ಕೊರೋನಾ ವೈರಸ್ ಬಗ್ಗೆ ಮುಖ್ಯಮಂತ್ರಿ, ಸಚಿವರಿಗೆ ಜಾಗರೂಕತೆ ಇಲ್ಲ. ಇಂಥವರು ರಾಜ್ಯದ ಜನರನ್ನು ಹೇಗೆ ಕಾಪಾಡುತ್ತಾರೆ ಎಂದು ಕೇಂದ್ರ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ವ್ಯಂಗ್ಯವಾಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ದಾವಣಗೆರೆ(ಆ.04): ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊರೋನಾ ಸೋಂಕು ತಗುಲಿದೆ. ಇಂಥವರು ಸಾಮಾನ್ಯ ಜನರನ್ನು ಹೇಗೆ ಕಾಪಾಡುತ್ತಾರೆ ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಕೆ.ಎಚ್. ಮುನಿಯಪ್ಪ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು, ಕೊರೋನಾ ವೈರಸ್ ಬಗ್ಗೆ ಮುಖ್ಯಮಂತ್ರಿ, ಸಚಿವರಿಗೆ ಜಾಗರೂಕತೆ ಇಲ್ಲ. ಇಂಥವರು ರಾಜ್ಯದ ಜನರನ್ನು ಹೇಗೆ ಕಾಪಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಕೊರೋನಾ ಸೋಂಕು ದೇಶಕ್ಕೆ ದೊಡ್ಡ ಆಪತ್ತನ್ನೇ ತಂದಿದೆ. ಎಐಸಿಸಿ ಮುಖಂಡ ರಾಹುಲ್ ಗಾಂಧಿ ಫೆ.12ರಂದೇ ಕೊರೋನಾ ಬಗ್ಗೆ ಕೇಂದ್ರಕ್ಕೆ ಎಚ್ಚರಿಸಿ, ಚೀನಾದಿಂದ ಹರಡುತ್ತಿರುವ ವೈರಸ್ ತಡೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟವನ್ನು ತಕ್ಷಣವೇ ತಡೆಹಿಡಿಯಲು, ಮುನ್ನೆಚ್ಚರಿಕೆ ವಹಿಸಲು ಮನವಿ ಮಾಡಿದ್ದರು. ಆದರೆ, ಕೇಂದ್ರ ಅದಕ್ಕೆ ಸ್ಪಂದಿಸಲಿಲ್ಲ ಎಂದು ದೂರಿದರು.
ಕೇಂದ್ರ ಅಸಡ್ಡೆ ತೋರಿದ ಪರಿಣಾಮ ಇಂದು ದೇಶದಲ್ಲಿ ಸೋಂಕು, ಸಾವಿನ ಪ್ರಕರಣ ಹೆಚ್ಚುತ್ತಲೇ ಇವೆ. ಕುರುಕ್ಷೇತ್ರದಲ್ಲಿ ಯುದ್ಧವು 18 ದಿನದಲ್ಲೇ ಮುಗಿದಿತ್ತು. ಕೊರೋನಾ ವಿರುದ್ಧದ ಮಹಾಯುದ್ಧವನ್ನು 21 ದಿನದಲ್ಲೇ ಮುಗಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅದಕ್ಕೆ ಜಾಗಟೆ ಬಾರಿಸುವ, ಪಟಾಕಿ ಸಿಡಿಸುವ, ಚಪ್ಪಾಳೆ ತಟ್ಟುವಂತಹ ಅವಶ್ಯಕತೆಯಿಲ್ಲದ ಕೆಲಸಗಳನ್ನೇ ಮಾಡಿಸಿದರು ಎಂದು ಟೀಕಿಸಿದರು.
ಸಿಎಂ ಯಡಿಯೂರಪ್ಪ ಗುಣಮುಖರಾಗಲು ಆರೋಗ್ಯ ಸಚಿವ ದೇವರಲ್ಲಿ ಹರಕೆ
ಪ್ರಧಾನಿ ಮೋದಿ ನಿರ್ಲಕ್ಷ್ಯದಿಂದಾಗಿ ದೇಶದಲ್ಲಿ 18 ಲಕ್ಷಕ್ಕೂ ಅಧಿಕ ಸೋಂಕಿತರಿದ್ದಾರೆ. ಇತ್ತ ರಾಜ್ಯ ಸರ್ಕಾರವು ಕೊರೋನಾ ಹೆಸರಲ್ಲಿ ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿದೆ. ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಪ್ರಶ್ನಿಸುವ ಮೂಲಕ ಕಾಂಗ್ರೆಸ್ ಪಕ್ಷವು ವಿಪಕ್ಷದ ಜವಾಬ್ದಾರಿ ನಿರ್ವಹಿಸಿದೆ. ಆದರೆ, ರಾಜ್ಯ ಸರ್ಕಾರವು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿದೆ. ಇದು ದುರಂತ ಎಂದು ಮುನಿಯಪ್ಪ ಅಭಿಪ್ರಾಯಪಟ್ಟರು.
ಆಡಳಿತ ಪಕ್ಷದ ಭ್ರಷ್ಟಾಚಾರ, ಅನ್ಯಾಯ, ಅನೀತಿಯನ್ನು ಪ್ರಶ್ನಿಸುವ ಮೂಲಕ ಅದನ್ನು ಜನರ ಮುಂದಿಡುವ ಕೆಲಸವನ್ನು ಜವಾಬ್ದಾರಿಯುತ ವಿಪಕ್ಷವಾಗಿ ಕಾಂಗ್ರೆಸ್ ಮಾಡುತ್ತಿದೆ. ಸರ್ಕಾರ ನೋಟಿಸ್ ಕೊಟ್ಟಿದ್ದು ನಿಜಕ್ಕೂ ದುರಂತ. ನೋಟಿಸ್‌ಗೆ ಕಾಂಗ್ರೆಸ್ ಪಕ್ಷದಿಂದ ಸರಿಯಾದ ಉತ್ತರವನ್ನೇ ನೀಡಲಾಗುವುದು ಎಂದು ತಿಳಿಸಿದರು.