ಪವರ್‌ ಪಾಯಿಂಟ್‌: ದ್ವೇಷ ಭಾಷಣ ಮಸೂದೆಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ

Kannadaprabha News, Ravi Janekal |   | Kannada Prabha
Published : Dec 20, 2025, 09:57 AM IST
PowerPoint Hate Speech Bill Threatens Freedom of Expression shobha karandlaje

ಸಾರಾಂಶ

ಈ ಮಸೂದೆ ಸರ್ಕಾರಿ ಅಧಿಕಾರಿಗಳಿಗೆ ಜನರು ಯಾವ ಮಾತನಾಡಲು ಅನುಮತಿಸಬಹುದು ಎಂಬುದನ್ನು ನಿರ್ಧರಿಸುವ ಅಧಿಕಾರ ನೀಡುತ್ತದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ಅಪಾಯ ಉಂಟುಮಾಡುವ ಮಾತುಗಳನ್ನು ಮಾತ್ರ ಗುರಿಯಾಗಿಸದೆ, ಸರ್ಕಾರವಿರೋಧಿ ಧ್ವನಿಗಳನ್ನು ಮುಚ್ಚಿಹಾಕುವ ಸಾಧನವಾಗಿ ಪರಿವರ್ತನೆಗೊಳ್ಳಬಹುದು 

ಶೋಭಾ ಕರಂದ್ಲಾಜೆ

ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ

ಕರ್ನಾಟಕ ವಿಧಾನಸಭೆಯಲ್ಲಿ ಇತ್ತೀಚೆಗೆ ಅಂಗೀಕೃತಗೊಂಡ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ-2025 ಗಂಭೀರ ಸಾಂವಿಧಾನಿಕ ಕಳವಳಗಳನ್ನು ಹುಟ್ಟುಹಾಕಿದೆ. ಈ ಮಸೂದೆಯನ್ನು ಸಂವಿಧಾನದ ಆರ್ಟಿಕಲ್‌ 200ರ ಅಡಿಯಲ್ಲಿ, ರಾಷ್ಟ್ರಪತಿಗಳ ಪರಿಶೀಲನೆಗೆ ಕಾಯ್ದಿರಿಸಬೇಕು ಎಂಬ ಒತ್ತಾಯಗಳು ಎದ್ದಿವೆ. ಇದು ದ್ವೇಷ ಭಾಷಣ ಮತ್ತು ಅಪರಾಧಗಳನ್ನು ತಡೆಯುವ ಉದ್ದೇಶ ಹೊಂದಿದ್ದರೂ, ಇದರಿಂದ ಪ್ರಜಾಪ್ರಭುತ್ವದ ಸ್ವಾತಂತ್ರ್ಯಗಳಿಗೆ ಧಕ್ಕೆಯಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಈ ಮಸೂದೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ, ಇದು ಸರ್ಕಾರಿ ನಿಯಂತ್ರಿತ ವ್ಯವಸ್ಥೆಗೆ ಜನರ ಮಾತುಗಳ ಮೇಲೆ ನಿಗಾ ವಹಿಸುವ, ಮೌಲ್ಯಮಾಪನ ಮಾಡುವ ಮತ್ತು ಶಿಕ್ಷೆ ವಿಧಿಸುವ ವಿಶಾಲವಾದ ಅಧಿಕಾರ ನೀಡುತ್ತದೆ. ಈ ಮಸೂದೆಯು ಸರ್ಕಾರಿ ಅಧಿಕಾರಿಗಳಿಗೆ ಜನರು ಯಾವ ಮಾತನಾಡಲು ಅನುಮತಿಸಬಹುದು ಎಂಬುದನ್ನು ನಿರ್ಧರಿಸುವ ಅಧಿಕಾರ ನೀಡುತ್ತದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ಸ್ಪಷ್ಟ ಮತ್ತು ತಕ್ಷಣದ ಅಪಾಯ ಉಂಟುಮಾಡುವ ಮಾತುಗಳನ್ನು ಮಾತ್ರ ಗುರಿಯಾಗಿಸದೆ, ಸರ್ಕಾರದ ವಿರೋಧಿ ಧ್ವನಿಗಳನ್ನು ಮುಚ್ಚಿಹಾಕುವ ಸಾಧನವಾಗಿ ಪರಿವರ್ತನೆಗೊಳ್ಳಬಹುದು. ಅಂತಿಮವಾಗಿ, ಸಂವಿಧಾನದಲ್ಲಿ ಖಾತರಿಪಡಿಸಿದ ಮಾತಿನ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯಕ್ಕೆ ಧಕ್ಕೆ ಬೀಳುತ್ತದೆ.

ಸಾಂವಿಧಾನಿಕ ಆಶಯಗಳಿಗೆ ವಿರುದ್ಧ:

ಸಂವಿಧಾನದ 19(1)(ಎ) ಅನುಚ್ಛೇದ ಪ್ರತಿಯೊಬ್ಬ ಪೌರನಿಗೆ ಮಾತು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ನೀಡುತ್ತದೆ. ಇದಕ್ಕೆ ಕೇವಲ ಅನುಚ್ಛೇದ 19(2)ರಲ್ಲಿ ಹೇಳಿದ ನಿರ್ದಿಷ್ಟ ನಿರ್ಬಂಧಗಳು ಮಾತ್ರ ಅನ್ವಯ. ಆದರೆ ಈ ಮಸೂದೆಯಲ್ಲಿ ‘ಅಸೌಹಾರ್ದತೆ’, ‘ದ್ವೇಷ’, ‘ಪೂರ್ವಾಗ್ರಹಪೀಡಿತ ಹಿತಾಸಕ್ತಿ’ ಎಂಬ ಅಸ್ಪಷ್ಟ ಪದಗಳು ಬಳಕೆಯಾಗಿವೆ. ಇವುಗಳ ಅರ್ಥ ಸ್ಪಷ್ಟವಿಲ್ಲದ ಕಾರಣ ಸರ್ಕಾರಿ ಅಧಿಕಾರಿಗಳು ತಮ್ಮ ಇಚ್ಛೆಯಂತೆ ಬಳಸಿಕೊಳ್ಳಬಹುದು. ಇದು ತಾರತಮ್ಯ ಮತ್ತು ದುರುಪಯೋಗಕ್ಕೆ ದಾರಿ ಮಾಡಿಕೊಡುತ್ತದೆ. ಇದು ಸಂವಿಧಾನದತ್ತ ಅವಕಾಶಗಳಿಗೆ ಹೊಂದಿಕೆಯಾಗುವುದಿಲ್ಲ.

ಮಾತಿನ ನಿಯಂತ್ರಣ ಕಾಯ್ದೆಗಳು ಸ್ಪಷ್ಟವಾಗಿರಬೇಕು ಮತ್ತು ಕಿರಿದಾದ ಮಿತಿಯಲ್ಲಿರಬೇಕು. ಅದರಲ್ಲಿ ಯಾವುದೇ ಅಸ್ಪಷ್ಟತೆ ಇರಬಾರದು. ಕಾನೂನುಗಳು ಅಸ್ಪಷ್ಟತೆಯಿಂದ ಕೂಡಿದ್ದರೆ ಜನರು ಭಯದಿಂದ ಮಾತನಾಡದಂತೆ ಆಗುತ್ತದೆ ಎಂದು ಸುಪ್ರೀಂ ಕೋರ್ಟ್‌ನ ಶ್ರೇಯಾ ಸಿಂಘಲ್ ಪ್ರಕರಣದ (2015) ತೀರ್ಪು ಸ್ಪಷ್ಟವಾಗಿ ಹೇಳಿದೆ. ಪ್ರಸ್ತುತ ಮಸೂದೆಯ ನಿಬಂಧನೆಗಳು ಇದೇ ರೀತಿಯ ಸಾಂವಿಧಾನಿಕ ದೋಷಗಳಿಂದ ಬಳಲುತ್ತಿದ್ದು, ಅದರ ಸಿಂಧುತ್ವದ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕುತ್ತಿದೆ. ಈ ಮಸೂದೆಯ ಇನ್ನೊಂದು ದೊಡ್ಡ ಸಮಸ್ಯೆಯೆಂದರೆ, ತನಿಖೆ ಮತ್ತು ತೀರ್ಪಿನ ಅಧಿಕಾರಗಳು ಸರ್ಕಾರಿ ಇಲಾಖೆಯಲ್ಲೇ ಕೇಂದ್ರೀಕೃತವಾಗಿವೆ. ನ್ಯಾಯಾಲಯದ ಸಹಭಾಗಿತ್ವ ಕಡಿಮೆಯಿದೆ. ಶಿಕ್ಷೆಗಳನ್ನು ನೇರವಾಗಿ ಸರ್ಕಾರಿ ಅಧಿಕಾರಿಗಳ ನಿರ್ಧಾರಕ್ಕೆ ಜೋಡಿಸಲಾಗಿದೆ. ಇದರಿಂದ ಮೂಲಭೂತ ಹಕ್ಕುಗಳನ್ನು ಕಾಪಾಡಲು ಬೇಕಾದ ನ್ಯಾಯಸಮ್ಮತ ರಕ್ಷಣೆಗಳು ದುರ್ಬಲಗೊಳ್ಳುತ್ತವೆ. ಇಂತಹ ವ್ಯವಸ್ಥೆಯು ನ್ಯಾಯಯುತ ಪ್ರಕ್ರಿಯೆ ಮತ್ತು ಅಧಿಕಾರಗಳನ್ನು ಪ್ರತ್ಯೇಕವಾಗಿರಿಸುವ ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ.

ದಮನಿತರ ಧ್ವನಿ ಅಡಗಿಸುವ ಅಪಾಯ:

ವಿಶೇಷವಾಗಿ ಆತಂಕ ತರುವ ಸಂಗತಿಯೆಂದರೆ, ಈ ಮಸೂದೆಯು ಐತಿಹಾಸಿಕವಾಗಿ ದಮನಿತ ಮತ್ತು ಸಂವಿಧಾನದಲ್ಲಿ ರಕ್ಷಣೆ ಪಡೆದ ಗುಂಪುಗಳ ಮೇಲೆ ಉಂಟುಮಾಡಬಹುದಾದ ಪರಿಣಾಮ. ಮಸೂದೆಯಲ್ಲಿರುವ ಅಸ್ಪಷ್ಟ ಪದಗಳನ್ನು ಕನ್ನಡ ಭಾಷಾ ಹೋರಾಟಗಾರರು, ಮಹಿಳಾ ಸಂಘಟನೆಗಳು, ದಲಿತರು, ಆದಿವಾಸಿಗಳು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಪತ್ರಕರ್ತರು, ವಿದ್ಯಾರ್ಥಿ ಸಂಘಟನೆಗಳು ಮತ್ತು ಸಮಾಜ ಸೇವಾ ಸಂಸ್ಥೆಗಳ ವಿರುದ್ಧ ಬಳಸಿಕೊಳ್ಳಬಹುದು. ದುರ್ಬಲ ಸಮುದಾಯಗಳಿಗೆ ಶಕ್ತಿ ನೀಡುವ ಬದಲು, ಈ ಕಾಯ್ದೆಯು ಅವರ ಧ್ವನಿಯನ್ನು ಮುಚ್ಚಿಹಾಕಿ, ಸರಿಯಾದ ಟೀಕೆಗಳನ್ನು ತಡೆಯಬಹುದು. ಆಡಳಿತ, ಸಾಮಾಜಿಕ ನ್ಯಾಯ ಮತ್ತು ಜವಾಬ್ದಾರಿಯ ಬಗ್ಗೆ ಸಾರ್ವಜನಿಕ ಚರ್ಚೆಯಲ್ಲಿ ಭಾಗವಹಿಸದಂತೆ ಮಾಡಬಹುದು. ಇಂತಹ ಫಲಿತಾಂಶವು ಸಂವಿಧಾನದಲ್ಲಿ ಭರವಸೆ ನೀಡಿರುವ ಸಮಾನತೆ, ಘನತೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತರುತ್ತದೆ.

ಈ ಮಸೂದೆಗೆ ಸಮಾಜ ಸೇವಾ ಸಂಘಟನೆಗಳು, ಪತ್ರಕರ್ತರ ಸಂಘಗಳು, ಕಾನೂನು ಸಂಸ್ಥೆಗಳು ಮತ್ತು ಇತರ ಸಾಮಾಜಿಕ ಹಿತಾಸಕ್ತ ವ್ಯಕ್ತಿಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಅನೇಕರು ಈ ಕಾಯ್ದೆಯು ಸಂವಿಧಾನ ವಿರೋಧಿ ಎಂದು ಟೀಕಿಸಿದ್ದಾರೆ. ಇದು ಸೂಕ್ತವಾದ ವಿಮರ್ಶೆ ಹಾಗೂ ವಿರೋಧಾಭಿಪ್ರಾಯಗಳನ್ನು ಮುಚ್ಚಿಹಾಕಲು ದುರುಪಯೋಗವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ ಈ ನಿಯಮಗಳು ಸಾರ್ವಜನಿಕ ಚರ್ಚೆಯ ಮೇಲೆ ಎಲ್ಲೆಡೆ ಭಯದ ವಾತಾವರಣ ಸೃಷ್ಟಿಸಿ, ಜನರು ಮಾತನಾಡಲು ಹೆದರುವಂತೆ ಮಾಡಬಹುದು. ಇದು ಪ್ರಜಾಪ್ರಭುತ್ವದ ಆಡಳಿತಕ್ಕೆ ಪೂರ್ತಿ ವಿರುದ್ಧವಾಗಿದೆ.

ರಾಷ್ಟ್ರಪತಿ ಪರಿಶೀಲನೆಯೇ ಸೂಕ್ತ:

ಈ ಮಸೂದೆಯು ಸಂವಿಧಾನದ ಮೂರನೇ ಭಾಗದಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಗಂಭೀರ ಸಾಂವಿಧಾನಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಆದ್ದರಿಂದ, ಸಂವಿಧಾನದ 200ನೇ ಅನುಚ್ಛೇದದಡಿ ರಾಜ್ಯಪಾಲರ ವಿವೇಚನಾಧಿಕಾರವನ್ನು ಬಳಸುವುದಕ್ಕೆ ಇದು ಸೂಕ್ತ ಪ್ರಕರಣ. ಈ ಮಸೂದೆಯನ್ನು ಮಾನ್ಯ ರಾಷ್ಟ್ರಪತಿಗಳ ಪರಿಶೀಲನೆಗೆ ಕಾಯ್ದಿರಿಸಿದರೆ, ನಾಗರಿಕ ಸ್ವಾತಂತ್ರ್ಯಗಳು ಮತ್ತು ಒಕ್ಕೂಟ ವ್ಯವಸ್ಥೆಯ ಮೇಲೆ ಆಗುವ ಪರಿಣಾಮಗಳ ಬಗ್ಗೆ ವಿಶಾಲವಾದ ಸಾಂವಿಧಾನಾತ್ಮಕ ಪರೀಕ್ಷೆ ನಡೆಯಬಹುದು.

ಸಾಂವಿಧಾನಾತ್ಮಕ ಆಡಳಿತ, ಪ್ರಜಾಪ್ರಭುತ್ವದ ಸ್ವಾತಂತ್ರ್ಯಗಳು ಮತ್ತು ಕಾನೂನು ರಕ್ಷಣೆಯ ಹಿತದೃಷ್ಟಿಯಿಂದ, ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ-2025ಕ್ಕೆ ಅನುಮೋದನೆ ನೀಡದೆ ತಡೆಹಿಡಿಯಬೇಕು. ಸಂವಿಧಾನದ ಮೌಲ್ಯಗಳ ರಕ್ಷಣೆಗಾಗಿ ಈ ಮಸೂದೆಯನ್ನು ರಾಷ್ಟ್ರಪತಿಗಳ ಪರಿಶೀಲನೆಗೆ ಕಾಯ್ದಿರಿಸುವುದು ಅತ್ಯಗತ್ಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಲಕ್ಷ್ಮಿ ಹೆಬ್ಬಾಳ್ಕರ್ ಅವರೇ, ಫೆಬ್ರವರಿ-ಮಾರ್ಚ್ ಹಣ ಯಾವಾಗ ಬರುತ್ತೆ? ಸದನಕ್ಕೆ ತಪ್ಪು ಮಾಹಿತಿ ವಿರುದ್ಧ ರೊಚ್ಚಿಗೆದ್ದ ಗೃಹಲಕ್ಷ್ಮಿಯರು!
ಬೆಳಗಾವಿ ಅಧಿವೇಶನ ಕೊನೆ ದಿನವೂ ಗದ್ದಲ: ವಿಪಕ್ಷ, ಸಂಘಟನೆಗಳಿಂದ ಪ್ರತಿಭಟನೆ!