ಪೋಕ್ಸೋ ಕೇಸ್‌ ಸೆಟ್ಲ್‌ಮೆಂಟ್‌ ಅರ್ಜಿಗಳು ಹೆಚ್ಚಳ: ಸಂತ್ರಸ್ತೆಯನ್ನೇ ಮದುವೆಯಾಗುತ್ತೇನೆಂದು ಆರೋಪಿಗಳ ಅರ್ಜಿ..!

By Kannadaprabha News  |  First Published Aug 14, 2024, 6:02 AM IST

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಪರಾಧಕ್ಕೆ ದೋಷಿಗೆ ದಂಡದೊಂದಿಗೆ ಕನಿಷ್ಠ 3 ವರ್ಷದಿಂದ 20 ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಅದನ್ನು ಜೀವಾವಧಿ ಅಥವಾ ಗಲ್ಲು ಶಿಕ್ಷೆಗೂ ವಿಸ್ತರಿಸಲು ಅವಕಾಶವಿದೆ. ಅಪರಾಧದ ಗಂಭೀರತೆ ಆಧರಿಸಿ ನ್ಯಾಯಾಲಯಗಳು ಶಿಕ್ಷೆ ಪ್ರಮಾಣ ನಿರ್ಧರಿಸುತ್ತವೆ.
 


ವೆಂಕಟೇಶ್‌ ಕಲಿಪಿ

ಬೆಂಗಳೂರು(ಆ.14):  ಮಕ್ಕಳ ವಿರುದ್ಧದ ಲೈಂಗಿಕ ಅಪರಾಧಗಳ ತಡೆ ಕಾಯ್ದೆ (ಪೋಕ್ಸೋ)-2012ರ ಅಡಿಯಲ್ಲಿ ದಾಖಲಾದ ಅಪ್ರಾಪ್ತೆ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ‘ಸೆಟಲ್‌ಮೆಂಟ್‌’ ಮಾಡಲು ಆರೋಪಿಗಳು ಹೈಕೋರ್ಟ್‌ಗೆ ಮೊರೆಯಿಡುತ್ತಿರುವ ಪ್ರಮಾಣ ಹೆಚ್ಚಾಗುತ್ತಿದೆ.

Tap to resize

Latest Videos

ಪೋಕ್ಸೋ ಕಾಯ್ದೆಯಡಿ ಲೈಂಗಿಕ ಕ್ರಿಯೆಗೆ ಸಂತ್ರಸ್ತೆ ಒಪ್ಪಿದ್ದರೂ, ಅದನ್ನು ಒಪ್ಪಿತ ಸಂಭೋಗವೆಂದು ಪರಿಗಣಿಸಲು ನಿರ್ಬಂಧವಿದೆ. ಘಟನೆ ನಡೆದ ದಿನದಂದು ಸಂತ್ರಸ್ತೆಯ ವಯಸ್ಸು 16ಕ್ಕಿಂತ ಕಡಿಮೆ ಇದ್ದರೆ ಸೆಟಲ್‌ಮೆಂಟ್‌ ಮೂಲಕ ಪ್ರಕರಣ ರದ್ದುಪಡಿಸಲು ಅವಕಾಶವಿಲ್ಲ.

ಅಪ್ರಾಪ್ತೆ ಕೈ ಹಿಡಿದು ಐ ಲವ್ ಯು ಹೇಳಿದ 19ರ ಯುವಕನಿಗೆ 2 ವರ್ಷ ಜೈಲು ಶಿಕ್ಷೆ!

ಆದರೆ ಇತ್ತೀಚೆಗೆ ಪೋಕ್ಸೋ ಪ್ರಕರಣಗಳಲ್ಲಿ ಸಂತ್ರಸ್ತೆ ಮತ್ತು ಆರೋಪಿ ಮದುವೆಯಾಗಲು ನಿರ್ಧರಿಸಿಕೊಳ್ಳುತ್ತಿರುವುದು, ಆರೋಪಿಯಿಂದ ತಾಯಿಯಾಗಿರುವ ಕಾರಣ ಮಗು ಹಾಗೂ ತಾಯಿಯ ಭವಿಷ್ಯದ ದೃಷ್ಟಿಯಿಂದ ಹೈಕೋರ್ಟ್‌ ಒಂದೆರಡು ಪ್ರಕರಣಗಳನ್ನು ರದ್ದುಪಡಿಸಿ ಉದಾರತೆ ತೋರಿದ ಪರಿಣಾಮ ಪ್ರಕರಣಗಳ ಇತ್ಯರ್ಥಕ್ಕೆ ಆರೋಪಿಗಳು ನ್ಯಾಯಾಲಯಕ್ಕೆ ಮನವಿ ಮಾಡತೊಡಗಿದ್ದಾರೆ.

ಪ್ರಕರಣವೊಂದರಲ್ಲಿ ಘಟನೆ ನಡೆದಾಗ ಸಂತ್ರಸ್ತೆಗೆ 17 ವರ್ಷ ತುಂಬಿದ್ದು, ಆರೋಪಿಗೆ 21 ವರ್ಷವಾಗಿದ್ದ ಪ್ರಕರಣದಲ್ಲಿ ಸಂತ್ರಸ್ತೆ ಹಾಗೂ ಆರೋಪಿ ಮದುವೆಯಾಗಲು ಒಪ್ಪಿರುವುದು ಅವರಿಗೆ ಮಗುವೊಂದು ಜನಿಸಿದ್ದನ್ನು ಪರಿಗಣಿಸಿದ್ದ ಹೈಕೋರ್ಟ್‌ ಸೆಟಲ್‌ಮೆಂಟ್‌ ಮಾಡಿ, ಆರೋಪಿಯನ್ನು ಜೈಲಿನಿಂದ ಬಿಡುಗಡೆ ಮಾಡಲು ಇತ್ತೀಚೆಗೆ ಆದೇಶಿಸಿತ್ತು.

ನಿತ್ಯ ಅರ್ಜಿ ವಿಚಾರಣೆ:

ಸಂತ್ರಸ್ತೆ ಜತೆ ಒಪ್ಪಿತ ಲೈಂಗಿಕ ಕ್ರಿಯೆ ನಡೆದಿದೆ. ಸಂತ್ರಸ್ತೆಯನ್ನು ಮದುವೆಯಾಗಲು ಸಂತ್ರಸ್ತೆ, ಆಕೆಯ ಕುಟುಂಬದವರು ಒಪ್ಪಿದ್ದಾರೆ. ಸಂತ್ರಸ್ತೆಗೆ ಮಗು ಜನಿಸಿರುವುದರಿಂದ ಪೋಕ್ಸೋ ಕಾಯ್ದೆಯಡಿ ದಾಖಲಾಗಿರುವ ಪ್ರಕರಣವನ್ನು ಸೆಟಲ್‌ಮೆಂಟ್‌ ಮಾಡಿ ರದ್ದುಪಡಿಸಬೇಕು. ಉತ್ತಮ ಭವಿಷ್ಯ ರೂಪಿಸಿಕೊಂಡು ಬದುಕು ಸಾಗಿಸಲು ಅನುವು ಮಾಡಿಕೊಡಬೇಕು ಎಂದು ಕೋರಿ ಅಪರಾಧ ಪ್ರಕ್ರಿಯಾ ಸಂಹಿತೆ -1973ರ ಸೆಕ್ಷನ್‌ 482 ಅಡಿಯಲ್ಲಿ ಆರೋಪಿಗಳು ಹೈಕೋರ್ಟ್‌ಗೆ ಸಲ್ಲಿಸುವ ಅರ್ಜಿಗಳು ನಿತ್ಯ 1-2 ವಿಚಾರಣೆಗೆ ಬರುತ್ತಿವೆ. ಈ ಪೈಕಿ ಲೈಂಗಿಕ ಕೃತ್ಯ ನಡೆದಾಗ ಸಂತ್ರಸ್ತೆಗೆ 16 ವರ್ಷಕ್ಕಿಂತ ಕಡಿಮೆ ವಯಸ್ಸು ಇದ್ದಂತಹ ಪ್ರಕರಣಗಳೂ ಇವೆ. ಅಂತಹ ಪ್ರಕರಣವನ್ನು ರದ್ದುಪಡಿಸಲು ಹೈಕೋರ್ಟ್‌ ಒಪ್ಪುತ್ತಿಲ್ಲ. ಆದರೆ ಅಪರಾಧ ನಡೆದ ದಿನದಂದು ಸಂತ್ರಸ್ತೆಗೆ 18 ವರ್ಷಕ್ಕೆ ಒಂದೆರಡು ತಿಂಗಳಷ್ಟೇ ಬಾಕಿಯಿದ್ದು, ಆಕೆಯನ್ನು ಮದುವೆಯಾಗಲು ಮುಂದೆ ಬಂದ ಆರೋಪಿ 21ರಿಂದ 23 ವರ್ಷದ ಒಳಗಿದ್ದ ಸಂದರ್ಭದಲ್ಲಿ ಸೆಟಲ್‌ಮೆಂಟ್‌ ಮಾಡಿ ಪ್ರಕರಣ ರದ್ದುಪಡಿಸಲು ಮನಸ್ಸು ತೋರಬಹುದು ಎಂದು ಹೈಕೋರ್ಟ್‌ ನುಡಿಯುತ್ತಿದೆ.

ಶಿಕ್ಷಕಿ ವಿರುದ್ಧ ಪೋಕ್ಸೋ ಪ್ರಕರಣ: ವಿದ್ಯಾರ್ಥಿ ಜತೆ ಟೀಚರ್‌ ಚೆಲ್ಲಾಟಕ್ಕೆ ಹೈಕೋರ್ಟ್‌ ಕಿಡಿ

ಸೆಟಲ್‌ಮೆಂಟ್‌ಗೆ ಕೋರಿದ ಪ್ರಕರಣದಲ್ಲಿ ಘಟನೆ ನಡೆದ ದಿನದಂದು ಸಂತ್ರಸ್ತೆಗೆ 17 ವರ್ಷಕ್ಕಿಂತ ಕಡಿಮೆಯಿದ್ದು, ಆರೋಪಿಗೆ 23 ವರ್ಷ ಮೇಲ್ಪಟ್ಟ, ಅದರಲ್ಲೂ 28, 29 ಅಥವಾ 30 ವರ್ಷದ ಇದ್ದ ಸಂದರ್ಭದಲ್ಲಿ ಆತ ವಿಚಾರಣಾ ನ್ಯಾಯಾಲಯದ ವಿಚಾರಣೆ ಎದುರಿಸಬೇಕು. ಬೇರೆ ದಾರಿ ಇಲ್ಲ. ಸಾಕ್ಷ್ಯಾಧಾರ ಪರಿಶೀಲಿಸಿ ವಿಚಾರಣಾ ನ್ಯಾಯಾಲಯ ಕಾನೂನು ಪ್ರಕಾರ ತೀರ್ಮಾನ ಕೈಗೊಳ್ಳಲಿ. ವಿಚಾರಣಾ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂಬ ಕಠಿಣ ನಿಲುವನ್ನು ಹೈಕೋರ್ಟ್‌ ತಳೆಯುತ್ತಿದೆ. ಇಂತಹ ಪ್ರಕರಣಗಳನ್ನು ಸೆಟಲ್‌ಮೆಂಟ್ ಮಾಡಲು ಆರೋಪಿ ಪರ ವಕೀಲರು ಕೇಳಿದರೂ ಹೈಕೋರ್ಟ್‌ ಮಾತ್ರ ಒಪ್ಪುತ್ತಿಲ್ಲ.

ಪೋಕ್ಸೋಗೆ ಶಿಕ್ಷೆ ಏನು?

ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಅಪರಾಧಕ್ಕೆ ದೋಷಿಗೆ ದಂಡದೊಂದಿಗೆ ಕನಿಷ್ಠ 3 ವರ್ಷದಿಂದ 20 ವರ್ಷ ಜೈಲು ಶಿಕ್ಷೆ ವಿಧಿಸಬಹುದು. ಅದನ್ನು ಜೀವಾವಧಿ ಅಥವಾ ಗಲ್ಲು ಶಿಕ್ಷೆಗೂ ವಿಸ್ತರಿಸಲು ಅವಕಾಶವಿದೆ. ಅಪರಾಧದ ಗಂಭೀರತೆ ಆಧರಿಸಿ ನ್ಯಾಯಾಲಯಗಳು ಶಿಕ್ಷೆ ಪ್ರಮಾಣ ನಿರ್ಧರಿಸುತ್ತವೆ.

click me!