ಕಾರ್ಖಾನೆಯ ವಶದಲ್ಲಿರುವ ಜಮೀನು ತೆಗೆದುಕೊಂಡು ಏನು ಮಾಡುತ್ತೀರಿ ಸಚಿವರೇ? ಯಾವ ಬಿಲ್ಡರ್ ಗೆ ದಾನ ಮಾಡುತ್ತೀರಿ ಎಂದು ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಟಾಂಗ್ ನೀಡಿದ ಕೇಂದ್ರದ ಭಾರೀ ಕೈಗಾರಿಕೆ ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು(ಆ.14): ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಕಾರ್ಖಾನೆಯ ಅಧೀನದಲ್ಲಿರುವ ಭೂಮಿಯನ್ನು ರಾಜ್ಯ ಸರ್ಕಾರಕ್ಕೆ ವಾಪಸ್ಸು ನೀಡುವ ಪ್ರಶ್ನೆಯೇ ಇಲ್ಲ ಎಂದು ಖಡಕ್ಕಾಗಿ ಹೇಳಿರುವ ಕೇಂದ್ರದ ಭಾರೀ ಕೈಗಾರಿಕೆ ಎಚ್.ಡಿ. ಕುಮಾರಸ್ವಾಮಿ, ಒಂದು ವೇಳೆ ದುರುದ್ದೇಶಪೂರಿತವಾಗಿ ಭೂಮಿ ವಿಷಯದಲ್ಲಿ ಕಿರುಕುಳ ನೀಡಿದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಎಚ್ಚರಿಸಿದ್ದಾರೆ.
ಮಂಗಳವಾರ ನಗರದ ಎಚ್‌ಎಂಟಿ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾರ್ಖಾನೆಯ ವಶದಲ್ಲಿರುವ ಜಮೀನು ತೆಗೆದುಕೊಂಡು ಏನು ಮಾಡುತ್ತೀರಿ ಸಚಿವರೇ? ಯಾವ ಬಿಲ್ಡರ್ ಗೆ ದಾನ ಮಾಡುತ್ತೀರಿ ಎಂದು ರಾಜ್ಯದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಟಾಂಗ್ ನೀಡಿದರು.
ನನಗೆ ಪೂರ್ಣಾವಧಿ ಅಧಿಕಾರ ಸಿಕ್ಕರೆ ರೈತರ ಸಮಸ್ಯೆಗಳಿಗೆ ಪರಿಹಾರ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
ಮೈಸೂರು ಮಹಾರಾಜರ ಕಾಲದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಅವರ ಮಾರ್ಗದರ್ಶನದಲ್ಲಿ ಸ್ಥಾಪನೆಯಾದ ಈ ಎಚ್‌ಎಂಟಿ ಕಾರ್ಖಾನೆಗೆ ಯಾವುದೇ ಜಮೀನನ್ನು ಉಚಿತವಾಗಿ ನೀಡಿಲ್ಲ. ಬೇಕಿದ್ದರೆ ರಾಜ್ಯ ಅರಣ್ಯ ಸಚಿವರು ದಾಖಲೆಗಳನ್ನು ತೆಗೆದು ನೋಡಲಿ. ಅದು ಖರೀದಿ ಮಾಡಿರುವ ಜಮೀನು. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ. ಯಾವ ಆಧಾರದ ಮೇಲೆ ಮರಳಿ ಅರಣ್ಯ ಇಲಾಖೆ ವಶಕ್ಕೆ ಭೂಮಿಯನ್ನು ಪಡೆಯುತ್ತೀರಿ? ಎಚ್ಎಂಟಿಗೆ 599 ಎಕರೆ ಜಮೀನನ್ನು ಉಚಿತವಾಗಿ ಕೊಟ್ಟಿಲ್ಲ. 1963ರಲ್ಲಿ 185 ಎಕರೆಗೆ 4.40 ಲಕ್ಷ ರು. ಹಾಗೂ 1965ರಲ್ಲಿ 77 ಎಕರೆಗೆ 1.80 ಲಕ್ಷ ರು.ಗಳನ್ನು ಪಾವತಿಸಲಾಗಿದೆ. ಜಮೀನು ಹಸ್ತಾಂತರಕ್ಕೆ ಸಂಬಂಧಿಸಿದ ಕಡತವನ್ನು ಅರಣ್ಯ ಸಚಿವರು ಪರಿಶೀಲಿಸುವುದು ಒಳ್ಳೆಯದು. ರಾಜ್ಯ ಸರ್ಕಾರ ಇದೇ ರೀತಿ ಕಂಪನಿಗೆ ಕಿರುಕುಳ ನೀಡಿದರೆ, ನಾವು ಕಾನೂನು ಹೋರಾಟ ನಡೆಸಬೇಕಾಗುತ್ತದೆ ಎಂದು ನೇರ ಎಚ್ಚರಿಕೆ ಕೊಟ್ಟರು.
2020ರಲ್ಲಿ ಡಿನೋಟಿಫಿಕೇಷನ್‌ಗಾಗಿ ಸರ್ಕಾರದಿಂದ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಅದರ ಬಗ್ಗೆ ಈಗ ಅನುಮಾನ ಶುರುವಾಗಿದೆ. ಎಚ್ಎಂಟಿ ಕಾರ್ಖಾನೆಯನ್ನು ಉಳಿಸುವ ಉದ್ದೇಶದಿಂದ ಪರಿಣಿತರ ಸಮಿತಿ ರಚನೆಗೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರ 2016ರಲ್ಲೇ ನಷ್ಟದ ಉದ್ಯಮವೆಂದು ಮುಚ್ಚಲು ತೀರ್ಮಾನಿಸಿತ್ತು. ಆದರೆ ಪ್ರಧಾನಿಗಳು, ಹಣಕಾಸು ಸಚಿವರು ಹಾಗೂ ಬಂಡವಾಳ ವಾಪಸಾತಿ ಇಲಾಖೆಯ ಮನವೊಲಿಸಿ ಈ ಹೆಮ್ಮೆಯ ಕಾರ್ಖಾನೆಗೆ ಕಾಯಕಲ್ಪ ನೀಡುವ ಗುರಿ ನನ್ನದು. ಈ ಪ್ರಯತ್ನಕ್ಕೆ ರಾಜ್ಯ ಸರ್ಕಾರ ಪ್ರಾಂಜಲ ಮನಸ್ಸಿನಿಂದ ಸಹಕಾರ ನೋಡಬೇಕು ಎಂದು ಕುಮಾರಸ್ವಾಮಿ ಅವರು ಕೋರಿದರು.
ಹಿಂದೆ ಎಚ್ಎಂಟಿಗೆ ಸೇರಿದ 200 ಎಕರೆ ಜಮೀನನ್ನು ಮಾರಾಟ ಮಾಡಲು ಅನುಮತಿ ಕೊಟ್ಟವರು ಯಾರು? 1999ರಿಂದ 2004 ರವರೆಗೆ ರಾಜ್ಯದಲ್ಲಿ ಯಾರು ಅಧಿಕಾರದಲ್ಲಿದ್ದರು? 2006ರಲ್ಲಿ ನಾನು ಮುಖ್ಯಮಂತ್ರಿಯಾದಾಗ ಎಚ್ಎಂಟಿಯ ಒಂದು ಅಂಗುಲ ಜಮೀನು ಮಾರಾಟ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಆದೇಶ ಮಾಡಿದ್ದೆ. ಅದಕ್ಕೆ ಭೂಮಿ ಉಳಿದುಕೊಂಡಿದೆ. ಆದರೆ, ಆಡಳಿತ ನಡೆಸಿದ ಸರಕಾರಗಳಲ್ಲಿ ಬಿಲ್ಡರ್ ಕೆಲಸ ಮಾಡುತ್ತಿದ್ದ ಕೆಲವರಿಗೆ ಈ ಕಾರ್ಖಾನೆಯ ಜಮೀನು ಮೇಲೆ ವಕ್ರದೃಷ್ಟಿ ಬಿದ್ದಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರೆಸ್ಟೀಜ್ ಕಂಪನಿಯವರು 27 ಎಕರೆ ಭೂಮಿ ಖರೀದಿ ಮಾಡಿದ್ದು ಯಾವಾಗ? ಈಗಾಗಲೇ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟುತ್ತಿದ್ದಾರಲ್ಲ? ಅದೇನೋ ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರಲ್ಲ? ಪ್ರೆಸ್ಟೀಜ್‌ಗೆ ಭೂಮಿ ಖರೀದಿ ಎನ್‌ಓಸಿ ಕೊಡುತ್ತಾರೆ. ಆದರೆ, ನಮ್ಮ ದೇಶದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಖರೀದಿ ಮಾಡಲು ಬಂದರೆ ಎನ್‌ಓಸಿ ಕೊಡುವುದಿಲ್ಲ. ರಾಜ್ಯ ಸರ್ಕಾರಕ್ಕೆ ಪ್ರೆಸ್ಟೀಜ್ ಮುಖ್ಯವೇ ಅಥವಾ ಇಸ್ರೋ ಮುಖ್ಯವೇ ಎಂಬುದನ್ನು ಹೇಳಬೇಕಲ್ಲವೇ ವ್ಯಂಗ್ಯವಾಗಿ ಪ್ರಶ್ನಿಸಿದರು.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದರೆ ಸಿ.ಪಿ.ಯೋಗೇಶ್ವರ್ ಬಂಡಾಯ?
ಪತ್ರಿಕಾಗೋಷ್ಠಿಯಲ್ಲಿ ಎಚ್ಎಂಟಿ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ, ಪ್ರಧಾನ ವ್ಯವಸ್ಥಾಪಕ ಎಂ.ಆರ್.ವಿ ರಾಜ ಉಪಸ್ಥಿತರಿದ್ದರು.
ಶೀಘ್ರ ಒಳ್ಳೆಯ ಸುದ್ದಿ ಕೊಡುವೆ: ಎಚ್‌ಡಿಕೆ
ಪ್ರಧಾನಿಗಳ ಮಾರ್ಗದರ್ಶನದಲ್ಲಿ ನಾನು ನನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇನೆ. ಒಂದು ವಿಚಾರದಲ್ಲಿ ಶೀಘ್ರವೇ ಒಳ್ಳೆಯ ಸುದ್ದಿ ಕೊಡಲಿದ್ದೇನೆ. ಅದು ಯಾವುದು, ಯಾವಾಗ ಎಂಬುದನ್ನು ಈಗಲೇ ಹೇಳಲಾರೆ ಎಂದು ಕುಮಾರಸ್ವಾಮಿ ಇದೇ ವೇಳೆ ತಿಳಿಸಿದರು. ಅದು ಯಶಸ್ವಿ ಆದರೆ ಪ್ರಧಾನಿಗಳಿಗೂ ನಂಬಿಕೆ ಬರುತ್ತದೆ. ಆಮೇಲೆ ಉಳಿದ ಕಾರ್ಖಾನೆಗಳು ಹಂತ ಹಂತವಾಗಿ ಸರಿ ಹೋಗುತ್ತವೆ. ನಾನು ಆ ಪ್ರಯತ್ನದಲ್ಲಿದ್ದೇನೆ. ಇನ್ನು ಕೆಲ ದಿನಗಳಲ್ಲಿ ಶುಭ ಹೇಳಲಿದ್ದೇನೆ ಎಂದರು.