ಲೋಕಸಭಾ ಚುನಾವಣೆ : ಈ ಕ್ಷೇತ್ರದಿಂದ ಸ್ಪರ್ಧೆಗೆ ಪ್ರಕಾಶ್ ರೈ ತಯಾರಿ

By Web DeskFirst Published Jan 21, 2019, 9:38 AM IST
Highlights

ಲೋಕಸಭಾ ಚುನಾವಣೆಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿರುವ ನಟ ಪ್ರಕಾಶ್ ರಾಜ್ ಪ್ರಜಾ ಪ್ರಣಾಳಿಕೆ ಅಭಿಯಾನವನ್ನು ವಿದ್ಯುಕ್ತವಾಗಿ ಆರಂಭಿಸಿದ್ದಾರೆ. 

ಬೆಂಗಳೂರು : ಮುಂದಿನ ಲೋಕಸಭಾ ಚುನಾವಣೆಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ‘ಜನರ ದನಿ’ ಘೋಷ ವಾಕ್ಯದಡಿ ಚುನಾವಣಾ ಕಣಕ್ಕಿಳಿಯಲು ಸಜ್ಜಾಗಿರುವ ನಟ ಪ್ರಕಾಶ್‌ ರಾಜ್‌, ಪ್ರಣಾಳಿಕೆ ಸಿದ್ಧಪಡಿಸುವ ಸಂಬಂಧ ಪ್ರಜಾ ಪ್ರಣಾಳಿಕೆ ಅಭಿಯಾನವನ್ನು ವಿದ್ಯುಕ್ತವಾಗಿ ಆರಂಭಿಸಿದರು.

ಎಂ.ಜಿ.ರಸ್ತೆಯ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗದಲ್ಲಿ ಭಾನುವಾರ ಅಭಿಯಾನಕ್ಕೆ ಚಾಲನೆ ನೀಡಿದರು. ಎಂಟು ತಂಡಗಳು ಆಟೋಗಳಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ಸಂಚರಿಸುವ ಪ್ರಜಾ ಪ್ರಣಾಳಿಕೆ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿದರು.

ಅಭಿಯಾನವು ಸರ್‌ ಸಿ.ವಿ.ರಾಮನ್‌ ನಗರ ವಿಧಾನಸಭಾ ಕ್ಷೇತ್ರದಿಂದ ಆರಂಭಗೊಂಡಿದೆ. ಮುಂದಿನ 10 ದಿನದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸರ್‌.ಸಿ.ವಿ.ರಾಮನ್‌ನಗರ, ಸರ್ವಜ್ಞನಗರ, ಮಹದೇವಪುರ, ಶಾಂತಿನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ ಮತ್ತು ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜನತೆಯಿಂದ ಸಮಸ್ಯೆ, ಕುಂದುಕೊರತೆ, ಮೂಲಭೂತ ಸಮಸ್ಯೆಗಳ ಕುರಿತು ತಂಡ ನೇರವಾಗಿ ಮಾಹಿತಿ ಪಡೆದುಕೊಳ್ಳಲಿದೆ. ಬಳಿಕ ಕ್ಷೇತ್ರಕ್ಕೆ ಅಗತ್ಯವಾದ ಪ್ರಣಾಳಿಕೆಯನ್ನು ಸಿದ್ಧಪಡಿಸಲಿದ್ದಾರೆ.

ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪ್ರಕಾಶ್‌ ರಾಜ್‌, ಜನರ ದನಿಯಾಗಿ ಸಂಸತ್‌ಗೆ ಪ್ರವೇಶಿಸಲು ಇಚ್ಛಿಸಿರುವ ಹಿನ್ನೆಲೆಯಲ್ಲಿ ಜನತೆಯ ಸಮಸ್ಯೆಗಳನ್ನು ಆಲಿಸಲು ತಮ್ಮ ತಂಡವು ಭಾನುವಾರದಿಂದ ಕಾರ್ಯಾಚರಣೆ ಕೈಗೊಳ್ಳಲಿದೆ.

ತಮ್ಮ ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತ್ತು ಇಷ್ಟುವರ್ಷವಾದರೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಏಕೆ ಸಾಧ್ಯವಾಗಿಲ್ಲ ಎಂಬುದು ಸೇರಿದಂತೆ ಹಲವು ವಿಷಯ ಕುರಿತು ನೇರವಾಗಿ ಜನರೊಂದಿಗೆ ಮಾತನಾಡುತ್ತೇವೆ. 8 ವಿಧಾನಸಭಾ ಕ್ಷೇತ್ರದ ಬೇರೆ ಬೇರೆ ಬಡಾವಣೆಯಲ್ಲಿ ಸಾಗಿ ಅಭಿಪ್ರಾಯಗಳನ್ನು ಕ್ರೋಢೀಕರಿಸಲಾಗುವುದು. ಈ ವೇಳೆ ಜನರ ನಾಡಿ ಏನೆಂಬುದನ್ನು ತಿಳಿದುಕೊಳ್ಳಲಾಗುವುದು. ಸಂಸದರ ಸ್ಥಾನಮಾನ ಇತ್ಯಾದಿಗಳ ಬಗ್ಗೆ ಅಧ್ಯಯನ ನಡೆಸಿ ಜನಪ್ರತಿನಿಧಿಯಾಗಿ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೇನೆ ಎಂದು ತಿಳಿಸಿದರು.

click me!