ಕರ್ನಾಟಕದ 40 ಕೆರೆಗಳಲ್ಲಿ ಸೌರ ವಿದ್ಯುತ್‌ ಉತ್ಪಾದನೆಗೆ ಸಿದ್ಧತೆ..!

By Kannadaprabha News  |  First Published Aug 23, 2024, 12:05 PM IST

ಸಣ್ಣ ನೀರಾವರಿ ಇಲಾಖೆಯ 40 ಕೆರೆಗಳಲ್ಲಿ ಸೌರಶಕ್ತಿ ಉತ್ಪಾದನಾ ಪ್ಯಾನೆಲ್‌ ಅಳವಡಿಸುವುದರಿಂದ 10 ತಿಂಗಳಲ್ಲಿ 2 ಸಾವಿರ ಮೆಗಾವ್ಯಾಟ್‌ಗೂ ಹೆಚ್ಚಿನ ವಿದ್ಯುತ್ ಉತ್ಪಾದಿಸಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ, ಜಲಾಶಯಗಳೂ ಸೇರಿದಂತೆ ಇನ್ನಿತರ ಜಲಮೂಲಗಳಲ್ಲಿಯೂ ಸೌರ ಶಕ್ತಿ ಪ್ಯಾನೆಲ್‌ ಅಳವಡಿಸುವುದರಿಂದ ಅಂದಾಜು 5 ಸಾವಿರ ಮೆಗಾವ್ಯಾಟ್‌ಗೂ ಹೆಚ್ಚಿನ ವಿದ್ಯುತ್‌ ಉತ್ಪಾದಿಸಬಹುದು. 


ಗಿರೀಶ್‌ ಗರಗ

ಬೆಂಗಳೂರು(ಆ.23):  ರಾಜ್ಯದ ಜಲಮೂಲಗಳಲ್ಲಿ ಸೌರಶಕ್ತಿ ಉತ್ಪಾದನಾ ಪ್ಯಾನೆಲ್‌ಗಳನ್ನು ಅಳವಡಿಸಿ ನವೀಕರಿಸಬಹುದಾದ ಇಂಧನ ಉತ್ಪಾದಿಸುವ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಣ್ಣ ನೀರಾವರಿ ಇಲಾಖೆಯ 40 ಕೆರೆಗಳ ಪಟ್ಟಿ ಸಿದ್ಧಪಡಿಸಲಾಗಿದೆ.

Tap to resize

Latest Videos

ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಒತ್ತು ನೀಡುವುದು ಹಾಗೂ ನೀರಾವರಿ ಯೋಜನೆಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆಗಾಗಿ ಜಲಾಶಯಗಳ ಹಿನ್ನೀರು, ಬೃಹತ್‌ ಕೆರೆಗಳು ಸೇರಿದಂತೆ ಇನ್ನಿತರ ಜಲಮೂಲಗಳಲ್ಲಿ ಸೌರಶಕ್ತಿ ಉತ್ಪಾದನಾ ಪ್ಯಾನೆಲ್‌ ಅಳವಡಿಸುವ ಕುರಿತುಂತೆ ರಾಜ್ಯ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಇಲಾಖೆ ಹಾಗೂ ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (ಕೆಆರ್‌ಇಡಿಎಲ್‌) ಜಂಟಿಯಾಗಿ ಯೋಜನೆಯ ರೂಪುರೇಷೆ ಸಿದ್ಧಪಡಿಸುತ್ತಿವೆ.

‘ಪಿಎಂ ಕುಸುಮ್‌’ ಯೋಜನೆಯಲ್ಲಿ ಬೆಳಗಾವಿ ಜಿಲ್ಲೆ ನಂ.1: ರಾಜ್ಯದಲ್ಲಿ 18,000 ರೈತರಿಂದ ಅರ್ಜಿ ಸಲ್ಲಿಕೆ

ಮೂರು ಇಲಾಖೆಗಳ ಅಧಿಕಾರಿಗಳು ಈಗಾಗಲೇ ಒಂದು ಬಾರಿ ಸಭೆ ನಡೆಸಿದ್ದು, ಶೀಘ್ರದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದಾರೆ. ಅದಕ್ಕೂ ಮುನ್ನ ಜಲಸಂಪನ್ಮೂಲ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ಸೌರಶಕ್ತಿ ಉತ್ಪಾದನಾ ಪ್ಯಾನೆಲ್‌ ಅಳವಡಿಕೆಗೆ ಸೂಕ್ತ ಜಲ ಮೂಲಗಳನ್ನು ಗುರುತಿಸುವ ಕಾರ್ಯ ಮಾಡಬೇಕಿದೆ. ಅದರಂತೆ ಸಣ್ಣ ನೀರಾವರಿ ಇಲಾಖೆಯ ಸುಪರ್ದಿಯಲ್ಲಿನ 40 ಕೆರೆಗಳಲ್ಲಿ ಸೌರಶಕ್ತಿ ಉತ್ಪಾದನಾ ಪ್ಯಾನೆಲ್‌ ಅಳವಡಿಕೆಗೆ ಗುರುತಿಸಲಾಗಿದೆ.

ವರ್ಷಪೂರ್ತಿ ಅರ್ಧ ತುಂಬಿರುವ ಕೆರೆಗಳ ಗುರುತು:

ಸಣ್ಣ ನೀರಾವರಿ ಇಲಾಖೆ ಸುಪರ್ದಿಯಲ್ಲಿ ರಾಜ್ಯಾದ್ಯಂತ 3,683 ಕೆರೆಗಳಿವೆ. ಅವುಗಳಲ್ಲಿ 200 ಎಕರೆಗೂ ಹೆಚ್ಚಿನ ವಿಸ್ತೀರ್ಣದ ಹಾಗೂ ವರ್ಷಪೂರ್ತಿ ಶೇ. 50ರಿಂದ 60ರಷ್ಟು ನೀರು ತುಂಬಿರುವ 40 ಕೆರೆಗಳನ್ನು ಗುರುತಿಸಲಾಗಿದೆ. ಈ ಕೆರೆಗಳ ಪೈಕಿ ಬಹುತೇಕ ಕೆರೆಗಳಿಗೆ ಏತ ನೀರಾವರಿ ಯೋಜನೆಗಳ ಮೂಲಕ ನೀರು ಹರಿಸಲಾಗುತ್ತದೆ. ಅದರಿಂದಾಗಿ ಕೆರೆಗಳಲ್ಲಿ ವರ್ಷವಿಡೀ ನೀರಿರಲಿದೆ. ಸದ್ಯ, 5 ಜಿಲ್ಲೆಗಳಲ್ಲಿನ ಕೆರೆಗಳನ್ನು ಮಾತ್ರ ಗುರುತಿಸಲಾಗಿದ್ದು, ರಾಜ್ಯದ ಇತರ ಜಿಲ್ಲೆಗಳಲ್ಲಿ ಸೌರಶಕ್ತಿ ಉತ್ಪಾದನಾ ಪ್ಯಾನೆಲ್‌ ಅಳವಡಿಸಬಹುದಾದ ಕೆರೆಗಳನ್ನು ಗುರುತಿಸಲಾಗುತ್ತಿದೆ.

2 ಸಾವಿರ ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ:

ಸಣ್ಣ ನೀರಾವರಿ ಇಲಾಖೆಯ 40 ಕೆರೆಗಳಲ್ಲಿ ಸೌರಶಕ್ತಿ ಉತ್ಪಾದನಾ ಪ್ಯಾನೆಲ್‌ ಅಳವಡಿಸುವುದರಿಂದ 10 ತಿಂಗಳಲ್ಲಿ 2 ಸಾವಿರ ಮೆಗಾವ್ಯಾಟ್‌ಗೂ ಹೆಚ್ಚಿನ ವಿದ್ಯುತ್ ಉತ್ಪಾದಿಸಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೆ, ಜಲಾಶಯಗಳೂ ಸೇರಿದಂತೆ ಇನ್ನಿತರ ಜಲಮೂಲಗಳಲ್ಲಿಯೂ ಸೌರ ಶಕ್ತಿ ಪ್ಯಾನೆಲ್‌ ಅಳವಡಿಸುವುದರಿಂದ ಅಂದಾಜು 5 ಸಾವಿರ ಮೆಗಾವ್ಯಾಟ್‌ಗೂ ಹೆಚ್ಚಿನ ವಿದ್ಯುತ್‌ ಉತ್ಪಾದಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾಸಿಕ 14 ಕೋಟಿ ರು. ವಿದ್ಯುತ್‌ ಬಳಕೆ ಶುಲ್ಕ ಪಾವತಿ: 

ಸದ್ಯ ಸಣ್ಣ ನೀರಾವರಿ ಇಲಾಖೆ ಅನುಷ್ಠಾನಗೊಳಿಸಿರುವ ಮತ್ತು ನಿರ್ವಹಣೆಯಲ್ಲಿರುವ ಏತ ನೀರಾವರಿ ಯೋಜನೆಗಳಿಗಾಗಿಯೇ ಮಾಸಿಕ 10ರಿಂದ 14 ಕೋಟಿ ರು. ವಿದ್ಯುತ್‌ ಬಳಕೆ ಶುಲ್ಕ ಪಾವತಿಸಲಾಗುತ್ತಿದೆ. ಕೆರೆಗಳಲ್ಲಿ ಸೌರಶಕ್ತಿ ಉತ್ಪಾದನಾ ಪ್ಯಾನೆಲ್‌ ಅಳವಡಿಸುವುದರಿಂದ ಉತ್ಪಾದನೆಯಾಗುವ ವಿದ್ಯುತ್ತನ್ನು ಏತ ನೀರಾವರಿ ಯೋಜನೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲು ಬಳಸುವ ಬಗ್ಗೆ ಈಗಾಗಲೇ ಚರ್ಚೆ ನಡೆಸಲಾಗಿದೆ.

ಸಣ್ಣ ನೀರಾವರಿ ಇಲಾಖೆ ಗುರುತಿಸಿರುವ ಕೆರೆಗಳ ಮಾಹಿತಿ

ಕೋಲಾರ ಜಿಲ್ಲೆ: ಲಕ್ಷ್ಮೀಸಾಗರ ಕೆರೆ, ನರಸಾಪುರ ದೊಡ್ಡಕೆರೆ, ಕಲವಮಂಜಲಿ ಕೆರೆ, ಸಿಂಗೇಹಳ್ಳಿ ದೊಡ್ಡಕೆರೆ, ಜನ್ನಘಟ್ಟ ಕೆರೆ, ಮುದುವಾಡಿ ದೊಡ್ಡಕೆರೆ, ಹೊಳಲಿ ಕೆರೆ, ಮಡಿವಾಳ ತಟ್ಟಾಲ ಕುಂಟಿ ಕೆರೆ, ಯದರೂರು, ಬೇಡರೂರು ದೊಡ್ಡಕೆರೆ, ಚಿರುವನಹಳ್ಳಿ ಕೆರೆ, ಬೇರುನಳ್ಳಿ ಕೆರೆ, ಹೊಸಹಳ್ಳಿ ಕೆರೆ, ಗುಮ್ಮರೆಡ್ಡಿಪುರ, ಅವಣಿ ದೊಡ್ಡಕೆರೆ, ನಂಗಲಿ ದೊಡ್ಡಕೆರೆ, ಬೇತಮಂಗಲ ಕೆರೆ, ರಾಮಸಾಗರ ಕೆರೆ, ಮಾರ್ಕಂಡೇಯ ಕೆರೆ, ಬಂಗಾರಪೇಟೆ ದೊಡ್ಡಕೆರೆ, ಕೊಪ್ಪ ದೊಡ್ಡಕೆರೆ,

ಕಾಮಸಮುದ್ರ ಕೆರೆ

ಬೆಂಗಳೂರು ಗ್ರಾಮಾಂತರ ಜಿಲ್ಲೆ:ಅಟ್ಟೂರು ಕೆರೆ, ವೆಂಕಟಗಿರಿಕೋಟೆ ಕೆರೆ, ಹೊಸಕೋಟೆ ದೊಡ್ಡಗೆರೆ, ವಿಜಯಪುರ ಅಮಾನಿಕೆರೆ, ತಟ್ಟಮಾಚನಹಳ್ಳಿ ಕೆರೆ, ಬೆಟ್ಟಕೋಟೆ ಅಮಾನಿಕೆರೆ
ಬೆಂಗಳೂರು ನಗರ: ಬಾಗಲೂರು ಕೆರೆ, ಸಿಂಗನಾಯಕನಹಳ್ಳಿ ಕೆರೆ, ಜಿಗಣಿ ದೊಡ್ಡಕೆರೆ, ಮುತ್ತನಲ್ಲೂರು ಅಮಾನಿಕೆರೆ
ಚಿಕ್ಕಬಳ್ಳಾಪುರ ಜಿಲ್ಲೆ: ತಿಪ್ಪಗಾನಹಳ್ಳಿ, ಅಮಾನಿ ಬೈರಸಾಗರ ಕೆರೆ, ಮಂಚೇನಹಳ್ಳಿ ಕೊಡಗೀ ಕೆರೆ
ರಾಮನಗರ ಜಿಲ್ಲೆ:  ನಲ್ಲಿಗುಡ್ಡ ಕೆರೆ, ಸೊಗಾಲ ಕೆರೆ, ಹೊಂಗನೂರು ಕೆರೆ, ಸಿಂಗರಾಜಪುರ ಕೆರೆ, ವಿರೂಪಾಕ್ಷಿಪುರ ಕೆರೆ

75 ಸಾವಿರ ಕೋಟಿ ಮೊತ್ತದ ಪಿಎಂ ಸೂರ್ಯಘರ್ ಯೋಜನೆಗೆ ಕೇಂದ್ರ ಸಂಪುಟ ಅಸ್ತು

ಶೀಘ್ರದಲ್ಲಿ ಎರಡನೇ ಸುತ್ತಿನ ಸಭೆ:

ಯೋಜನೆಗೆ ಸಂಬಂಧಿಸಿದಂತೆ ಜಲಸಂಪನ್ಮೂಲ ಇಲಾಖೆ, ಸಣ್ಣ ನೀರಾವರಿ ಇಲಾಖೆ ಹಾಗೂ ಕೆಆರ್‌ಇಡಿಎಲ್‌ ಅಧಿಕಾರಿಗಳ ನಡುವೆ ಈಗಾಗಲೇ ಪ್ರಾಥಮಿಕ ಹಂತದ ಸಭೆ ನಡೆದಿದೆ. ಯೋಜನಾ ವೆಚ್ಚ ನಿಗದಿ ಹಾಗೂ ಯಾವೆಲ್ಲ ಜಲಮೂಲಗಳಲ್ಲಿ ಸೌರಶಕ್ತಿ ಉತ್ಪಾದನಾ ಪ್ಯಾನೆಲ್‌ಗಳನ್ನು ಅಳವಡಿಸಬಹುದು ಎಂಬುದನ್ನು ನಿರ್ಧರಿಸುವ ಕುರಿತಂತೆ ಶೀಘ್ರದಲ್ಲಿ ಎರಡನೇ ಸುತ್ತಿನ ಸಭೆ ನಡೆಯಲಿದೆ. ಸಣ್ಣ ನೀರಾವರಿ ಇಲಾಖೆ ಸಚಿವ ಎನ್‌.ಎಸ್. ಬೋಸರಾಜು ಕೂಡ ಈ ಕುರಿತು ಅಧಿಕಾರಿಗಳಿಗೆ ಸೂಚಿಸಿದ್ದು, ಶೀಘ್ರದಲ್ಲಿ ಸಭೆ ನಡೆಸುವಂತೆ ತಿಳಿಸಿದ್ದಾರೆ.

ರಾಜ್ಯದ ಜಲಮೂಲಗಳಲ್ಲಿ ಸೌರಶಕ್ತಿ ಉತ್ಪಾದನಾ ಪ್ಯಾನೆಲ್‌ ಅಳವಡಿಸಿ ನವೀಕರಿಸಬಹುದಾದ ಇಂಧನ ಉತ್ಪಾದನಾ ಯೋಜನೆಗೆ ಸಂಬಂಧಿಸಿದಂತೆ ಒಂದು ಸುತ್ತಿನ ಸಭೆ ನಡೆಸಲಾಗಿದೆ. ಶೀಘ್ರದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಿ, ಯೋಜನೆಯ ನೀಲಿ ನಕ್ಷೆ ಸಿದ್ಧಪಡಿಸಲಾಗುವುದು.

click me!