ಕೋವಿಡ್‌ ಸೋಂಕು ಕಮ್ಮಿಯಾದರೂ ಮುನ್ನೆಚ್ಚರಿಕೆ ಪಾಲಿಸಿ: ರಾಜ್ಯ ಸರ್ಕಾರ

By Kannadaprabha NewsFirst Published Jan 18, 2024, 7:23 AM IST
Highlights

ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ ದೀರ್ಘಕಾಲೀನ ಅನಾರೋಗ್ಯ ಉಳ್ಳವರು ಹಾಗೂ ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.
 

ಬೆಂಗಳೂರು (ಜ.18): ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ ದೀರ್ಘಕಾಲೀನ ಅನಾರೋಗ್ಯ ಉಳ್ಳವರು ಹಾಗೂ ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ. ಕೊರೋನಾ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮೇರೆಗೆ ಬುಧವಾರ ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್‌ ಅವರು ಸಾರ್ವಜನಿಕ ಸುತ್ತೋಲೆ ಮೂಲಕ ಸಲಹೆಗಳನ್ನು ನೀಡಿದ್ದಾರೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಕಡಿಮೆಯಾಗುತ್ತಿದೆ. ಆದರೂ ವಯಸ್ಸಾದವರು (60 ವರ್ಷ ಮೇಲ್ಪಟ್ಟವರು), ಅಸ್ವಸ್ಥರು (ವಿಶೇಷವಾಗಿ ಮೂತ್ರಪಿಂಡಗಳು, ಹೃದಯ, ಯಕೃತ್ತು, ಶ್ವಾಸಕೋಶದ ಸಮಸ್ಯೆ ಇತ್ಯಾದಿ), ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಪ್ರಸ್ತುತ ವಾತಾವರಣ ಉಸಿರಾಟದ ಕಾಯಿಲೆ ಸೇರಿ ಕೊರೋನಾ ಸೋಂಕು ಹರಡುವಿಕೆಗೆ ಪೂರಕವಾಗಿದೆ. ಹಾಗಾಗಿ ಉಸಿರಾಟದ ತೊಂದರೆ (ಸಾರಿ) ಹಾಗೂ ಶೀತಜ್ವರ (ಐಎಲ್‌ಐ)ನ ಲಕ್ಷಣ ಹೊಂದಿರುವವರು ಹತ್ತಿರದ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ದೃಢಪಟ್ಟಲ್ಲಿ ವೈದ್ಯರ ಸಲಹೆಯಂತೆ ಅಗತ್ಯ ಚಿಕಿತ್ಸೆ ಪಡೆಯಬೇಕು. ಮನೆ ಆರೈಕೆಯಲ್ಲಿರುವ ಸೋಂಕಿತರನ್ನು ಭೇಟಿ ಮಾಡುವ ವೈದ್ಯರು ಮತ್ತು ಸಿಬ್ಬಂದಿಗೆ ಕುಟುಂಬದ ಸದಸ್ಯರು ಅಗತ್ಯ ಸಹಕಾರ ನೀಡಬೇಕು. ಇವರು ರೋಗಿಗಳ ಸಂಪರ್ಕಿತರ ಪರೀಕ್ಷೆ ನಡೆಸಿ ಅಗತ್ಯವಿದ್ದರೆ ನೀಡುವ ಸಲಹೆಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಅವನೊಬ್ಬ ಮೂರ್ಖ: ಸಂಸದ ಅನಂತ ಕುಮಾರ್‌ ಹೆಗಡೆ ವಿರುದ್ಧ ಸಿದ್ದು ಪರೋಕ್ಷ ತರಾಟೆ

ಅಸ್ತಿತ್ವದಲ್ಲಿಲ್ಲದ ಸಹಾಯವಾಣಿ ಸಂಖ್ಯೆ!: ಸುತ್ತೋಲೆಯಲ್ಲಿ ಸುವರ್ಣ ಆರೋಗ್ಯ ಟ್ರಸ್ಟ್‌ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಸಹಾಯವಾಣಿ +9118004258330 ಗೆ ಕರೆ ಮಾಡಿ ಕೊರೋನಾ ಸಂಬಂಧಿತ ವಿಚಾರಗಳ ಬಗ್ಗೆ ಮಾಹಿತಿ ಪಡೆಯಬಹುದು ಎಂದು ಹೇಳಲಾಗಿದೆ. ಆದರೆ, ಈ ಸಂಖ್ಯೆಗೆ ಕರೆ ಮಾಡಿದರೆ ‘ನೀವು ಡಯಲ್‌ ಮಾಡಿರುವ ನಂಬರ್‌ ಅಸ್ತಿತ್ವದಲ್ಲಿ ಇಲ್ಲ. ದಯವಿಟ್ಟು ಡಯಲ್ ಮಾಡಿರುವ ನಂಬರ್‌ನ್ನು ಪರಿಶೀಲಿಸಿ’ ಎಂದು ಬರುತ್ತಿದೆ.

click me!