
ಮಂಗಳೂರು (ಆ.24): ನವಮಂಗಳೂರು ಬಂದರು ಪ್ರಾಧಿಕಾರ(ಎನ್‌ಎಂಪಿಎ)ದಲ್ಲಿ ಸುಮಾರು 1,200 ಕೋಟಿ ರು. ವೆಚ್ಚದ ವಿವಿಧ ಕಾಮಗಾರಿಗೆ ಶಿಲಾನ್ಯಾಸ ಮತ್ತು ಲೋಕಾರ್ಪಣೆ ನೆರವೇರಿಸಲು ಪ್ರಧಾನಿ ನರೇಂದ್ರ ಮೋದಿ ಸೆ.2ರಂದು ಮಂಗಳೂರಿಗೆ ಆಗಮಿಸಲಿದ್ದು ರಾಜ್ಯ ಬಿಜೆಪಿ ಅಧ್ಯಕ್ಷರಾಗಿರುವ ಸಂಸದ ನಳಿನ್ ಕುಮಾರ್ ಕಟೀಲ್ ಇದನ್ನು ಖಚಿತಪಡಿಸಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾಗವಹಿಸುವ ಮೊದಲ ಸರ್ಕಾರಿ ಕಾರ್ಯಕ್ರಮ ಇದಾಗಲಿದೆ.
ಈ ಹಿಂದೆ ಪ್ರಧಾನಿ ಲಾಲ್‌ಬಹದೂರು ಶಾಸ್ತ್ರಿ ನವಮಂಗಳೂರು ಬಂದರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಬಳಿಕ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ 1975ರಂದು ನವಮಂಗಳೂರು ಬಂದರನ್ನು ಲೋಕಾರ್ಪಣೆ ಮಾಡಿದ್ದರು. ಇದೀಗ ನರೇಂದ್ರ ಮೋದಿಯವರು ನವಮಂಗಳೂರಿಗೆ ಭೇಟಿ ನೀಡುವ ಮೂರನೇ ಪ್ರಧಾನಿಯಾಗದ್ದಾರೆ. ಈ ಹಿಂದೆ 2017ರ ಅ.29 ರಂದು ಉಜಿರೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಬಳಿಕ 2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪರವಾಗಿ ಪ್ರಚಾರಕ್ಕೆ ಆಗಮಿಸಿ ಮಂಗಳೂರಿಗೆ ಆಗಮಿಸಿ ನೆಹರೂ ಮೈದಾನದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದರು.
Modi Scheme: ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ನಾಗಮಾರಪಳ್ಳಿ ಪುಸ್ತಕ ಬಿಡುಗಡೆ
ಪ್ರಧಾನಿ ಭೇಟಿ ಬಗ್ಗೆ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಬೆಳಗ್ಗೆ ಕೊಚ್ಚಿನ್ ಬಂದರು ಕಾರ್ಯಕ್ರಮ ಬಳಿಕ ಸಂಜೆ 3.45ಕ್ಕೆ ಮಂಗಳೂರಿಗೆ ಆಗಮಿಸಲಿದ್ದು, ಎನ್‌ಎಂಪಿಎಗೆ ಭೇಟಿ ನೀಡಿ ಅಲ್ಲಿ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ಹಾಗೂ ಲೋಕಾರ್ಪಣೆ ನೆರವೇರಿಸಿದ ಬಳಿಕ ಸಂಜೆ 5 ಗಂಟೆಗೆ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಇನ್ನೆರಡು ದಿನಗಳಲ್ಲಿ ಕಾರ್ಯಕ್ರಮದ ರೂಪುರೇಷೆ ಅಂತಿಮಗೊಳ್ಳಲಿದೆ ಎಂದು ತಿಳಿಸಿದರು.
ಸೆ.2ರಂದು ಬೆಳಗ್ಗೆ ಕೊಚ್ಚಿನ್ ಶಿಫ್‌ಯಾರ್ಡ್‌ನಲ್ಲಿ ದೇಶದ ಪ್ರಥಮ ಸ್ವದೇಶಿ ನಿರ್ಮಿತ ವಿಕ್ರಾಂತ್ ಯುದ್ಧವಾಹಕ ನೌಕೆಯನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡುವರು. ಅಪರಾಹ್ನ ಮಂಗಳೂರಿಗೆ ಆಗಮಿಸಿ ಎನ್‌ಎಂಪಿಎ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಜೆ ದೆಹಲಿಗೆ ತೆರಳುವ ಸಾಧ್ಯತೆಗಳಿವೆ. ಅವರ ಪ್ರವಾಸದ ಅಧಿಕೃತ ವೇಳಾಪಟ್ಟಿಇನ್ನೆರಡು ದಿನಗಳಲ್ಲಿ ಅಂತಿಮಗೊಳ್ಳಲಿದೆ. ನವಮಂಗಳೂರು ಬಂದರಿಗೆ ಭೇಟಿ ನೀಡುವ ಪ್ರಧಾನಿಯವರು ಅಲ್ಲಿ ಈಗಾಗಲೇ ಪೂರ್ಣಗೊಂಡಿರುವ ಅನಘಾ ರಿಫೈನರಿ, ಬತ್‌ರ್ ನಂ.14 ಸೇರಿದಂತೆ 6 ಯೋಜನೆಗಳನ್ನು ಲೋಕಾರ್ಪಣೆಗೊಳಿಸಲಿದ್ದಾರೆ.
ಅದೇ ರೀತಿ ಸಾಗರಮಾಲಾ ಯೋಜನೆಯ ಕೆಲವು ಅಭಿವೃದ್ಧಿ ಕಾರ್ಯಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಪ್ರಧಾನಿ ಭೇಟಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್ ನೇತೃತ್ವದಲ್ಲಿ ಪೂರ್ವಸಿದ್ಧತಾ ಸಭೆ ಸೋಮವಾರ ನಡೆಸಲಾಗಿದೆ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಭದ್ರತೆ ಸೇರಿದಂತೆ ಪೂರಕ ಸಿದ್ಧತೆಗಳ ಸಭೆ ನಡೆಸತೊಡಗಿದ್ದಾರೆ. ಇಷ್ಟೇ ಇಲ್ಲದೆ 2021ರ ಜ.5ರಂದು ಮಂಗಳೂರಿನಲ್ಲಿ ನಿಗದಿಯಾಗಿದ್ದ ಕೊಚ್ಚಿನ್-ಮಂಗಳೂರು ಅನಿಲ ಕೊಳವೆ ಮಾರ್ಗ ಯೋಜನೆಯನ್ನು ದೆಹಲಿಯಿಂದಲೇ ವೀಡಿಯೋ ಕಾನ್ಫೆರೆನ್ಸ್ ಮೂಲಕ ಪ್ರಧಾನಿ ಮೋದಿ ಉದ್ಘಾಟಿಸಿದ್ದರು.
ಪ್ರಧಾನಿ ಮೋದಿ ಭೇಟಿ ವೇಳೆ ಪಂಜಾಬ್‌ನಲ್ಲಿ ಉಗ್ರ ದಾಳಿಗೆ ಸಂಚು, ಗುಪ್ತಚರ ಇಲಾಖೆ ಎಚ್ಚರಿಕೆ!
2016 ರಲ್ಲಿ ಕೇರಳದ ಕೊಚ್ಚಿಗೆ ತೆರಳುವ ಹಾದಿಯಲ್ಲಿ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದು ಕಾರ್ಯಕರ್ತರನ್ನು ಭೇಟಿಯಾಗಿದ್ದರು. 2017ರ ಡಿ.18 ರಂದು ಲಕ್ಷದ್ವೀಪಕ್ಕೆ ತೆರಳುವ ಹಾದಿಯಲ್ಲಿ ಮಂಗಳೂರಿನ ಸಕ್ರ್ಯೂಟ್ ಹೌಸ್‌ನಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ