ಬಿಜೆಪಿ ಮುಖಂಡನ ಹತ್ಯೆ ಹಿಂದೆ ಸರ್ ತನ್ ಸೆ ಜುದಾ? ಕನ್ಹಯ ಶಿರಚ್ಚೇದ ಖಂಡನೆಗೆ ಕೊಲೆ ಶಂಕೆ!
ಪುತ್ತೂರಿನ ಬಿಜೆಪಿ ಮುಖಂಡನ ಹತ್ಯೆ ಸರ್ ತನ್ ಸೆ ಜುದಾ? ಕನ್ಹಯ್ಯ ಶಿರಚ್ಛೇದ ಖಂಡನೆಗೆ ಕೊಲೆ? ನಡೆದಿದೆ ಅನ್ನೋ ಮಾತು, ಮುಸ್ಲಿಂ ಯುವಕನ ಕೊಲೆಗೆ ಪ್ರತೀಕಾರಕ್ಕಾಗಿ ಹತ್ಯೆ ಅನ್ನೋ ಅನುಮಾನಗಳು ಕಾಡತೊಡಗಿದೆ.
ಸುಳ್ಯ(ಜು.27): ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಇದೀಗ ರಾಜ್ಯ ಹಾಗೂ ದೇಶದಲ್ಲಿ ಭಾರಿ ಪ್ರತಿಭಟನೆಗೆ ಕಾರಣವಾಗಿದೆ. ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಲೇ ಇದೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಕಾರ್ಯಕರ್ತರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಅನ್ನೋ ಆಕ್ರೋಶ ಹೆಚ್ಚಾಗುತ್ತಿದೆ. ಇತ್ತ ಕೊಲೆ ತನಿಖೆಗೆ ಚುರುಕುಗೊಂಡಿದೆ. ಇದರ ನಡುವೆ ಈ ಕೊಲೆ ಕನ್ಹಯ್ಯ ಲಾಲ್ ಟೈಲರ್ ಹತ್ಯೆಗೆ ಖಂಡಿಸಿದ ಕಾರಣಕ್ಕೆ ನಡೆದಿಯಾ ಅನ್ನೋ ಅನುಮಾನಗಳು ಕಾಡತೊಡಗಿದೆ. ಇದಕ್ಕೆ ಪೂರಕವಾದ ಕೆಲ ಮಾಹಿತಿಗಳು ಬಹಿರಂಗವಾಗಿದೆ. ಜೈಪುರದ ಹಿಂದೂ ಟೈಲರ್ ಕನ್ಹಯ್ಯ ಲಾಲ್ ಹತ್ಯೆ ಪ್ರಕರಣ ಖಂಡಿಸಿ ಪ್ರವೀಣ್ ನೆಟ್ಟಾರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದೇ ಕಾರಣಕ್ಕೆ ಪ್ರವೀಣ್ ಕೊಲೆ ನಡೆದಿಯಾ ಅನ್ನೋ ಅನುಮಾನಗಳು ಕಾಡತೊಡಗಿದೆ. ಇದರ ಜೊತೆಗೆ ಇತ್ತೀಚಿಗೆ ಮುಸ್ಲಿಮ್ ಯುವಕನ ಕೊಲೆಗೆ ಪ್ರತೀಕಾರವಾಗಿ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿದೆ ಅನ್ನೋ ಮಾತುಗಳು ಕೇಳಿಬಂದಿದೆ.
ಕೆಲ ದಿನಗಳ ಹಿಂದಷ್ಟೇ ಗುಂಪು ಹಲ್ಲೆಗೊಳಗಾಗಿ ಮೃತಪಟ್ಟಯುವಕನೊಬ್ಬನ ಕೊಲೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದೆ ಎಂದು ಹೇಳಲಾಗಿದ್ದು ಆಮಾಯಕನ ಕೊಲೆಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ಪುತ್ತೂರಿನಲ್ಲಿ ರಾತ್ರೋರಾತ್ರಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯುವ ಮೊದಲು ಜಿಲ್ಲಾಧಿಕಾರಿ ಸ್ಥಳಕ್ಕೆ ಬರುವಂತೆ ಪ್ರತಿಭಟನಾನಿರತರು ಆಗ್ರಹಿಸಿದರು. ಪ್ರವೀಣ್ ನೆಟ್ಟಾರು ಮೃತದೇಹ ಇರಿಸಲಾಗಿದ್ದ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದ.ಕ. ಎಸ್ಪಿ ಋುಷಿಕೇಶ್ ಸೋನಾವಣೆ ಮಂಗಳವಾರ ರಾತ್ರಿ ಭೇಟಿ ನೀಡಿದರು. ದುರ್ಘಟನೆ ಹಿನ್ನೆಲೆಯಲ್ಲಿ ಪುತ್ತೂರು, ಸುಳ್ಯ ಮತ್ತು ಕೇರಳ ಗಡಿ ಭಾಗಗಳಲ್ಲಿ ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದಾರೆ. ಈ ಪರಿಸರದಲ್ಲಿ ನಾಕಾಬಂದಿ ಹಾಕಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿರುವ ಪ್ರವೀಣ್ ನೆಟ್ಟಾರು ಬೆಳ್ಳಾರೆಯಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದರು. ಮಂಗಳವಾರ ರಾತ್ರಿ ಸುಮಾರು 9 ಗಂಟೆಗೆ ಅವರ ಅಂಗಡಿ ಬಳಿ ಬೈಕ್‌ನಲ್ಲಿ ಬಂದ ಮೂವರು ಹಿಂದಿನಿಂದ ದಾಳಿ ನಡೆಸಿ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಇಲ್ಲಿಗೆ ಸಮೀಪದ ಕಳಂಜದಲ್ಲಿ ಗುಂಪು ಹಲ್ಲೆಗೊಳಗಾಗಿದ್ದ ಮಸೂದ್ ಎಂಬ ಯುವಕ ಚಿಕಿತ್ಸೆ ಫಲಕಾರಿ ಆಗದೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಪ್ರಕರಣಕ್ಕೆ ಸಂಬಂಧಿಸಿ ಎಂಟು ಆರೋಪಿಗಳು ಬಂಧಿಸಲ್ಪಟ್ಟಿದ್ದು ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದರ ಬೆನ್ನಿಗೇ ಈ ಘಟನೆ ನಡೆದಿರುವುದರಿಂದ ಪ್ರತೀಕಾರ ಎಂಬ ಶಂಕೆ ಬಂದಿದೆ.