
ಬೆಂಗಳೂರು (ಫೆ.10) : ಚಿಕ್ಕಬಳ್ಳಾಪುರದ ಅವಲಗುರ್ಕಿ ಗ್ರಾಮದಲ್ಲಿ ಸುಪ್ರಸಿದ್ಧ ನಂದಿ ಬೆಟ್ಟದ ಸಮೀಪ ಈಶ ಯೋಗ ಕೇಂದ್ರವು ಆದಿಯೋಗಿ ಪ್ರತಿಮೆ ಸ್ಥಾಪಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಚಿಕ್ಕಬಳ್ಳಾಪುರದ ಚಂಬಳ್ಳಿಯ ಎಸ್.ಕ್ಯಾತಪ್ಪ ಮತ್ತಿತರರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ, ‘ಅರ್ಜಿದಾರರು ಶುದ್ಧಹಸ್ತದಿಂದ ನ್ಯಾಯಾಲಯದ ಮೆಟ್ಟಿಲೇರಿಲ್ಲ. ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸಿಲ್ಲ. ಶುದ್ಧಹಸ್ತರು ನ್ಯಾಯಾಲಯದ ಮುಂದೆ ಹಾಜರಾದರೆ ಅವರ ಅರ್ಜಿಯನ್ನು ಪರಿಗಣಿಸಲಾಗುವುದು’ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.
ಚಿಕ್ಕಬಳ್ಳಾಪುರದಲ್ಲಿ ನಾಳೆ ಆದಿಯೋಗಿ ಪ್ರತಿಮೆ ಅನಾವರಣಕ್ಕೆ ಕೋರ್ಟ್ ಅಸ್ತು
ವಿಚಾರಣೆ ವೇಳೆ ಈಶ ಯೋಗ ಕೇಂದ್ರದ ಪರ ಹಿರಿಯ ವಕೀಲ ಉದಯ್ ಹೊಳ್ಳ, ‘ಅರ್ಜಿದಾರರು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ನ್ಯಾಯಾಲಯದ ಮುಂದೆ ಬಹಿರಂಗಪಡಿಸಿಲ್ಲ. ವಾಸ್ತವಾಂಶ ಮುಚ್ಚಿಟ್ಟು ಅರ್ಜಿ ಸಲ್ಲಿಸಿದ್ದಾರೆ. ಆ ಮೂಲಕ ಪಿಐಎಲ್ ನಿಯಮ ಉಲ್ಲಂಘಿಸಿದ್ದಾರೆ’ ಎಂದು ಆಕ್ಷೇಪಿಸಿದರು.
ಅದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರ ಪರ ವಕೀಲ ಶಿವಪ್ರಕಾಶ್, ‘ಚಳವಳಿಗಳಲ್ಲಿ ಭಾಗಿಯಾಗಿರುವುದಕ್ಕೆ ದುರುದ್ದೇಶಪೂರಿತವಾಗಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ವಿವರಿಸಿದರು. ಅದನ್ನು ಒಪ್ಪದ ನ್ಯಾಯಪೀಠ, ‘ಶುದ್ಧಹಸ್ತವಾಗಿ ಅರ್ಜಿದಾರರು ನ್ಯಾಯಾಲಯದ ಮುಂದೆ ಬರಬೇಕು. ಉದ್ದೇಶವಷ್ಟೇ ಅಲ್ಲದೇ ಮಾರ್ಗವೂ ಶುದ್ಧವಾಗಿರಬೇಕು ಎಂಬುದಾಗಿ ಗಾಂಧೀಜಿ ಹೇಳಿದ್ದಾರೆ. ಪ್ರಕರಣಗಳಿದ್ದರೆ ಅದನ್ನು ಬಹಿರಂಗಪಡಿಸಬೇಕು. ಅದಕ್ಕೆ ಪೂರಕವಾದ ದಾಖಲೆ ಸಲ್ಲಿಸಬಹುದಿತ್ತು. ವ್ಯಕ್ತಿಗಳ ನಡುವಿನ ವೈಷಮ್ಯಕ್ಕೆ ಪ್ರಕರಣ ದಾಖಲಿಸಲಾಗಿದೆ. ಹೀಗಿರುವಾಗ ರೈತರ ಪ್ರತಿಭಟನೆಯ ಪ್ರಶ್ನೆ ಎಲ್ಲಿಂದ ಬರುತ್ತದೆ?’ ಎಂದು ಪ್ರಶ್ನಿಸಿತು.
ಅಲ್ಲದೆ, ‘ಯಾವ ಕಾರಣಕ್ಕಾಗಿ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಾಗಿದೆ ಎಂಬುದನ್ನು ನ್ಯಾಯಾಲಯ ಪರಿಶೀಲಿಸುತ್ತಿಲ್ಲ. ಅರ್ಜಿದಾರರು ನ್ಯಾಯಾಲಯದ ಮುಂದೆ ಬಂದಾಗ ಯಾವುದೇ ದಾಖಲೆಯನ್ನೂ ಸಹ ಮುಚ್ಚಿಟ್ಟಿಲ್ಲ ಎಂಬುದನ್ನು ನೋಡಲಾಗುತ್ತದೆ. ಬೇರೆಯವರ ಮೇಲೆ ಬೆರಳು ತೋರಿಸುವ ಮುನ್ನ ಅರ್ಜಿದಾರರು ಸರಿಯಾಗಿರಬೇಕು. ಸಾರ್ವಜನಿಕ ಹಿತಾಸಕ್ತಿಯ ವಿಚಾರ ಎತ್ತಿಕೊಂಡಾಗ ಅರ್ಜಿದಾರರು ಶುದ್ಧಹಸ್ತರಾಗಿರಬೇಕು ಎಂಬುದು ನ್ಯಾಯಾಲಯದ ಕನಿಷ್ಠ ಬಯಕೆಯಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಚಿಕ್ಕಬಳ್ಳಾಪುರ: ಆದಿಯೋಗಿ ಪ್ರತಿಮೆ ಸ್ಥಳ, ಯಥಾಸ್ಥಿತಿಗೆ ಹೈಕೋರ್ಟ್ ಆದೇಶ
ಪ್ರಕರಣದ ವಿವರ:
ಚಿಕ್ಕಬಳ್ಳಾಪುರದ ನಂದಿ ಬೆಟ್ಟಮತ್ತು ನರಸಿಂಹ ದೇವರು ಬೆಟ್ಟದ ವ್ಯಾಪ್ತಿಯಲ್ಲಿ ಆದಿಯೋಗಿ ಪ್ರತಿಮೆ ಸ್ಥಾಪಿಸಲು ಈಶ ಯೋಗ ಕೇಂದ್ರಕ್ಕೆ ಸರ್ಕಾರದ ಪ್ರಾಧಿಕಾರಗಳು ಅವಕಾಶ ಮಾಡಿಕೊಟ್ಟಿವೆ. ಇದರಿಂದ ಅಲ್ಲಿನ ಜನ-ಜೀವನ ಮತ್ತು ಕಾಡು ಪ್ರಾಣಿಗಳ ಬದುಕಿನ ಮೇಲೆ ನೇರ ಪರಿಣಾಮ ಉಂಟಾಗಲಿದೆ. ಹೀಗಾಗಿ, ಅವಲಗುರ್ಕಿಯಲ್ಲಿ ಈಶ ಯೋಗ ಕೇಂದ್ರಕ್ಕೆ ಸಂಬಂಧಿಸಿದ ಭೂಮಿಗೆ ದಾಖಲೆ ಸಲ್ಲಿಸಲು ಹಾಗೂ ನಂದಿ ಬೆಟ್ಟದ ವ್ಯಾಪ್ತಿಯ ಪರಿಸರ ರಕ್ಷಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಅವಲಗುರ್ಕಿ ಪ್ರದೇಶದ ಬೆಟ್ಟದ ಶ್ರೇಣಿಯಲ್ಲಿನ ಭೂಪ್ರದೇಶದ ಚಹರೆ ಬದಲಿಸದಂತೆ ಮತ್ತು ಪರಿಸರ ವ್ಯವಸ್ಥೆಗೆ ಹಾನಿ ಉಂಟು ಮಾಡದಂತೆ ಈಶ ಯೋಗ ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಮೊದಲಿಗೆ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ 2023 ಜ.11ರಂದು ಈಶ ಯೋಗ ಕೇಂದ್ರಕ್ಕೆ ಹೈಕೋರ್ಚ್ ನಿರ್ದೇಶಿಸಿತ್ತು. ನಂತರ ಜ.15ರಂದು ನಿಗದಿಯಾಗಿದ್ದ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಸಲು ಜ.13ರಂದು ಅನುಮತಿ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ