
ಬೆಂಗಳೂರು (ಮೇ.12): ಯಾವುದೇ ವಿಚಾರ ಇರಲಿ, ಬಿಜೆಪಿಯವರಿಗೆ ಸುಳ್ಳು ಆರೋಪ ಮಾಡುವುದೇ ಕಸುಬು ಆಗಿದೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ನಾವು ಪೊಲೀಸ್ ತನಿಖೆಯಲ್ಲಿ ಮಧ್ಯೆಪ್ರವೇಶ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಹಿಂದೆ ಇದೇ ಬಿಜೆಪಿಯವರು ಸಿಬಿಐ ಬಗ್ಗೆ ಏನು ಹೇಳಿದ್ರು ಗೊತ್ತಾ? ಸಿಬಿಐ ಅಂದ್ರೆ ಕರಪ್ಶನ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅಂತ ಹೇಳಿದ್ರು. ಈಗ ಅವರೇ ಈ ಪ್ರಜ್ವಲ್ ಪ್ರಕರಣ ಸಿಬಿಐಗೆ ಒಪ್ಪಿಸುವಂತೆ ಹೇಳ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ನಾವು ಎಷ್ಟು ಬಾರಿ ಕೇಳಿದ್ದೇವೆ. ಯಾವತ್ತಾದರೂ ಒಂದು ಪ್ರಕರಣವನ್ನಾದರೂ ಸಿಬಿಐಗೆ ವಹಿಸಿದ್ರಾ ಅವರು? ಪ್ರಕರಣವನ್ನು ಸಿಬಿಐಗೆ ಕೊಡಿ ಎಂದು ಆಗ್ರಹಿಸುವುದಕ್ಕೆ ಜೆಡಿಎಸ್-ಬಿಜೆಪಿಗೆ ಯಾವ ನೈತಿಕತೆ ಇದೆ? ಹಿಂದೆ ನಾನು 7 ಕೇಸ್ ಕೊಟ್ಟಿದ್ದೆ ಸಿಬಿಐಗೆ ಆ ಕೇಸ್ ಗಳಲ್ಲಿ ಏನಾಯ್ತು? ಪರೇಶ್ ಮೆಸ್ತಾ ಕೇಸಲ್ಲಿ ಏನ್ರಿ ಆಯ್ತು? ಪ್ರಲ್ಹಾದ್ ಜೋಶಿ ಜವಾಬ್ದಾರಿಯಿಂದ ಮಾತಾಡಲಿ ಎಂದು ಹರಿಹಾಯ್ದರು.
ಪ್ರಜ್ವಲ್ ರೇವಣ್ಣ ಪ್ರಕರಣ ಯಾವುದೇ ಕಾರಣಕ್ಕೂ ಸಿಬಿಐಗೆ ವಹಿಸೊಲ್ಲ: ಸಿಎಂ
ಸಿಬಿಐ ಮೇಲೆ ನನಗೆ ನಂಬಿಕೆ ಇಲ್ಲಾ ಅಂತಲ್ಲ, ನಮ್ಮ ಪೊಲೀಸರ ಮೇಲೆ ಹೆಚ್ಚು ನಂಬಿಕೆ ಇದೆ. ಇವರಿಗೆ ನಮ್ಮ ಪೊಲೀಸರ ಮೇಲೆ ನಂಬಿಕೆ ಇಲ್ವಾ? ಎಂದು ಪ್ರಶ್ನಿಸಿದರು. ಇನ್ನು ಈ ಪ್ರಕರಣದಲ್ಲಿ ದೇವರಾಜೇಗೌಡರನ್ನ ಅರೆಸ್ಟ್ ಮಾಡಿರೋದು ಸಂತ್ತಸ್ತೆ ನೀಡಿರುವ ದೂರಿನ ಮೇಲೆ. ಈ ಪ್ರಕರಣದಲ್ಲಿ ನಾವು ಮಧ್ಯೆಪ್ರವೇಶ ಮಾಡಿಲ್ಲ. ಎಸ್‌ಐಟಿ ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಯುತ್ತಿದೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಸುಮ್ಮನೆ ಆರೋಪ ಮಾಡುತ್ತಾರೆ ಎಂದರು.
ಇನ್ನು ರಾಹುಲ್ ಗಾಂಧಿಯಿಂದ ಸವಾಲು ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ನಮಗೆ(ಕಾಂಗ್ರೆಸ್) ಧೈರ್ಯವಿದೆ, ಆತ್ಮಸ್ಥೈರ್ಯವಿದೆ. ಯಾಕೆ ಅಂದ್ರೆ ನಾವು ಸತ್ಯ ಹೇಳುತ್ತೇವಲ್ಲ? ಅದಕ್ಕೆ ನಾವು ಬಹಿರಂಗ ಚರ್ಚೆಗೆ ಸಿದ್ಧರಿದ್ದೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ