ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಾರಕ್ಕೆ ಎರಡು ಮೊಟ್ಟೆಗಳ ಬದಲು ಐದು ಮೊಟ್ಟೆಗಳಿಗೆ ಹೆಚ್ಚಿಸುವುದು, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ಸಂಖ್ಯೆ ಇಳಿಕೆ ಮಾಡುವುದು.
ಬೆಂಗಳೂರು (ಫೆ.04): ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಾರಕ್ಕೆ ಎರಡು ಮೊಟ್ಟೆಗಳ ಬದಲು ಐದು ಮೊಟ್ಟೆಗಳಿಗೆ ಹೆಚ್ಚಿಸುವುದು, ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ಸಂಖ್ಯೆ ಇಳಿಕೆ ಮಾಡುವುದು, ಐದು ಲಕ್ಷ ರು.ಗಿಂತ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವ ಸಂಘಗಳಿಗೆ ಐದು ವರ್ಷಗಳಿಗೊಮ್ಮೆ ಲೆಕ್ಕಪತ್ರಗಳನ್ನು ಸಲ್ಲಿಸಲು ಅವಕಾಶ ಸಲ್ಲಿಕೆ ಮಾಡುವುದು ಸೇರಿದಂತೆ ಹಲವು ಶಿಫಾರಸ್ಸುಗಳನ್ನು ಎರಡನೇ ಕರ್ನಾಟಕ ಆಡಳಿತ ಸುಧಾರಣಾ ಆಯೋಗವು ಮಾಡಿದೆ.
ಶುಕ್ರವಾರ ಆಯೋಗದ ಅಧ್ಯಕ್ಷ ಟಿ.ಎಂ.ವಿಜಯಭಾಸ್ಕರ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ 1,609 ಶಿಫಾರಸ್ಸುವುಳ್ಳ 4 ಮತ್ತು 5ನೇ ವರದಿಯನ್ನು ಸಲ್ಲಿಸಿದರು. ಮೊದಲ ವರದಿಯಲ್ಲಿ 856 ಶಿಫಾರಸ್ಸುಗಳು, ಎರಡು ಮತ್ತು ಮೂರನೇ ವರದಿಯಲ್ಲಿ 1,165 ಶಿಫಾರಸ್ಸು ಹಾಗೂ ನಾಲ್ಕು ಮತ್ತು ಐದನೇ ವರದಿಯಲ್ಲಿ 1,609 ಶಿಫಾರಸ್ಸುಗಳು ಸೇರಿದಂತೆ ಒಟ್ಟು 3,630 ಶಿಫಾರಸ್ಸುಗಳನ್ನು ಆಯೋಗವು ಮಾಡಿದೆ.
ಗಡಿನಾಡ ಕನ್ನಡಿಗರಿಗೆ ಶೀಘ್ರ 100 ಕೋಟಿ ಬಿಡುಗಡೆ: ಸಿಎಂ ಬೊಮ್ಮಾಯಿ
ಶಾಲೆಗಳ ವಿಲೀನ: ಸರ್ಕಾರಿ ಶಾಲಾ ಕಟ್ಟಡದಿಂದ 300 ಮೀಟರ್ ಅಂತರದಲ್ಲಿರುವ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 6,307 ಅಂಗನವಾಡಿ ಕೇಂದ್ರಗಳನ್ನು ಕೊಠಡಿ ಲಭ್ಯವಿದ್ದರೆ ಸಮೀಪದ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಬಹುದು. ಇದರಿಂದ ಅಂಗನವಾಡಿ ಮಕ್ಕಳು ಸುಲಭವಾಗಿ ಶಾಲೆಯಲ್ಲಿ ಮುಂದುವರಿಯಬಹುದು. ಡ್ರಾಪ್‌ಔಟ್ ದರವನ್ನು ಕಡಿಮೆ ಮಾಡಲು 100 ಮೀಟರ್ ಅಂತರದಲ್ಲಿರುವ 3457 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳನ್ನು 1667 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ವಿಲೀನಗೊಳಿಸಬಹುದು. 879 ಕಿರಿಯ ಪ್ರಾಥಮಿಕ ಶಾಲೆಗಳು, ಹಿರಿಯ ಪ್ರಾಥಮಿಕ ಶಾಲೆಗಳು, ಪ್ರಾಢಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳನ್ನು 359 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಾಗಿ ವಿಲೀನಗೊಳಿಸಬಹುದು. ಈ ಸೌಲಭ್ಯವನ್ನು ಖಾಸಗಿ ಆಡಳಿತ ಮಂಡಳಿಗಳ ಶಾಲೆಗಳನ್ನು ಸಹ ಅನ್ವಯಿಸಬಹುದು ಎಂದು ಆಯೋಗವು ಸಲಹೆ ನೀಡಿದೆ.
ವಾರಕ್ಕೆ 5 ಮೊಟ್ಟೆ: ಆರು ತಿಂಗಳಿಂದ ಮೂರು ವರ್ಷ ವಯಸ್ಸಿನ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಾರಕ್ಕೆ ಎರಡು ಮೊಟ್ಟೆಗಳನ್ನು ನೀಡುತ್ತಿದ್ದು, ಇದನ್ನು ಐದು ಮೊಟ್ಟೆಗಳಿಗೆ ಹೆಚ್ಚಿಸಬಹುದು. ಸಾಮಾನ್ಯ ಮಕ್ಕಳಿಗೂ ಸಹ ವಾರಕ್ಕೆ ಎರಡು ಮೊಟ್ಟೆಗಳನ್ನು ನೀಡಬಹುದು.
ಪಶು ಕ್ಲಿನಿಕ್: ಬೆಳಗಾವಿ, ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಸುಮಾರು 154 ಪಶು ಚಿಕಿತ್ಸಾಲಯಗಳ ಕೊರತೆ ಇವೆ. ಮಾನದಂಡದಂತೆ 25 ಜಿಲ್ಲೆಗಳಲ್ಲಿರುವ 737 ಹೆಚ್ಚುವರಿ ವೆಟರ್‌ನರಿ ಕ್ಲಿನಿಕ್‌ಗಳ ಪೈಕಿ 154 ವೆಟರ್‌ನರಿ ಕ್ಲಿನಿಕ್‌ಗಳನ್ನು ಅಗತ್ಯವಿರುವ ನಾಲ್ಕು ಜಿಲ್ಲೆಗಳಿಗೆ ಸ್ಥಳಾಂತರಿಸಬಹುದು.
ಪರೀಕ್ಷೆ ಸುಧಾರಣೆ: ನೆರೆಯ ರಾಜ್ಯಗಳಂತೆ ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಯಲ್ಲಿ ಶೇಕಡವಾರು ಉತ್ತೀರ್ಣತೆ ಕಡಿಮೆ ಇದ್ದು, ಸುಧಾರಣೆಗೆ ಕ್ರಮ ಕೈಗೊಳ್ಳಬೇಕು. ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನ ಅಂಕಗಳೊಂದಿಗೆ ಅಳವಡಿಸಬೇಕು. ವಿಜ್ಞಾನ ವಿಷಯದಲ್ಲಿ 15 ಅಂಕಗಳಿಗೆ ಮತ್ತು ಸಮಾಜ ವಿಜ್ಞಾನ, ಭಾಷಾ ವಿಷಯಗಳಲ್ಲಿ 20 ಅಂಕಗಳಿಗೆ ಬಹು ಆಯ್ಕೆಯ ಪ್ರಶ್ನೆಗಳನ್ನು ಸೇರಿಸಬೇಕು. ಉತ್ತೀರ್ಣರಾಗಲು ಒಟ್ಟು ಸರಾರಿ ಶೇ.35 ಅಂಕಗಳ ಪೈಕಿ ಎಸ್‌ಎಸ್‌ಎಲ್‌ಸಿ ಲಿಖಿತ ಪರೀಕ್ಷೆಯಲ್ಲಿ ಕನಿಷ್ಠ 28 ಅಂಕಗಳನ್ನು ಗಳಿಸಬೇಕಾಗಿದ್ದು, ಇದನ್ನು 20 ಅಂಕಗಳಿಗೆ ಇಳಿಸಬಹುದು ಎಂದು ಶಿಫಾರಸ್ಸಿನಲ್ಲಿ ಉಲ್ಲೇಖಿಸಲಾಗಿದೆ.
ಕೆಪಿಎಸ್‌ಸಿ ಸದಸ್ಯರ ಸಂಖ್ಯೆ ಇಳಿಕೆ: ಉತ್ತರ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿ ಲೋಕಸೇವಾ ಆಯೋಗದ ಸದಸ್ಯರ ಸಂಖ್ಯೆ ಎಂಟು ಅಥವಾ ಅದಕ್ಕಿಂತ ಕಡಿಮೆ ಇದೆ. ಆದ್ದರಿಂದ ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಸೇರಿದಂತೆ ಸದಸ್ಯರ ಸಂಖ್ಯೆಯನ್ನು 14ರಿಂದ 8ಕ್ಕೆ ಇಳಿಸಬಹುದು. 30 ಬಿಬಿಎಂಪಿ ಕಂದಾಯ ವಿಭಾಗಗಳಿಗೆ ವಿಕೇಂದ್ರೀಕರಣಕ್ಕಾಗಿ ಮತ್ತು ಹೆಚ್ಚಿನ ಸಮನ್ವಯ ಸಾಧಿಸಿಲು ಕೆಎಎಸ್ ಶ್ರೇಣಿಯ 30 ಉಪ ಆಯುಕ್ತರ ಹುದ್ದೆಗಳನ್ನು ಸೃಷ್ಟಿಸಬಹುದು.
ಪ್ರಮಾಣಪತ್ರ ಸಿಂಧುತ್ವ: ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ ಪ್ರಮಾಣ ಪತ್ರ ಮತ್ತು ಹೈದರಾಬಾದ್-ಕರ್ನಾಟಕ ನಿವಾಸ ಪ್ರಮಾಣ ಪತ್ರದ ಸಿಂಧುತ್ವವನ್ನು ಪರಿಶಿಷ್ಟಜಾತಿ ಮತ್ತು ಪರಿಶಿಷ್ಟಪಂಗಡ ಪ್ರಮಾಣ ಪತ್ರಗಳಂತೆ ಜೀವಿತಾವಧಿವರೆಗೆ ಅಥವಾ ಸಿಂಧುತ್ವ ರದ್ದುಗೊಳಿಸುವವರೆಗೆ ವಿಸ್ತರಿಸಬಹುದು ಎಂದು ತಿಳಿಸಲಾಗಿದೆ.
ಸಿಡಿ ಪ್ರಕರಣ ಬಗ್ಗೆ ಸಿಎಂ ಜತೆ ಚರ್ಚಿಸುವೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಲೆಕ್ಕಪತ್ರ: ಅತಿ ಕಡಿಮೆ ವಹಿವಾಟು ನಡೆಸುವ ಸಂಘಗಳಿಗೆ ಕಾರ್ಯವಿಧಾನಗಳನ್ನು ಸರಳಗೊಳಿಸುವ ಅಗತ್ಯ ಇದೆ. ಐದು ಲಕ್ಷ ರು.ಗಿಂತ ಕಡಿಮೆ ವಾರ್ಷಿಕ ವಹಿವಾಟು ಹೊಂದಿರುವ ಸಂಘಗಳು ಐದು ವರ್ಷಗಳಿಗೊಮ್ಮೆ ಲೆಕ್ಕಪತ್ರವನ್ನು ಸಲ್ಲಿಸಲು ಅವಕಾಶ ನೀಡಲು ಮತ್ತು ಚಾರ್ಟರ್ಡ್ ಅಕೌಂಟೆಂಟ್ ಅವರಿಂದ ಲೆಕ್ಕ ಪರಿಶೋಧನೆ ಮಾಡಿಸುವ ಅಗತ್ಯವಿಲ್ಲ. ಲೆಕ್ಕಪತ್ರಗಳ ಸ್ವಯಂ ಘೋಷಣೆಯನ್ನು ಸ್ವೀಕರಿಸಬಹುದು ಎಂದು ಆಯೋಗವು ಶಿಫಾರಸ್ಸು ಮಾಡಿದೆ.