ವಾಹನ ವಿಮೆ ನವೀಕರಣಕ್ಕೆ ಪೊಲೀಸ್‌ ಎನ್‌ಒಸಿ ಕಡ್ಡಾಯ?: ಸರ್ಕಾರಕ್ಕೆ ಸಂಚಾರ ಪೊಲೀಸರಿಂದ ಮನವಿ ಸಲ್ಲಿಕೆ

Published : Feb 04, 2023, 09:42 AM IST
ವಾಹನ ವಿಮೆ ನವೀಕರಣಕ್ಕೆ ಪೊಲೀಸ್‌ ಎನ್‌ಒಸಿ ಕಡ್ಡಾಯ?: ಸರ್ಕಾರಕ್ಕೆ ಸಂಚಾರ ಪೊಲೀಸರಿಂದ ಮನವಿ ಸಲ್ಲಿಕೆ

ಸಾರಾಂಶ

ಸಂಚಾರ ನಿಯಮ ಉಲ್ಲಂಘನೆಯ ಹಳೇ ಪ್ರಕರಣಗಳ ದಂಡ ಪಾವತಿಗೆ ರಿಯಾಯಿತಿ ನೀಡಿದ ಬೆನ್ನಲ್ಲೇ ದಂಡ ಪಾವತಿಸದ ವಾಹನಗಳ ವಿಮೆ (ಇನ್‌ಶ್ಯೂರೆನ್ಸ್‌) ನವೀಕರಣಕ್ಕೆ ಪೊಲೀಸರ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‌ಒಸಿ) ಪಡೆಯುವುದು ಕಡ್ಡಾಯಗೊಳಿಸುವ ನಿಯಮ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಸಂಚಾರ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದಾರೆ.  

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು (ಫೆ.04): ಸಂಚಾರ ನಿಯಮ ಉಲ್ಲಂಘನೆಯ ಹಳೇ ಪ್ರಕರಣಗಳ ದಂಡ ಪಾವತಿಗೆ ರಿಯಾಯಿತಿ ನೀಡಿದ ಬೆನ್ನಲ್ಲೇ ದಂಡ ಪಾವತಿಸದ ವಾಹನಗಳ ವಿಮೆ (ಇನ್‌ಶ್ಯೂರೆನ್ಸ್‌) ನವೀಕರಣಕ್ಕೆ ಪೊಲೀಸರ ನಿರಾಕ್ಷೇಪಣಾ ಪ್ರಮಾಣ ಪತ್ರ (ಎನ್‌ಒಸಿ) ಪಡೆಯುವುದು ಕಡ್ಡಾಯಗೊಳಿಸುವ ನಿಯಮ ರೂಪಿಸುವಂತೆ ರಾಜ್ಯ ಸರ್ಕಾರಕ್ಕೆ ಸಂಚಾರ ಪೊಲೀಸರು ಪ್ರಸ್ತಾವನೆ ಸಲ್ಲಿಸಿದ್ದಾರೆ.

ಸಂಚಾರ ನಿಯಮಗಳ ಕಟ್ಟು ನಿಟ್ಟಾಗಿ ಜಾರಿಗೊಳಿಸುವ ಸಂಬಂಧ ಹಳೇ ಪ್ರಕರಣಗಳ ದಂಡ ಪಾವತಿಗೆ ರಿಯಾಯಿತಿ, ವಾಹನಗಳ ವಿಮೆ ಮತ್ತು ಸರಕು ಸಾಗಾಣಿಕೆ ವಾಹನಗಳ ಸಾಮರ್ಥ್ಯ (ಫಿಟ್ನೆಸ್‌) ನವೀಕರಣ ಪ್ರಮಾಣ ಪಡೆಯಲು ಪೊಲೀಸರ ಎನ್‌ಓಸಿ ಕಡ್ಡಾಯ ನಿಯಮ ಜಾರಿ ಸೇರಿ ಮೂರು ಪ್ರಸ್ತಾವನೆಗಳನ್ನು ಮುಂದಿಡಲಾಗಿತ್ತು. ಈಗ ಎರಡು ಪ್ರಸ್ತಾವನೆಗಳಿಗೆ ಸರ್ಕಾರವು ಸಮ್ಮತಿಸಿದೆ. ಇನ್ನುಳಿದ ವಿಮೆ ನವೀಕರಣ ನಿಯಮದ ಜಾರಿಗೆ ಕೂಡಾ ಮನವಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಟ್ರಾಫಿಕ್‌ ದಂಡ ಪಾವತಿಗೆ ಮುಗಿಬಿದ್ದ ಜನ: ಒಂದೇ ದಿನ 5.6 ಕೋಟಿ ಸಂಗ್ರಹ!

ಈಗಾಗಲೇ ಸಾರಿಗೆ ಇಲಾಖೆಯಲ್ಲಿ ಸರಕು ಸಾಗಾಣಿಕೆ ವಾಹನಗಳಿಗೆ ಪೊಲೀಸರ ಎನ್‌ಓಸಿ ಇಲ್ಲದೆ ನವೀಕರಣ ನಿರಾಕರಿಸಿದ್ದಾರೆ. ಇದರಿಂದ ಸರಕು ಸಾಗಾಣಿಕೆ ವಾಹನಗಳಿಂದ ಹಳೇ ಪ್ರಕರಣಗಳ ದಂಡ ಬಾಕಿ ವಸೂಲಿ ಪ್ರಗತಿಯಲ್ಲಿದೆ. ಈಗ ಎಲ್ಲ ವಾಹನಗಳಿಗೆ ದಂಡ ಪಾವತಿಗೆ ರಿಯಾಯಿತಿ ನೀಡಿರುವುದರಿಂದ ಜನರಿಗೆ ಆರ್ಥಿಕವಾಗಿ ಹೊರೆ ತಪ್ಪಿದೆ. ಈ ಅವಕಾಶವನ್ನು ಬಳಸಿಕೊಂಡು ದಂಡ ಪಾವತಿಸಲು ನಿರ್ಲಕ್ಷ್ಯತನ ತೋರುವವರಿಗೆ ಬಿಸಿ ಮುಟ್ಟಿಸುವುದು ಅನಿರ್ವಾಯವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಮೆಗೆ ಪೊಲೀಸರ ಬ್ರೇಕ್‌: ಪ್ರತಿ ವರ್ಷ ವಾಹನಗಳ ವಿಮೆ ನವೀಕರಣ ಮಾಡಿಸಬೇಕಾಗುತ್ತದೆ. ವಿಮೆ ಇಲ್ಲದ ವಾಹನಗಳನ್ನು ಬಳಸಿದರೆ ದ್ವಿಚಕ್ರ ವಾಹನಗಳಿಗೆ ಒಂದು ಸಾವಿರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಎರಡು ಸಾವಿರ ರು ದಂಡ ವಿಧಿಸಲಾಗುತ್ತದೆ. ವಾಹನ ಚಾಲನೆ ವೇಳೆ ಚಾಲನಾ ಪರವಾನಿಗೆ ಜೊತೆ ಸಂಬಂಧಪಟ್ಟವಾಹನದ ವಿಮೆ ಮಾಡಿಸಿರುವ ದಾಖಲೆಯನ್ನು ಹೊಂದಿರಬೇಕು. ಅಲ್ಲದೆ ಅಪಘಾತಗಳು ಸಂಭವಿಸಿದಾಗ ವಿಮೆ ಇಲ್ಲದೆ ಹೋದರೆ ಆರ್ಥಿಕ ನೆರವು ಪಡೆಯಲು ಸಾಧ್ಯವಿಲ್ಲ. ಹೀಗಾಗಿ ತಮ್ಮ ವಾಹನಗಳಿಗೆ ಮಾಲೀಕರು ವಿಮೆ ಮಾಡಿಸುವ ಆಸಕ್ತಿ ತೋರುತ್ತಾರೆ. ಆಗ ಸಂಚಾರ ನಿಯಮ ಉಲ್ಲಂಘನೆಯ ಹಳೇ ಪ್ರಕರಣಗಳ ಬಾಕಿ ವಸೂಲಿಗೆ ಕ್ರಮ ಜರುಗಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ಅಪೌಷ್ಠಿಕ ಮಕ್ಕಳಿಗೆ ವಾರಕ್ಕೆ 2ರ ಬದಲಿಗೆ 5 ಮೊಟ್ಟೆ ನೀಡಿ: ಆಡಳಿತ ಸುಧಾರಣಾ ಆಯೋಗದಿಂದ ವರದಿ ಸಲ್ಲಿಕೆ

ಸರ್ಕಾರದ ಸಮ್ಮತಿ ಸಾಧ್ಯತೆ: ಒಂದೇ ಬಾರಿಗೆ ವಿಮಾ ನವೀಕರಣಕ್ಕೆ ಪೊಲೀಸರ ಎನ್‌ಓಸಿ ನಿಯಮ ಅನುಷ್ಠಾನಗೊಳಿಸಿದರೆ ಸಾರ್ವಜನಿಕರಿಂದ ವ್ಯತಿರಿಕ್ತ ಪ್ರತಿಕ್ರಿಯೆ ವ್ಯಕ್ತವಾಗಬಹುದು ಎಂದು ಸರ್ಕಾರ ಅಭಿಪ್ರಾಯಪಟ್ಟಿತು. ಈಗ ದಂಡ ಪಾವತಿಗೆ ರಿಯಾಯಿತಿ ನೀಡಿದ ಬಳಿಕ ವಿಮೆ ನವೀಕರಣಕ್ಕೆ ಪೊಲೀಸರ ಎನ್‌ಓಸಿ ಕಡ್ಡಾಯ ನಿಯಮ ಜಾರಿಗೆ ಒಪ್ಪಿಗೆ ಕೊಡಬಹುದು ಎಂದು ಅಧಿಕಾರಿಗಳ ಅಭಿಮತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ರಾಜ್ಯದಲ್ಲಿ 2.84 ಲಕ್ಷ ಸರ್ಕಾರಿ ಹುದ್ದೆ ಖಾಲಿ: 24,300 ಹುದ್ದೆ ಭರ್ತಿಗೆ ಅಂಕಿತ! ಇಲಾಖಾವಾರು ಮಾಹಿತಿ ಇಲ್ಲಿದೆ!