
ಬೆಂಗಳೂರು (ಆ.24): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣದ ವಿಚಾರಣೆ ಸೆ.2ಕ್ಕೆ ಮುಂದೂಡಿಕೆಯಾಗಿದೆ. ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದು ಕೋರಿ ಯಡಿಯೂರಪ್ಪ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ಶನಿವಾರ ನಡೆಯಿತು. ಈ ವೇಳೆ, ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಿದ್ದ ಮೃತ ಮಹಿಳೆಯು ಉನ್ನತ ಪೊಲೀಸ್ ಅಧಿಕಾರಿಯಾಗಿರುವ ಡಿಜಿಪಿ, ಆಯುಕ್ತರು, ಪತಿ, ಮಗ, ಸಂಬಂಧಿಗಳ ಮೇಲೂ ದೂರು ನೀಡಿದ್ದಾರೆ ಎಂದು ಯಡಿಯೂರಪ್ಪ ಪರ ಹಿರಿಯ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದರು. ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಸೆ.2ಕ್ಕೆ ಮುಂದೂಡಿತು.
ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮಂಡಿಸಿ, ಸಂತ್ರಸ್ತೆಯ ತಾಯಿಗೆ ದೂರುಗಳನ್ನು ನೀಡುವ ಹವ್ಯಾಸ ಇತ್ತು. ಆಕೆ ಡಿಜಿಪಿ, ಆಯುಕ್ತರು, ಪತಿ, ಮಗ, ಸಂಬಂಧಿಗಳ ಮೇಲೂ ಇದೇ ರೀತಿಯ ದೂರು ದಾಖಲಿಸಿದ್ದರು. ಪ್ರಪಂಚದಲ್ಲಿನ ಎಲ್ಲರ ಮೇಲೆಯೂ ಆಕೆ ದೂರು ನೀಡಿದ್ದಾರೆ. ಇಂತಹ ಘಟನೆ ನಡೆದಿಲ್ಲವೆಂದು ಹೇಳಿದ ಸಾಕ್ಷಿಗಳೂ ಇದ್ದಾರೆ ಎಂದು ವಾದಿಸಿದರು. ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ಮನೆಯಲ್ಲಿ 2024ರ ಫೆಬ್ರವರಿ ತಿಂಗಳಲ್ಲಿ ಯಡಿಯೂರಪ್ಪ ಅವರು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿ ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿದ್ದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ದೋಷಾರೋಪ ಪಟ್ಟಿ ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಡಯಾನ ಬುಕ್ ಗ್ಯಾಲರಿಗೆ ಭೇಟಿ: ರಾಜಕೀಯ ಜಂಜಾಟ ಮರೆತು ಸಾಹಿತ್ಯದ ಕಡೆ ಮುಖ ಮಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ತಿಲಕ್ ನಗರದಲ್ಲಿರುವ ಡಯಾನ ಬುಕ್ ಗ್ಯಾಲರಿಗೆ ಶನಿವಾರ ಭೇಟಿ ನೀಡಿ, ಬುಕ್ ಗ್ಯಾಲರಿಯ ಎಲ್ಲ ವಿಭಾಗಗಳನ್ನು ಸಂದರ್ಶಿಸಿದರು. ಸಾಹಿತಿಗಳ ಕೃತಿಗಳು, ಪತ್ರಕರ್ತರ ಬರಹಗಳು, ಜನಪದ ಕಲೆ ಸಾಹಿತ್ಯ ಮೊದಲಾದ ಪುಸ್ತಕಗಳ ಬಂಡಾರ ವೀಕ್ಷಣೆ ಮಾಡಿದ ಬಿಎಸ್ ವೈ, ಎಸ್. ಎಲ್. ಭೈರಪ್ಪ ನವರ ಪರ್ವ, ಪತ್ರಕರ್ತ ವಿಶ್ವೇಶ್ವರ ಭಟ್ ರವರ ಸಂಪಾದಕರ ಸದ್ಯ ಶೋಧನೆ ಪುಸ್ತಕಗಳನ್ನು ಖರೀದಿಸಿದರು. ಇದೇ ಸಂದರ್ಭದಲ್ಲಿ ಅವರಿಗೆ ಬುಕ್ ಗ್ಯಾಲರಿಯ ಮಾಲೀಕರು ಅಭಿನಂದಿಸಿ, ಎಸ್.ಎಲ್. ಭೈರಪ್ಪ ಅವರ “ಪರ್ವ " ಕಾದಂಬರಿಯನ್ನು ನೀಡಿದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರಿಗೆ ಸಂಸದ ಬಿ.ವೈ. ರಾಘವೇಂದ್ರ ಮತ್ತು ಕುಟುಂಬಸ್ಥರು ಸಾಥ್ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಶಿವಮೊಗ್ಗ ಒಂದು ಸಾಹಿತ್ಯಿಕ ಜಿಲ್ಲೆಯಾಗಿದ್ದು, ರಾಜ್ಯಕ್ಕೆ ಈ ಬುಕ್ ಗ್ಯಾಲರಿ ಮಾದರಿಯಾಗಿದೆ. ಎಲ್ಲಾ ರೀತಿಯ ಸಾಹಿತ್ಯದ ಪುಸ್ತಕಗಳು ಇಲ್ಲಿ ದೊರೆಯುತ್ತಿದ್ದು, ಅಭೂತಪೂರ್ವ ಪುಸ್ತಕ ಭಂಡಾರವನ್ನು ಇಲ್ಲಿ ತೆರೆದಿದ್ದಾರೆ. ಮಕ್ಕಳು ಮತ್ತು ಎಲ್ಲಾ ವರ್ಗದವರಲ್ಲೂ ಜ್ಞಾನ ಭಂಡಾರವನ್ನು ಹೆಚ್ಚಿಸುವ ಈ ಪುಸ್ತಕ ಗ್ಯಾಲರಿಯನ್ನು ತೆರೆದಿದ್ದಕ್ಕಾಗಿ ಮಾಲೀಕರಾದ ಈಶ್ವರ್ ಮತ್ತು ತಂಡದವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಎಸ್. ಚಂದ್ರಕಾಂತ್ ಅವರನ್ನು ಸನ್ಮಾನಿಸಲಾಯಿತು. ಶಾಸಕ ಡಾ. ಧನಂಜಯ ಸರ್ಜಿ ಮಾತನಾಡಿ, ವಿದ್ಯಾರ್ಥಿಗಳಿಗೆ ಈ ಬುಕ್ ಗ್ಯಾಲರಿಯಿಂದ ತುಂಬಾ ಅನುಕೂಲವಾಗಿದೆ. ವಿದ್ಯಾರ್ಥಿಗಳು ಚೀಲದಲ್ಲಿ ತುಂಬಿದ ಭತ್ತವಾಗಬಾರದು.
ಭತ್ತದ ಗದ್ದೆಯೊಳಗಿನ ಭತ್ತವಾಗಬೇಕು. ಇದು ಆಗಬೇಕಾದರೆ ಪುಸ್ತಕ ಓದಬೇಕು, ಜ್ಞಾನಭಂಡಾರ ಹೆಚ್ಚಿಸಿಕೊಳ್ಳಬೇಕು. ಟಿ.ವಿ., ಮೊಬೈಲ್‌ನಿಂದ ವಿದ್ಯಾರ್ಥಿಗಳು ಚೀಲದಲ್ಲಿ ತುಂಬಿದ ಭತ್ತವಾಗುತ್ತಾರೆ ಎಂದರು. ಇಲ್ಲಿ ಎಲ್ಲಾ ಪುಸ್ತಕಗಳು ದೊರೆಯುತ್ತವೆ. ಶಿವಮೊಗ್ಗ ವಾಣಿಜ್ಯ ಮತ್ತು ಆರೋಗ್ಯದ ಹಬ್ ಆಗಿದ್ದು, ಇಲ್ಲಿ ಬುಕ್ ಗ್ಯಾಲರಿಯ ಅಗತ್ಯತೆಯನ್ನು ಈಶ್ವರ್ ಮತ್ತು ಕುಟುಂಬ ಪೂರೈಸಿದ್ದಾರೆ. ಅವರ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದರು. ಹಾಗೂ ಸಂಪಾದಕ ಚಂದ್ರಕಾಂತ್ ಅವರು ಕಿರಿಯರಿಗೆ ಮತ್ತು ಎಲ್ಲಾ ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ