ಶಶಿಕಲಾಗೆ ಜೈಲಿನಲ್ಲಿ ಸ್ಪೆಷಲ್‌ ಟ್ರೀಟ್‌ಮೆಂಟ್‌ : ಹೇಗಿದೆ ವೈಭೋಗ

By Web DeskFirst Published Jan 21, 2019, 8:53 AM IST
Highlights

ಎಐಡಿಎಂಕೆ ನಾಯಕಿ ವಿ.ಶಶಿಕಲಾ ನಟರಾಜನ್ ಗೆ ಕಾನೂನುಬಾಹಿರವಾಗಿ ವಿಶೇಷ ಅತಿಥ್ಯ ನೀಡಲಾಗಿತ್ತು ಎಂದು ವರದಿಯಲ್ಲಿ ಬಹಿರಂಗವಾಗಿದೆ. 

ಬೆಂಗಳೂರು :  ಭ್ರಷ್ಟಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಎಐಡಿಎಂಕೆ ನಾಯಕಿ ವಿ.ಶಶಿಕಲಾ ನಟರಾಜನ್‌ ಹಾಗೂ ನಕಲಿ ಛಾಪಾಕಾಗದ ಹಗರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕರೀಂ ಲಾಲಾ ತೆಲಗಿಗೆ ಕಾನೂನುಬಾಹಿರವಾಗಿ ‘ವಿಶೇಷ ಅತಿಥ್ಯ’ ನೀಡಲಾಗಿತ್ತು ಎಂದು ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ ಕುಮಾರ್‌ ಅವರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಹೇಳಿದ್ದಾರೆ.

ಶಶಿಕಲಾ ಹಾಗೂ ಅವರ ಸಂಬಂಧಿ ಇಳವರಸಿ ಅವರು ಶಿಕ್ಷೆಗೆ ಗುರಿಯಾದ ದಿನದಿಂದಲೂ ‘ಎ- ದರ್ಜೆ’ ಸೌಲಭ್ಯ ನೀಡಲಾಗಿದ್ದು, ಅಡುಗೆ ಮಾಡಲು ಪ್ರತ್ಯೇಕ ಕೊಠಡಿ ಸೇರಿದಂತೆ ಐದು ಕೊಠಡಿಯನ್ನು ಒದಗಿಸಲಾಗಿತ್ತು ಎಂದು ಹೇಳಲಾಗಿದೆ.

ಜೈಲು ಅಕ್ರಮದ ಕುರಿತು ತನಿಖೆಗೆ ರಾಜ್ಯ ಸರ್ಕಾರ ರಚಿಸಿದ್ದ ವಿನಯ್‌ ಕುಮಾರ್‌ ನೇತೃತ್ವದ ಸಮಿತಿ ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಪ್ರತಿ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದ್ದು, ಶಶಿಕಲಾ ಹಾಗೂ ಅವರ ಸಂಬಂಧಿ ಜೆ.ಇಳವರಸಿ ಅವರ ಖಾಸಗಿ ಬಳಕೆಗೆ ಮಹಿಳಾ ಬ್ಯಾರಕ್‌ನ ಮೊದಲ ಮಹಡಿಯಲ್ಲಿ ಐದು ಕೊಠಡಿಯುಳ್ಳ ಕಾರಿಡಾರನ್ನೇ ನೀಡಲಾಗಿತ್ತು. ಐದರಲ್ಲಿ ಒಂದನ್ನು ಶಶಿಕಲಾ ಅಧಿಕೃತವಾಗಿ ಬಳಕೆ ಮಾಡುತ್ತಿದ್ದರೆ, ನಾಲ್ಕು ಕೊಠಡಿಗಳನ್ನು ಯಾರಿಗೂ ಜೈಲು ಅಧಿಕಾರಿಗಳು ನೀಡಿರಲಿಲ್ಲ.

ಶಶಿಕಲಾ ಅವರಿಗೆ ನೀಡಲಾಗಿರುವ ಐದು ಕೋಣೆಗಳ ಪೈಕಿ ಒಂದನ್ನು ಅಡುಗೆ ಮಾಡಲು ಬಳಸಲಾಗಿದೆ. ಶಶಿಕಲಾಗೆ ಅಡುಗೆ ಮಾಡಿಕೊಡಲು ಅಜಂತಾ ಎಂಬ ಮಹಿಳಾ ಕೈದಿಯನ್ನು ಜೈಲು ಸಿಬ್ಬಂದಿ ನೇಮಿಸಿದ್ದರು. ಈಕೆಯೇ ನಿತ್ಯ ಶಶಿಕಲಾ ಹಾಗೂ ಇಳವರಸಿಗೆ ಅಡುಗೆ ತಯಾರಿಸಿ ಕೊಡುತ್ತಿದ್ದಳು ಎಂದು ವರದಿಯಲ್ಲಿ ಹೇಳಲಾಗಿದೆ.

ಮೊದಲಿಗೆ ಯಾವುದೇ ಕುಕ್ಕರ್‌ ಇನ್ನಿತರ ಪರಿಕರಗಳು ಇಲ್ಲ ಎಂದು ಜೈಲು ಸಿಬ್ಬಂದಿ ಹೇಳಿತ್ತು. 2017ರ ಜು.19ರಂದು ಸಮಿತಿ ಮಹಿಳಾ ಬ್ಯಾರಕ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಸಮಿತಿ ಸದಸ್ಯರು ಕೊಠಡಿ ಪರಿಶೀಲನೆ ನಡೆಸುವ ವೇಳೆ ಐದು ಕೊಠಡಿಯ ಪೈಕಿ ಒಂದರಲ್ಲಿ ಅರಿಶಿನಪುಡಿ ಪ್ಯಾಕೆಟ್‌ ಪತ್ತೆಯಾಯಿತು. ನಂತರ ಕೊಠಡಿಯಲ್ಲಿ ಕುಕ್ಕರ್‌ ಬಳಸಿ ಅಡುಗೆ ಮಾಡಿರುವುದು ಬೆಳಕಿಗೆ ಬಂದಿದೆ. ಅರಿಶಿನಪುಡಿಯ ಪ್ಯಾಕೆಟ್‌ ಸಿಕ್ಕಿದ್ದು, ತನಿಖೆ ವೇಳೆ ಬಲವಾದ ಸಾಕ್ಷ್ಯವಾಗಿದೆ.

ಇನ್ನು ಶಶಿಕಲಾ ಇದ್ದ ಕೊಠಡಿಯ ಬಾಗಿಲಿಗೆ ಪರದೆ ಹಾಕಲಾಗಿತ್ತು. ಈ ಬಗ್ಗೆ ಜೈಲು ಅಧಿಕಾರಿಗಳ ವಿಚಾರಣೆ ನಡೆಸಿದಾಗ, ಬೆಕ್ಕುಗಳು ಹೆಚ್ಚಾಗಿರುವ ಕಾರಣ ಪರದೆ ಹಾಕಲಾಗಿತ್ತು ಎಂದು ಸಮಜಾಯಿಷಿ ನೀಡಿದ್ದರು. ಭದ್ರತೆಯ ಕಾರಣಕ್ಕೆ ಶಶಿಕಲಾ ಅವರಿದ್ದ ಅಕ್ಕಪಕ್ಕದ ಕೋಣೆಯಲ್ಲಿ ಇತರೆ ಯಾವುದೇ ಕೈದಿಗಳನ್ನು ಇರಿಸಿರಲಿಲ್ಲ. ಹೀಗಾಗಿ ಕಾರಿಡಾರ್‌ನ ಇತರೆ ಕೊಠಡಿಗಳನ್ನು ಖಾಲಿ ಬಿಡಲಾಗಿತ್ತು ಎಂದು ಜೈಲು ಸಿಬ್ಬಂದಿ ಹೇಳಿದೆ. ಆದರೆ ಈ ಕೊಠಡಿಗಳನ್ನು ಶಶಿಕಲಾ ಮತ್ತು ಇಳವರಸಿ ಅವರು ಬಟ್ಟೆಗಳನ್ನು ಇಡಲು ಬಳಸಿಕೊಂಡಿದ್ದರು.

ಶಶಿಕಲಾ ಅವರ ಭೇಟಿಗೆ ಬರುವ ಸಂಬಂಧಿಕರು ಹಾಗೂ ಸ್ನೇಹಿತರೊಂದಿಗೆ ಮಾತನಾಡಲು ಒಂದು ಕೊಠಡಿಯನ್ನು ಬಳಸಲಾಗುತ್ತಿತ್ತು. ಅಲ್ಲದೆ, ಇವರ ಕೊಠಡಿಯಲ್ಲಿ ಮಂಚ, ಹೊದಿಕೆ ಹಾಗೂ ಪ್ರಸಿದ್ಧ ಕಂಪನಿಯ ಎಲ್‌ಇಡಿ ಟಿ.ವಿ. ಇಡಲಾಗಿತ್ತು. ಇಂತಹ ಸೌಲಭ್ಯ ಬೇರೆ ಯಾವುದೇ ಬ್ಯಾರಕ್‌ನಲ್ಲಿ ಕೈದಿಗಳಿಗೆ ನೀಡಿಲ್ಲ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ದೊಡ್ಡ ಪ್ರಮಾದ:

ನ್ಯಾಯಾಲಯದ ಸೂಚನೆ ಇಲ್ಲದಿದ್ದರೂ ಶಶಿಕಲಾ ಮತ್ತು ಇಳವರಸಿ ಅವರಿಗೆ ‘ಎ-ದರ್ಜೆ’ ಸೌಲಭ್ಯ ನೀಡಲಾಗಿತ್ತು. ನ್ಯಾಯಾಲಯ ಮತ್ತೊಮ್ಮೆ ಸ್ಪಷ್ಟವಾಗಿ ಶಶಿಕಲಾ ಪ್ರಕರಣದಲ್ಲಿ ‘ಎ-ದರ್ಜೆ’ ಸೌಲಭ್ಯ ನೀಡುವಂತಿಲ್ಲ ಎಂದು ಹೇಳಿದ ಮೇಲೂ ಇವರಿಬ್ಬರಿಗೆ ನೀಡಲಾಗಿದ್ದ ‘ಎ-ದರ್ಜೆ’ಯ ಸೌಲಭ್ಯವನ್ನು ಸಿಬ್ಬಂದಿ ಹಿಂಪಡೆದಿರಲಿಲ್ಲ. ಹೀಗಾಗಿ ಇದು ಜೈಲು ಅಧಿಕಾರಿಗಳು ಎಸಗಿದ ದೊಡ್ಡ ಪ್ರಮಾದ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಮಹಿಳಾ ಬ್ಯಾರಕ್‌ನ ಗೇಟಿನ ಮುಂದೆ ಶಶಿಕಲಾ ಮತ್ತು ಇಳವರಿಸಿ ಬ್ಯಾಗ್‌ ಸಮೇತ ನಿಂತಿದ್ದ ವಿಡಿಯೋ ವೈರಲ್‌ ಆಗಿದ್ದ ಬಗ್ಗೆ ಪರಿಶೀಲಿಸಲಾಯಿತು. ಶಶಿಕಲಾ ಮತ್ತು ಇಳವರಸಿ ಸಂಬಂಧಿಕರನ್ನು ಭೇಟಿ ಮಾಡಲು ಹೋಗಿದ್ದರು ಎಂದು ಹೇಳಲಾಗಿದೆ. ಆದರೆ ಜೈಲಿನ ಸಿಸಿಟಿವಿಯ ದೃಶ್ಯಾವಳಿ ಸೆರೆಯಾಗಿರುವ ಸಮಯಕ್ಕೂ ಶಶಿಕಲಾ ಹಾಗೂ ಇಳವರಸಿ ಹೊರಗೆ ಬಂದ ಸಮಯಕ್ಕೂ ಹೊಂದಾಣಿಕೆ ಆಗುತ್ತಿಲ್ಲ. ಉದ್ದೇಶಪೂರ್ವಕವಾಗಿ ಜೈಲಿನ ಸಿಬ್ಬಂದಿ ದಾಖಲೆಗಳನ್ನು ಮರೆಮಾಚಲು ಯತ್ನಿಸಿದೆ ಎಂಬುದು ಸ್ಪಷ್ಟವಾಗಿ ಗೊತ್ತಾಗಿದೆ.

ತೆಲಗಿ ಕೇಸಲ್ಲೂ ನಿಯಮ ಉಲ್ಲಂಘನೆ:

ನಕಲಿ ಛಾಪಾ ಕಾಗದ ಹಗರಣದಲ್ಲಿ ಶಿಕ್ಷೆಗೆ ಗುರಿಯಾಗಿ ಜೈಲಿನಲ್ಲೇ ಸಾವನ್ನಪ್ಪಿರುವ ಕರೀಂ ಲಾಲಾ ತೆಲಗಿಗೆ ನೀಡಲಾಗಿದ್ದ ಸೌಲಭ್ಯದ ವಿಚಾರದಲ್ಲೂ ಕಾನೂನು ಉಲ್ಲಂಘನೆಯಾಗಿರುವುದು ಕಂಡುಬಂದಿದೆ. ತೆಲಗಿ ಇದ್ದ ಕೊಠಡಿಯ ಪರಿಶೀಲನೆ ನಡೆಸಿದಾಗ ಅಲ್ಲಿ ಮಂಚ, ಹೊದಿಕೆ, ಕುರ್ಚಿ ಹಾಗೂ ಟಿ.ವಿ. ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆತನ ಸಹಾಯಕ್ಕಾಗಿ ನಾಲ್ವರು ವಿಚಾರಣಾಧಿನ ಕೈದಿಗಳನ್ನು ನೀಡಲಾಗಿತ್ತು ಎಂದು ಸಮಿತಿಯ ವರದಿ ನೀಡಿದೆ.

ಶಶಿಕಲಾ ಸೇರಿ ಕೆಲವರಿಂದ ಹಣ ಪಡೆದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಅತಿಥ್ಯ ನೀಡಲಾಗುತ್ತಿದೆ ಎಂದು ಅಂದಿನ ಕಾರಾಗೃಹ ಇಲಾಖೆ ಡಿಐಜಿಯಾಗಿದ್ದ ಡಿ.ರೂಪಾ ಅವರು ವರದಿ ನೀಡಿದ್ದರು. ರೂಪಾ ಅವರ ವರದಿ ಸೋರಿಕೆಯಾಗಿ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಜೈಲಿನಲ್ಲಿನ ವ್ಯವಸ್ಥೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸರ್ಕಾರ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ಕುಮಾರ್‌ ಅವರ ನೇತೃತ್ವದಲ್ಲಿ ಸಮಿತಿಯನ್ನು ನೇಮಕ ಮಾಡಿತ್ತು.

ಜೈಲಿನ ಅಕ್ರಮದ ಬಗ್ಗೆ ನಾನು ಮೊದಲು ತನಿಖೆ ನಡೆಸಿ ವರದಿ ನೀಡಿದ್ದೆ. ಈ ಬಗ್ಗೆ ಸಾಕಷ್ಟುಚರ್ಚೆಯಾಗಿ ಸರ್ಕಾರ ಪ್ರತ್ಯೇಕವಾಗಿ ನಿವೃತ್ತ ಐಎಎಸ್‌ ಅಧಿಕಾರಿಯ ನೇತೃತ್ವದಲ್ಲಿ ತನಿಖೆಗಾಗಿ ಸಮಿತಿ ರಚಿಸಿತ್ತು. ಸಮಿತಿ ಸಂಪೂರ್ಣ ತನಿಖೆ ನಡೆಸಿ ವರದಿ ನೀಡಿರುವುದು ತೃಪ್ತಿಕರವಾಗಿದೆ. ನಾನು ನೀಡಿದ್ದ ವರದಿಗಿಂತ ಹೆಚ್ಚು ತನಿಖೆ ಮಾಡಿ ಹಲವು ವಿಚಾರಗಳನ್ನು ಬಯಲಿಗೆ ಎಳೆಯಲಾಗಿದೆ.

- ಡಿ.ರೂಪಾ, ಡಿಐಜಿ

click me!