್ತು ಅರಗು ತಯಾರಿಸಲು ಸೂಚನೆ ಬಂದಿದ್ದು, ಅಂದಾ ಜಿನ ಮೇಲೆ 1.30 ಲಕ್ಷ ಶಾಯಿ ಸೀಸೆಯನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಸೂಚನೆ ನೀಡಿದೆ. ಮತದಾರರ ಪಟ್ಟಿಪರಿಷ್ಕರಣೆ ನಡೆಯುತ್ತಿರುವುದರಿಂದ ಅಂತಿಮ ಪಟ್ಟಿಆಧಾರದ ಮೇಲೆ ಶಾಯಿಯ ಬೇಡಿಕೆ ತೀರ್ಮಾನವಾಗಲಿದ್ದು, ಸದ್ಯ 10 ಎಂಎಲ್‌ನ 1.30 ಲಕ್ಷ ಶಾಯಿ ಸೀಸೆ ಬೇಕಾಗಬಹುದು ಎಂದು ಆಯೋಗ ಅಂದಾಜಿಸಿದೆ. ಇನ್ನು ಮತಯಂತ್ರ ಮತ್ತು ಯಂತ್ರ ಗಳನ್ನು ಇರಿಸುವ ಕೊಠಡಿಗಳನ್ನು ಸೀಲ್ ಮಾಡಲು ಬೇಕಾಗುವ ಸುಮಾರು 3.90 ಲಕ್ಷ ಅರಗು ಸಿದ್ಧಪಡಿಸಿಕೊಳ್ಳಲು ಆಯೋಗ ಸೂಚಿಸಿದೆ.
ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್‌ಗೆ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ!
ಇಷ್ಟುಪ್ರಮಾಣದ ಶಾಯಿ ಮತ್ತು ಅರಗು ತಯಾರಿಕೆ ಮತ್ತು ಸಂರಕ್ಷಣೆ ಇನ್ನು ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮೈಲ್ಯಾಕ್ ಅಧ್ಯಕ್ಷ ಆರ್.ರಘು ಕೌಟಿಲ್ಯ ‘ಕನ್ನಡಪ್ರಭ’ ಕ್ಕೆ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ