ಆಗಸ್ಟ್ 5ರಂದು ರಾಜ್ಯದೆಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ರವಾನಿಸಿದ್ದಾರೆ.
ಬೆಂಗಳೂರು, (ಆ.04): ನಾಳೆ ಅಂದ್ರೆ ಬುಧವಾರ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚರ ವಹಿಸುವಂತೆ ಪೊಲೀಸರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಇಂದು (ಮಂಗಳವಾರ) ವಿಡಿಯೋ ಸಂವಾದ ನಡೆಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಾಳೆ (ಆ.05) ರಾಮಮಂದಿರ ಭೂಮಿ ಪೂಜೆ ಇರುವ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳು ತೀವ್ರ ಕಟ್ಟೆಚ್ಚರ ವಹಿಸುವಂತೆ ರಾಜ್ಯದ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹೇಳಿದರು.
ಭೂಲೋಕದ ಸ್ವರ್ಗದಂತೆ ಸಿಂಗಾರಗೊಂಡಿದೆ ಅಯೋಧ್ಯಾ; ಸುವರ್ಣ ನ್ಯೂಸ್ ಗ್ರೌಂಡ್ ರಿಪೋರ್ಟ್
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಖಡಕ್ ಸೂಚನೆ ರವಾನಿಸಿದರು.
ಡಿಜಿ, ಐಜಿಪಿ ಪ್ರವೀಣ್ ಸೂದ್ ಖಡಕ್ ಸೂಚನೆ
ಹೌದು...ಬಸವರಾಜ್ ಬೊಮ್ಮಾಯಿ ಜೊತೆಗಿನ ವಿಡಿಯೋ ಸಂವಾದದ ಬಳಿಕ ಡಿಜಿ ಐಜಿಪಿ ಪ್ರವೀಣ್ ಸೂದ್ ಅವರು ರಾಜ್ಯಾದ್ಯಂತ ತೀವ್ರ ನಿಗಾ ವಹಿಸಲು ಎಲ್ಲಾ ವಲಯದ ಐಜಿಪಿಗಳು ಮತ್ತು ಎಸ್ಪಿಗಳಿಗೆ ತಿಳಿಸಿದ್ದಾರೆ.
ವಿಡಿಯೋ ಕಾನ್ಪರೆನ್ಸ್ ಮೂಲಕ ರಾಜ್ಯದಲ್ಲಿ ಕೈಗೊಳ್ಳಬೇಕಾದ ಭದ್ರತೆ ಕುರಿತು ಐಜಿಪಿ ಮತ್ತು ಎಸ್ಪಿಗಳ ಜೊತೆ ಡಿಜಿ ಐಜಿಪಿ ಮತ್ತು ಎಡಿಜಿಪಿ ಅವರು ಮಹತ್ವದ ಸಭೆ ನಡೆಸಿದ್ದು, ಹಿರಿಯ ಪೊಲೀಸ್ ಆಧಿಕಾರಿಗಳ ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳು ಈ ಕೆಳಗಿನಂತಿವೆ.
ಪ್ರಮುಖ ಅಂಶಗಳು
* ಭೂಮಿ ಪೂಜೆ ವೇಳೆ ರಾಜ್ಯದಲ್ಲಿ ಗಲಭೆ ಸೃಷ್ಟಿಸುವ ಸಂಭವವಿದೆ.
* ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು.
* ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಬೇಕು.
* ಭೂಮಿ ಪೂಜೆ ದಿನ ಮತೀಯ ಸಂಘಟನೆಗಳು, ಸಿಎಎ ಹಾಗೂ ಎನ್ ಆರ್ ಸಿ ಹೋರಾಟಗಾರರ ಮೇಲೆ ಕಣ್ಣಿಡಬೇಕು.
* ಯಾವುದೇ ಮೆರವಣಿಗೆ, ವಿಜಯೋತ್ಸವ, ಪ್ರತಿಭಟನೆಗೆ ಅನುಮತಿ ಇರುವುದಿಲ್ಲ.
* ಕಮ್ಯುನಲ್ ಸೆನ್ಸಿಟೀವ್ ಜಿಲ್ಲೆಗಳಲ್ಲಿ ತೀವ್ರ ನಿಗಾ ಇಡಬೇಕು.
* ಕೋಮು ಸೌಹಾರ್ಧತೆಗೆ ಧಕ್ಕೆ ತರುವವರು ಕಂಡುಬಂದ್ರೆ ಪ್ರಿವೆಂಟೀವ್ ಸೆಕ್ಷನ್ ಅಡಿ ವಶಕ್ಕೆ ಪಡೆಯಬೇಕು.
* ಯಾವುದೇ ದೇವಸ್ಥಾನ, ಮಸೀದಿಗಳಲ್ಲಿ ಬಾವುಟ ಕಟ್ಟುವಂತಿಲ್ಲ.
* ಜನನಿಬಿಡ ಪ್ರದೇಶಗಳು, ಮಾಲ್, ದೇವಸ್ಥಾನ, ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸುವುದು.
* ಹಿಂದೂಪರ ಸಂಘಟನೆ, ಹಿಂದೂಯೇತರ ಸಂಘಟನೆಗಳ ಮೇಲೆ ಇವತ್ತಿನಿಂದಲೇ ಕಣ್ಣಿಡುವುದು.
* ಡಿಎಆರ್ ಮತ್ತು ಕೆಎಸ್‌ಆರ್ ಪಿ ತುಕಡಿಗಳನ್ನ ನಿಯೋಜನೆ ಮಾಡಿಕೊಳ್ಳುವುದು.
* ಕಮೀಷನರೇಟ್ ಹಾಗು ಜಿಲ್ಲೆಗಳಲ್ಲಿ 144 ಸೆಕ್ಷನ್ ಹಾಕಿ ಭದ್ರತೆ ಕೈಗೊಳ್ಳುವ ಚಿಂತನೆ.