
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಂಗಳೂರು ಹಾಗೂ ಮೈಸೂರಿಗೆ ಆಗಮಿಸಲಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ 15,600 ಕೋಟಿ ರು.ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇದರಲ್ಲಿ ಮಂಗಳೂರಿನಲ್ಲಿ 850 ಕೋಟಿ ರು. ವೆಚ್ಚದ, 80,000 ಮೆಟ್ರಿಕ್ ಟನ್‌ಗಳಷ್ಟು ಸಂಗ್ರಹಣಾ ಸಾಮರ್ಥ್ಯದ ಭಾರತದ ಅತಿದೊಡ್ಡ ಭೂಗತ ದ್ರವೀಕೃತ ಪೆಟ್ರೋಲಿಯಂ ಅನಿಲ ( ಎಲ್‌ಪಿಜಿ) ಸಂಗ್ರಹಣಾಗಾರದ ಲೋಕಾರ್ಪಣೆ ಸೇರಿದೆ. ಈ ಬಗ್ಗೆ ಪ್ರಧಾನಿ ಮೋದಿ ತನ್ನ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ದೇಶದ ಅತಿದೊಡ್ಡ ಭೂಗತ LPG ಸಂಸ್ಕರಣಾ ಘಟಕವು ಮಂಗಳೂರಿನಲ್ಲಿ ಬಾಲಾದಲ್ಲಿ ನಿರ್ಮಾಣ ಮಾಡಲಾಗಿದ್ದು, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಗಾಗಿ ಮೇಘಾ ಎಂಜಿನಿಯರಿಂಗ್ ಮತ್ತು ಮೂಲಸೌಕರ್ಯ ಲಿಮಿಟೆಡ್ (MEIL) ಅಭಿವೃದ್ಧಿಪಡಿಸಿರುವ ಈ ಸಂಗ್ರಹಣಾಗಾರವು ದೇಶದ ಪೆಟ್ರೋಲಿಯಂ ನಿಕ್ಷೇಪಗಳನ್ನು ಬಲಪಡಿಸುವತ್ತ ಒಂದು ಮಹತ್ವದ ಹೆಜ್ಜೆಯಾಗಿದೆ.
ಇದು ಭಾರತದ ಎರಡನೇ ಭೂಗತ LPG ಸಂಗ್ರಹಣಾ ಗುಹೆಯಾಗಿದ್ದು ಇಂಧನ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಶುದ್ಧ ಶಕ್ತಿಯ ನಿರಂತರ ಪೂರೈಕೆಗೆ ಸಹಕಾರಿಯಾಗಲಿದೆ. ಈ ಭೂಗತ ಎಲ್‌ಪಿಜಿ ಸಂಗ್ರಹಣಾಗಾರದಲ್ಲಿ ಆರು ಲಕ್ಷ ಬ್ಯಾರೆಲ್‌ಗಳು ಅಂದರೆ 60 ಮಿಲಿಯನ್ ಲೀಟರ್ ದ್ರವೀಕೃತ ಪೆಟ್ರೋಲಿಯಂ ಅನ್ನು ಶೇಖರಣೆ ಮಾಡಿ ಇಡಬಹುದಾಗಿದೆ. ಇದು 40,000 MT ಪ್ರೊಪೇನ್ ಮತ್ತು 60,000 MT ಬ್ಯುಟೇನ್ ಅನ್ನು ಹಿಡಿದಿಡಲು ಎರಡು ಪ್ರತ್ಯೇಕ ಭೂಗತ ಕೋಣೆಗಳನ್ನು ವಿನ್ಯಾಸಗೊಳಿಸಲಾಗಿದೆ.
854 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ಯೋಜನೆಯು ಎಲ್ಲಾ ಪರೀಕ್ಷೆಗಳನ್ನು ದಾಟಿ ಪಾಸ್ ಆಗಿದೆ. ಜೂನ್ 6 ರಂದು ಮೇಘಾ ಎಂಜಿನಿಯರಿಂಗ್ ಮತ್ತು ಮೂಲಸೌಕರ್ಯ ಲಿಮಿಟೆಡ್ ಯಶಸ್ವಿಯಾಗಿ ಪೂರ್ಣಗೊಂಡಿರುವುದಾಗಿ ಘೋಷಿಸಿತು. ಎಲ್ಲಾ ಪರೀಕ್ಷೆಗಳು ನಡೆದ ಬಳಿಕ ಅಕ್ಟೋಬರ್ 31ರಂದು ಸಂಪೂರ್ಣ ವಿಡಿಯೋ ಬಿಡುಗಡೆ ಮಾಡಿತು.
ಈ ಭೂಗತ ಗುಹೆಯನ್ನು ಅದ್ಭುತವಾಗಿ ವಿನ್ಯಾಸಗೊಳಿಸಲಾಗಿದೆ. ಇದು 1,083 ಮೀಟರ್ ಪ್ರವೇಶ ಸುರಂಗವನ್ನು ಹೊಂದಿದೆ, ಮೇಲಿನ ಮತ್ತು ಕೆಳಗಿನ ನೀರಿನ ಪರದೆಗಳು ಕ್ರಮವಾಗಿ 578.2 ಮೀಟರ್ ಮತ್ತು 804.31 ಮೀಟರ್ ಅಳತೆ ಮತ್ತು 486.2 ಮೀಟರ್ ಸಂಪರ್ಕಿಸುವ ಸುರಂಗಗಳನ್ನು ಹೊಂದಿವೆ. ಎರಡು ಮುಖ್ಯ ಶೇಖರಣಾ ಗುಹೆಗಳು S1 ಮತ್ತು S2 ಕ್ರಮವಾಗಿ 220 ಮೀಟರ್ ಮತ್ತು 225 ಮೀಟರ್ ಆಳದಲ್ಲಿವೆ, ಲಂಬವಾದ ಶಾಫ್ಟ್ 164.1 ಮೀಟರ್ ವಿಸ್ತರಿಸಿದೆ. 2019 ರಿಂದ ಕಾಮಗಾರಿ ಆರಂಭಿಸಲಾಗಿತ್ತು. ನೆಲದಿಂದ 500 ಮೀಟರ್‌ನಷ್ಟು ಆಳದಲ್ಲಿ ದೊಡ್ಡ ಕಲ್ಲನ್ನು ಕೊರೆದು ಸುರಂಗ ನಿರ್ಮಾಣ ಮಾಡಲಾಗಿದೆ.
ಮಂಗಳೂರು ಎಲ್‌ಪಿಜಿ ಶೇಖರಣಾ ಸಾಮರ್ಥ್ಯದ ಈ ಗುಹೆಯು ಭಾರತದ ಹೆಚ್ಚುತ್ತಿರುವ ಶುದ್ಧ ಇಂಧನ ಬೇಡಿಕೆಗಳನ್ನು ಪೂರೈಸುವಲ್ಲಿ ಮತ್ತು ಇಂಧನ ಪೂರೈಕೆಯಲ್ಲಿನ ಅಡೆತಡೆಗಳ ವಿರುದ್ಧ ಕಾರ್ಯ ನಿರ್ವಹಿಸಲಿದೆ. ಈಗಾಗಲೇ ಮಂಗಳೂರಿನ ಪೆರ್ಮುದೆ (1.5 ಲಕ್ಷ ಮೆಟ್ರಿಕ್ ಟನ್) ಹಾಗೂ ಪಾದೂರಿನಲ್ಲಿ (2.5 ಲಕ್ಷ ಮೆಟ್ರಿಕ್ ಟನ್) ಭೂಗತ ತೈಲ ಸಂಗ್ರಹಣಾಗಾರಗಳಿವೆ. ಸದ್ಯ ವಿಶಾಖಪಟ್ಟಣಂನಲ್ಲಿ ನಿರ್ಮಿಸಿರುವ ಎಲ್‌ಪಿಜಿ ಸಂಗ್ರಹಣಾಗಾರಕ್ಕೆ 60 ಸಾವಿರ ಟನ್ ಸಾಮರ್ಥ್ಯವಿದ್ದು. ಮಂಗಳೂರಿನದ್ದು 80 ಸಾವಿರ ಮೆಗಾಟನ್ ಸಾಮರ್ಥ್ಯದ ಮೂಲಕ ದೇಶದಲ್ಲೇ ಅತಿ ದೊಡ್ಡದಾದ ಭೂಗತ ಗುಹಾಂತರ ತೈಲ ಸಂಗ್ರಹಣಾಗಾರಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ