ಶಾಸಕ ಜಮೀರ್‌ ವಿರುದ್ಧ ಸಿಎಂಗೆ ಸಂಬರಗಿ ದೂರು

Kannadaprabha News   | Asianet News
Published : Sep 23, 2020, 10:39 AM IST
ಶಾಸಕ ಜಮೀರ್‌ ವಿರುದ್ಧ ಸಿಎಂಗೆ ಸಂಬರಗಿ ದೂರು

ಸಾರಾಂಶ

ಚೀನಾ ಗೂಢ​ಚಾ​ರಿಕೆ ವೇಳೆ ಜಮೀರ್‌ ನಿಗೂಢ ಪ್ರವಾ​ಸ| ವಿದೇಶ ಪ್ರವಾ​ಸದ ಬಗ್ಗೆ ತನಿ​ಖೆಗೆ ಕೋರಿ​ಕೆ| ಚೀನಾ ದೇಶವು 10 ಸಾವಿರಕ್ಕೂ ಹೆಚ್ಚು ಮಂದಿ ಭಾರತೀಯರ ಮೇಲೆ ಗೂಢಚಾರಿಕೆ ಮಾಡುತ್ತಿದೆ| ಜಮೀರ್‌  ತಮ್ಮ ವಿದೇಶ ಪ್ರವಾಸಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದಾರೆ: ಸಂಬರಗಿ| 

ಬೆಂಗಳೂರು(ಸೆ.23): ಹಾಲಿ ಶಾಸಕ ಹಾಗೂ ಮಾಜಿ ಸಚಿವ ಜಮೀರ್‌ ಅಹಮದ್‌ಖಾನ್‌ ಅವರು ಸಂಬಂಧಪಟ್ಟವರ ಅನುಮತಿ ಇಲ್ಲದೆ ಶಿಷ್ಟಾಚಾರ ಉಲ್ಲಂಘಿಸಿ ಹಲವಾರು ಬಾರಿ ವಿದೇಶ ಪ್ರವಾಸ ಮಾಡಿದ್ದು, ಅವರ ಅನುಮಾನಾಸ್ಪದ ನಡೆ ಬಗ್ಗೆ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್‌ ಸಂಬರಗಿ ಅವರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಚೀನಾ ದೇಶವು 10 ಸಾವಿರಕ್ಕೂ ಹೆಚ್ಚು ಮಂದಿ ಭಾರತೀಯರ ಮೇಲೆ ಗೂಢಚಾರಿಕೆ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಜಮೀರ್‌ ಅವರು ತಮ್ಮ ವಿದೇಶ ಪ್ರವಾಸಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದಾರೆ. ಇದು ಅವರ ಉದ್ದೇಶಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುವಂತೆ ಮಾಡುತ್ತಿದೆ. ಹೀಗಾಗಿ ಜಮೀರ್‌ ಅಹಮದ್‌ ಖಾನ್‌ ಅವರ ಅನುಮಾನಾಸ್ಪದ ನಡೆ ಬಗ್ಗೆ ತನಿಖೆ ನಡೆಸಬೇಕು ಎಂದು ಮನವಿ ಪತ್ರ ಸಲ್ಲಿಸಿದರು.
ಮಂಗಳವಾರ ವಿಧಾನಸೌಧದಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಅವರು, ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ನಿಯಮಾವಳಿ ಪ್ರಕಾರ ಯಾವುದೇ ಸಚಿವರು, ಶಾಸಕರು ವಿದೇಶ ಪ್ರವಾಸಕ್ಕೆ ಹೋಗುವ ಮೊದಲು ಮುಖ್ಯ ಕಾರ್ಯದರ್ಶಿಗಳು, ಮುಖ್ಯಮಂತ್ರಿಗಳ ಕಚೇರಿ ಅಥವಾ ರಾಜ್ಯ ಶಿಷ್ಟಾಚಾರದ ಅಧಿಕಾರಿಯ ಅನುಮತಿ ಪಡೆದುಕೊಳ್ಳಬೇಕು.

ಆದರೆ ಜಮೀರ್‌ ಕಳೆದ 5 ವರ್ಷದಲ್ಲಿ ಕೊಲಂಬೋ ಸೇರಿ ಹಲವು ದೇಶಗಳಿಗೆ ಪ್ರವಾಸ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡಿಲ್ಲ. ಅವರು 2018 ಜೂನ್‌ 6ರಿಂದ 2019 ಜುಲೈ 9ರವರೆಗೆ ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಈ ವೇಳೆ ಅವರು 2019ರ ಜೂನ್‌8ರಿಂದ 10ರವರೆಗೆ ವಿದೇಶ ಪ್ರವಾಸ ಮಾಡಿದ್ದಾರೆ. ಇದನ್ನು ಸಂಬಂಧಪಟ್ಟಅಧಿಕಾರಿಗಳಿಂದ ಮುಚ್ಚಿಟ್ಟಿದ್ದಾರೆ ಎಂದು ದೂರಿದರು.

ಜಮೀರ್‌ಗೆ ಸಂಜನಾ ಜೊತೆ ಅನೈತಿಕ ಸಂಬಂಧ ಇದೆ ಎಂದು ಹೇಳಿಲ್ಲ! ಪ್ರಶಾಂತ್ ಸಂಬರಗಿ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಬರಗಿ, ‘ಜಮೀರ್‌ ಬಗ್ಗೆ ಆರ್‌ಟಿಐ ಮೂಲಕ ಮಾಹಿತಿ ಕಲೆ ಹಾಕಿದ್ದೇನೆ. ಪ್ರೊಟೋಕಾಲ್‌ ಪ್ರಕಾರ ಅವರು ವಿದೇಶ ಪ್ರವಾಸಕ್ಕೆ ತೆರಳಿರುವ ಬಗ್ಗೆ ಯಾವುದೇ ಅನುಮತಿ ಪಡೆದ ದಾಖಲೆಗಳು ಲಭ್ಯವಾಗಿಲ್ಲ. ಹೀಗಾಗಿ ದೂರು ನೀಡಿದ್ದೇನೆ. ಡ್ರಗ್ಸ್‌ ಜಾಲದ ಬಗ್ಗೆ ಏನೂ ಚರ್ಚೆ ಮಾಡಿಲ್ಲ’ ಎಂದರು.

ನಿನ್ನೆಯೂ ‘ಸ್ಫೋ​ಟ​ಕ ​ಸು​ದ್ದಿ​ಗೋಷ್ಠಿ​’ ನಡೆಸದ ಸಂಬರಗಿ

ಬೆಂಗ​ಳೂ​ರು: ಸ್ಟಾರ್‌ ನಟರ ದಾಖಲೆ ಸಂಗ್ರಹ ನೆಪ ಹೇಳಿ ಪತ್ರಿಕಾಗೋಷ್ಠಿಯನ್ನು ಮುಂದೂಡಿದ್ದ ಸಂಬರಗಿ, ಮಂಗಳವಾರ ಸಹ ಯಾವುದೇ ಪತ್ರಿಕಾಗೋಷ್ಠಿ ನಡೆಸದೆ ಮುಗುಮ್ಮಾಗಿರುವುದು ಕುತೂಹಲ ಮೂಡಿಸಿದೆ. ಮೂರು ದಿನ ಹಿಂದೆಯೇ ಮಾದಕ ವಸ್ತು ಜಾಲದಲ್ಲಿ ತೊಡಗಿರುವ ಇಬ್ಬರು ಸ್ಟಾರ್‌ ನಟರ ಹೆಸರನ್ನು ಸೋಮವಾರ ಪತ್ರಿಕಾಗೋಷ್ಠಿ ಕರೆದು ಬಹಿರಂಗಪಡಿಸುವುದಾಗಿ ಸಂಬರಗಿ ಹೇಳಿದ್ದರು.

ಹೀಗಾಗಿ ಸಂಬರಗಿ ನಡೆಸಲಿದ್ದ ಸೋಮವಾರ ಸ್ಫೋಟಕ ಸುದ್ದಿಗೋಷ್ಠಿ ಬಗ್ಗೆ ಸಾಮಾಜಿಕ ಜಾಲ ತಾಣ ಹಾಗೂ ಚಲನಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಚರ್ಚೆ ಹುಟ್ಟು ಹಾಕಿತ್ತು. ಆದರೆ, ನಾನು ಸ್ಟಾರ್‌ ನಟರ ಹೆಸರನ್ನು ಸಾರ್ವಜನಿಕವಾಗಿ ಹೇಳುತ್ತೇನೆ. ಇದು ಕೇವಲ ಆರೋಪಕ್ಕೆ ಮಾತ್ರ ಸಿಮೀತವಾಗಬಾರದು. ನನ್ನ ಆರೋಪಗಳಿಗೆ ಸೂಕ್ತ ದಾಖಲೆಗಳನ್ನು ಸಂಗ್ರಹಿಸುತ್ತಿದ್ದೇನೆ. ಮಂಗಳವಾರ ಸುದ್ದಿಗೋಷ್ಠಿ ನಡೆಸಲಿದ್ದೇನೆ. ಅಲ್ಲಿ ಸಾಕ್ಷ್ಯ ಸಮೇತ ಕೆಲವರ ಬಗ್ಗೆ ಮಾತನಾಡುತ್ತೇನೆ ಎಂದು ಸಂಬರಗಿ ಹೇಳಿಕೊಂಡಿದ್ದರು. ಇದೀಗ ಮಂಗಳವಾರವೂ ಅವರು ಪತ್ರಿಕಾಗೋಷ್ಠಿ ನಡೆಸಲಿಲ್ಲ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಶಾಲೆಯಿಂದ ಮರಳುತ್ತಿದ್ದ ವೇಳೆ ಬೀದಿ ನಾಯಿ ದಾಳಿ, 5 ವರ್ಷದ LKG ಬಾಲಕಿಗೆ ಗಂಭೀರ ಗಾಯ
ಕರ್ನಾಟಕದಲ್ಲಿ ನಿಮ್ಹಾನ್ಸ್ ಮಾದರಿಯ ಮತ್ತಷ್ಟು ಸಂಸ್ಥೆಗಳು ಅಗತ್ಯ: ಸಚಿವ ಶರಣ ಪ್ರಕಾಶ್ ಪಾಟೀಲ್