
ಬೆಂಗಳೂರು (ಏ.29): ಹಾಸನದ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಬೆನ್ನಲ್ಲೇ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಚ್.ಡಿ.ರೇವಣ್ಣ ವಿರುದ್ಧವೂ ಅದೇ ಆರೋಪ ಕೇಳಿಬಂದಿದೆ. ಇದೀಗ ಪುತ್ರನ ಜತೆಗೆ ಎಚ್.ಡಿ.ರೇವಣ್ಣ ಸಹ ಸಂಕಷ್ಟಕ್ಕೆ ಸಿಲುಕಿದ್ದು, ಬಂಧನದ ಭೀತಿ ಎದುರಾಗಿದೆ. ಈಗಾಗಲೇ ಪ್ರಜ್ವಲ್ ರೇವಣ್ಣ ಹಲವು ಮಹಿಳೆಯರ ಮೇಲೆ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಈ ಸಂಬಂಧ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಮಗ್ರ ತನಿಖೆ ನಡೆಸಲು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಇದರ ಬೆನ್ನಲ್ಲೇ ಭಾನುವಾರ ಮಹಿಳೆಯೊಬ್ಬರು ತನ್ನ ಮೇಲೆ ಎಚ್.ಡಿ.ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಹೊಳೆನರಸೀಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರು ಆಧರಿಸಿ ಪೊಲೀಸರು ತಂದೆ-ಮಗನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಉಪ್ಪು ತಿಂದವ್ರು ನೀರು ಕುಡೀಬೇಕು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್‌ಗೆ ಎಚ್‌ಡಿಕೆ ಪ್ರತಿಕ್ರಿಯೆ
ಈ ಪ್ರಕರಣದಲ್ಲಿ ಎಚ್.ಡಿ.ರೇವಣ್ಣ 1ನೇ ಆರೋಪಿಯಾಗಿದ್ದಾರೆ. ಹೀಗಾಗಿ ಪುತ್ರನ ಜತೆಗೆ ಎಚ್.ಡಿ.ರೇವಣ್ಣ ಅವರು ಸಂಕಷ್ಟಕ್ಕೆ ಗುರಿಯಾಗಿದ್ದು, ಬಂಧನದ ಭೀತಿಯಲ್ಲಿದ್ದಾರೆ. ಈ ಪ್ರಕರಣವು ಶೀಘ್ರದಲ್ಲೇ ಎಸ್‌ಐಟಿಗೆ ವರ್ಗಾವಣೆಯಾಗಲಿದ್ದು, ತಂದೆ-ಮಗನಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ನೀಡುವ ಸಾಧ್ಯತೆಯಿದೆ.
ಮಹಿಳಾ ಕಾಂಗ್ರೆಸ್ ಪ್ರತಿಭಟನೆ: ಲೈಂಗಿಕ ದೌರ್ಜನ್ಯ ಆರೋಪಕ್ಕೆ ಗುರಿಯಾಗಿರುವ ಹಾಸನ ಜೆಡಿಎಸ್ ಸಂಸದ ಹಾಗೂ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಭಾನುವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಮೇಯರ್ ಪದ್ಮಾವತಿ ಮತ್ತಿತರ ಮಹಿಳಾ ಮುಖಂಡರ ನೇತೃತ್ವದಲ್ಲಿ ನೃಪತುಂಗ ರಸ್ತೆಯ ಡಿಜಿ ಕಚೇರಿ ಮುಂದೆ ನೂರಾರು ಸಂಖ್ಯೆಯಲ್ಲಿ ಸೇರಿದ ಪಕ್ಷದ ಮಹಿಳಾ ಕಾರ್ಯಕರ್ತೆಯರು, ವಿದೇಶಕ್ಕೆ ಪಲಾಯನ ಮಾಡಿರುವ ಪ್ರಜ್ವಲ್ ರೇವಣ್ಣನನ್ನು ಕೂಡಲೇ ಬಂಧಿಸುವಂತೆ ಭಿತ್ತಿಪತ್ರ ಹಿಡಿದು ಆಗ್ರಹಿಸಿದರು.
ಬರ ಪರಿಹಾರ ಅನ್ಯಾಯ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಈ ವೇಳೆ ಮಾತನಾಡಿದ ಅವರು, ನೂರಾರು ಮುಗ್ಧ ಮಹಿಳೆಯರ ಮೇಲೆ ಪ್ರಜ್ವಲ್ ರೇವಣ್ಣ ಬಹಿರಂಗವಾಗಿ ದಬ್ಬಾಳಿಕೆ, ಲೈಂಗಿಕ ದೌರ್ಜನ್ಯ ನಡೆಸಿ ದೇವೇಗೌಡರು, ಅವರ ಕುಟುಂಬ ಹಾಗೂ ಕರ್ನಾಟಕ ರಾಜ್ಯದ ಗೌರವವನ್ನು ಮಣ್ಣು ಪಾಲು ಮಾಡಿದ್ದಾರೆ. ಈ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಮ್ಮ ಕುಟುಂಬದ ಇಂತಹ ಒಬ್ಬ ಸದಸ್ಯನ ಪೈಶಾಚಿಕ ಕೃತ್ಯವನ್ನು ಏಕೆ ಖಂಡಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ