‘ನನ್ನ ಮಗುವಿನ ಉತ್ತರ ಕ್ರಿಯೆಗೂ ಮೊದಲು ದುಷ್ಕರ್ಮಿಗಳಿಗೆ ಶಿಕ್ಷೆ ಕೊಡಲೇಬೇಕು. ಗಲ್ಲು ಶಿಕ್ಷೆ ವಿಧಿಸಲೇಬೇಕು, ನೀವ್ಯಾರು ಅವರನ್ನು ಬಿಡಲೇ ಬಾರದು...’ ಹೀಗೆಂದು ಮಧ್ಯಾಮದವರೆದುರು ಕಣ್ಣೀರಾದವರು ಪ್ರವೀಣ್ ತಾಯಿ ರತ್ನಾವತಿ.
ಸುಳ್ಯ (ಜು.28): ‘ನನ್ನ ಮಗುವಿನ ಉತ್ತರ ಕ್ರಿಯೆಗೂ ಮೊದಲು ದುಷ್ಕರ್ಮಿಗಳಿಗೆ ಶಿಕ್ಷೆ ಕೊಡಲೇಬೇಕು. ಗಲ್ಲು ಶಿಕ್ಷೆ ವಿಧಿಸಲೇಬೇಕು, ನೀವ್ಯಾರು ಅವರನ್ನು ಬಿಡಲೇ ಬಾರದು...’ ಹೀಗೆಂದು ಮಧ್ಯಾಮದವರೆದುರು ಕಣ್ಣೀರಾದವರು ಪ್ರವೀಣ್ ತಾಯಿ ರತ್ನಾವತಿ. ಮಗ, ಮನೆ ನಿರ್ಮಿಸಲು ಜಾಗ ಸಮತಟ್ಟು ಮಾಡಿಸಿದ್ದ, ಮನೆ ಕಟ್ಟಿಸಲು ಆಗಲಿಲ್ಲ. ಇನ್ನು ನಮಗೆ ಯಾರು ಮನೆ ಕಟ್ಟುತ್ತಾರೆ. ಮೂವರು ಹೆಣ್ಣು ಮಕ್ಕಳಿದ್ದು ಅವರನ್ನು ಮದುವೆ ಮಾಡಿ ಕೊಟ್ಟಾಗಿದೆ. ಇನ್ನು ನಮಗೆ ಯಾರೂ ಇಲ್ಲ. ಇಂತಹ ಅನ್ಯಾಯ ಮಾಡಬಾರದಿತ್ತು. ನನಗೆ ಹಾಗೂ ನನ್ನ ಪತಿಗೆ ಆರೋಗ್ಯ ಸರಿ ಇಲ್ಲ, ದುಡಿಯಲು ಆಗುವುದಿಲ್ಲ. ಒಬ್ಬನೇ ದುಡಿದು ನಮ್ಮನ್ನು ಸಾಕುತ್ತಿದ್ದ ಎಂದು ಅವರು ಹೇಳಿದ್ದಾರೆ.
ನನ್ನ ಗಂಡನಿಗಾದ ಅನ್ಯಾಯ ಇತರರಿಗೆ ಆಗದಿರಲಿ: ಸಮಾಜಕ್ಕಾಗಿ ನನ್ನ ಗಂಡ ಸಾಕಷ್ಟುಕೆಲಸ ಮಾಡಿದರು. ರಾತ್ರಿ ಅದೆಷ್ಟು ಹೊತ್ತಾದರೂ ಏನೇ ಸಮಸ್ಯೆ ಅಂತ ಫೋನ್ ಬಂದರೂ ನನ್ನ ಗಂಡ ಹೋಗಿ ಸಹಾಯಕ್ಕೆ ನಿಲ್ಲುತ್ತಿದ್ದರು. ಇಂದು ನಾನು ನನ್ನ ಗಂಡನನ್ನು ಕಳೆದುಕೊಂಡಿದ್ದೇನೆ. ನನಗೆ ನನ್ನ ಗಂಡನನ್ನು ಪುನಃ ತಂದು ಕೊಡಲು ಆಗುವುದಿಲ್ಲ. ಆದರೂ ಸರ್ಕಾರದ ಬಳಿ ನಾನು ಕೇಳಿಕೊಳ್ಳುವುದು ಇಷ್ಟೇ, ನನ್ನ ಗಂಡನಂತೆ ಅದೆಷ್ಟೋ ಮಂದಿ ಕೆಲಸ ಮಾಡುತ್ತಿರುತ್ತಾರೆ. ಅವರಿಗೆ ಈ ರೀತಿ ಆಗದಂತೆ ಯಾವುದಾದ್ರೂ ಕಾನೂನು ತೆಗೆದುಕೊಂಡು ಬರಲಿ ಅಷ್ಟೇ ಎಂದು ಕಣ್ಣೀರುಗರೆದವರು ಪ್ರವೀಣ್ ಪತ್ನಿ ನೂತನ. ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಅವರು ಪತಿಯ ಕೊಂದವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇನ್ನು ಯಾಕೋ ಗಲಭೆ ಎಬ್ಬಿಸಿಲ್ಲ ಬಿಜೆಪಿಯವ್ರು, ಪ್ರವೀಣ್ ಹತ್ಯೆ ಪ್ರಕರಣ ಕುರಿತು ಜಾರಕಿಹೊಳಿ ವ್ಯಂಗ್ಯ!
ಬಿಜೆಪಿ ಯುವ ಮೋರ್ಚಾ ಮುಖಂಡನ ಭೀಕರ ಹತ್ಯೆ: ಬಿಜೆಪಿ ಯುವ ಮುಖಂಡನೊಬ್ಬನನ್ನು ಮಾರಕಾಸ್ತ್ರದಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಮಂಗಳವಾರ ರಾತ್ರಿ ನಡೆದಿದ್ದು ಜಿಲ್ಲೆ ಉದ್ವಿಗ್ನಗೊಂಡಿದೆ. ಬೆಳ್ಳಾರೆಯ ಮೇಲಿನ ಪೇಟೆಯಲ್ಲಿ ಚಿಕನ್ ಅಂಗಡಿ ನಡೆಸುತ್ತಿದ್ದ, ಬಿಜೆಪಿ ಯುವ ಮೋರ್ಚಾ ಮುಖಂಡನೂ ಆಗಿರುವ ಪ್ರವೀಣ್ ನೆಟ್ಟಾರು ಮೃತಪಟ್ಟವರು. ಕೆಲ ದಿನಗಳ ಹಿಂದಷ್ಟೇ ಗುಂಪು ಹಲ್ಲೆಗೊಳಗಾಗಿ ಮೃತಪಟ್ಟ ಯುವಕನೊಬ್ಬನ ಕೊಲೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎಂದು ಹೇಳಲಾಗಿದ್ದು ಆಮಾಯಕನ ಕೊಲೆಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಪುತ್ತೂರಿನಲ್ಲಿ ರಾತ್ರೋರಾತ್ರಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುವ ಮೊದಲು ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಪ್ರತಿಭಟನಾನಿರತರು ಆಗ್ರಹಿಸಿದರು. ಪ್ರವೀಣ್ ನೆಟ್ಟಾರು ಮೃತದೇಹ ಇರಿಸಲಾಗಿದ್ದ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದ.ಕ. ಎಸ್ಪಿ ಋುಷಿಕೇಶ್ ಸೋನಾವಣೆ ಮಂಗಳವಾರ ರಾತ್ರಿ ಭೇಟಿ ನೀಡಿದರು. ದುರ್ಘಟನೆ ಹಿನ್ನೆಲೆಯಲ್ಲಿ ಪುತ್ತೂರು, ಸುಳ್ಯ ಮತ್ತು ಕೇರಳ ಗಡಿ ಭಾಗಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದಾರೆ. ಈ ಪರಿಸರದಲ್ಲಿ ನಾಕಾಬಂದಿ ಹಾಕಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಬಿಜೆಪಿ ಮುಖಂಡನ ಹತ್ಯೆ ಹಿಂದೆ ಸರ್ ತನ್ ಸೆ ಜುದಾ? ಕನ್ಹಯ ಶಿರಚ್ಚೇದ ಖಂಡನೆಗೆ ಕೊಲೆ ಶಂಕೆ!
ಘಟನೆ ವಿವರ: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿರುವ ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ಅವರ ಅಂಗಡಿ ಬಳಿ ಬೈಕ್‌ನಲ್ಲಿ ಬಂದ ಮೂವರು ಹಿಂದಿನಿಂದ ದಾಳಿ ನಡೆಸಿ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಇಲ್ಲಿಗೆ ಸಮೀಪದ ಕಳಂಜದಲ್ಲಿ ಗುಂಪು ಹಲ್ಲೆಗೊಳಗಾಗಿದ್ದ ಮಸೂದ್ ಎಂಬ ಯುವಕ ಚಿಕಿತ್ಸೆ ಫಲಕಾರಿ ಆಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಪ್ರಕರಣಕ್ಕೆ ಸಂಬಂಧಿಸಿ ಎಂಟು ಆರೋಪಿಗಳು ಬಂಧಿಸಲ್ಪಟ್ಟಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದರ ಬೆನ್ನಿಗೇ ಈ ಘಟನೆ ನಡೆದಿರುವುದರಿಂದ ಪ್ರತೀಕಾರ ಎಂಬ ಶಂಕೆ ಮೂಡಿದೆ.