
ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರು. ಹಣಕಾಸಿನ ವ್ಯವಹಾರ ಹಾಗೂ ಭ್ರಷ್ಟಾಚಾರದ ಗಂಭೀರ ಆರೋಪಗಳ ಕುರಿತು ಸಮಗ್ರ ಮತ್ತು ಸ್ವತಂತ್ರ ತನಿಖೆ ನಡೆಸುವಂತೆ ಆಗ್ರಹಿಸಿ ಜೆಡಿಎಸ್ ಶಾಸಕರ ನಿಯೋಗವು ಬುಧವಾರ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿತು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ.ಸುರೇಶ್ ಬಾಬು, ಶಾಸಕ ರಾಜುಗೌಡ ಪಾಟೀಲ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಉಪ ನಾಯಕ ಟಿ.ಎ.ಶರವಣ ಒಳಗೊಂಡ ಜೆಡಿಎಸ್ ಶಾಸಕರ ನಿಯೋಗವು ಪ್ರಕರಣದ ಗಂಭೀರತೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಗಮನ ಸೆಳೆಯಿತು.
ಪ್ರಕರಣವನ್ನು ಜಿಲ್ಲಾಡಳಿತದ ಆಂತರಿಕ ತನಿಖೆಗೆ ಸೀಮಿತಗೊಳಿಸದೆ, ಲೋಕಾಯುಕ್ತ ಅಥವಾ ಸಮರ್ಥ ಸ್ವತಂತ್ರ ತನಿಖಾ ಸಂಸ್ಥೆಯ ಮೂಲಕ ಉನ್ನತ ಮಟ್ಟದ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ತನಿಖೆ ಪೂರ್ಣಗೊಳ್ಳುವವರೆಗೂ ಆರೋಪಿತ ಅಧಿಕಾರಿಗಳನ್ನು ಆಡಳಿತಾತ್ಮಕವಾಗಿ ಕರ್ತವ್ಯದಿಂದ ದೂರವಿಡುವ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಮನವಿ ಮಾಡಿದೆ.
ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ವಾಟ್ಸಾಪ್ ಸಂಭಾಷಣೆಗಳ ಸ್ಕ್ರೀನ್‌ಶಾಟ್‌ಗಳಲ್ಲಿ ಹಾಸನ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಅಪರ ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಸೇರಿದಂತೆ ವಿವಿಧ ಅಧಿಕಾರಿಗಳ ಹುದ್ದೆಗಳನ್ನು ಉಲ್ಲೇಖಿಸಿ ಕೋಟ್ಯಂತರ ರು. ಹಣಕಾಸಿನ ವ್ಯವಹಾರ, ಹಣದ ಹಂಚಿಕೆ ಮತ್ತು ಹೊಂದಾಣಿಕೆ ಕುರಿತು ಗಂಭೀರ ಆರೋಪಗಳು ಕೇಳಿ ಬಂದಿವೆ.
ವಿಶೇಷವಾಗಿ ಜಿಲ್ಲಾಧಿಕಾರಿಗೆ ಸಂಬಂಧಿಸಿದಂತೆ 50 ಲಕ್ಷ ರು., 60 ಲಕ್ಷ ರು. ಹಾಗೂ 75 ಲಕ್ಷ ರು.ವರೆಗಿನ ಮೊತ್ತಗಳ ಉಲ್ಲೇಖಗಳು ಹಾಗೂ ಉಪವಿಭಾಗಾಧಿಕಾರಿಗಳಿಗೆ ಸಂಬಂಧಿಸಿದಂತೆ 13 ಲಕ್ಷ ರು. ಮತ್ತು 20 ಲಕ್ಷ ರು. ಮೊತ್ತಗಳ ಪ್ರಸ್ತಾಪಗಳು ಸಂಭಾಷಣೆಗಳಲ್ಲಿ ಕಂಡುಬಂದಿವೆ. ಅಲ್ಲದೆ, ಸಕಲೇಶಪುರದ ಮೂರು ಕ್ರಷರ್‌ಗಳ ಕಡತಗಳ ಅನುಮೋದನೆ ಮತ್ತು ವಿಲೇವಾರಿ ಸಂಬಂಧ ಹಣದ ವ್ಯವಹಾರ ನಡೆದಿರುವ ಆರೋಪಗಳ ಬಗ್ಗೆಯೂ ಸಮಗ್ರ ತನಿಖೆ ಆಗಬೇಕು ಎಂದು ನಿಯೋಗ ಒತ್ತಾಯಿಸಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಮಧ್ಯವರ್ತಿಗಳ ಪಾತ್ರ, ಹಣಕಾಸಿನ ವಹಿವಾಟುಗಳ ಮೂಲ, ಬ್ಯಾಂಕ್ ಖಾತೆಗಳು, ಯುಪಿಐ ವ್ಯವಹಾರಗಳು ಹಾಗೂ ಇತರ ಹಣಕಾಸಿನ ದಾಖಲೆಗಳನ್ನು ಪರಿಶೀಲಿಸಬೇಕು. ಸಾರ್ವಜನಿಕವಾಗಿ ಬಿಡುಗಡೆಯಾಗಿರುವ ವಾಟ್ಸಾಪ್ ಸಂಭಾಷಣೆಗಳ ಸತ್ಯಾಸತ್ಯತೆಯನ್ನು ಮೂಲ ಮೊಬೈಲ್ ಸಾಧನಗಳು, ಡಿಜಿಟಲ್ ದಾಖಲೆಗಳು ಮತ್ತು ವಿಧಿವಿಜ್ಞಾನ ಪರೀಕ್ಷೆಯ ಮೂಲಕ ದೃಢಪಡಿಸಬೇಕು ಎಂದು ಆಗ್ರಹಿಸಿದೆ.
ಇದನ್ನೂ ಓದಿ: ಸಿಂಹದ ಮುಂದೆ ನಾಯಿ ಬೊಗಳುತ್ತಿರೋ ಕಾರ್ಟೂನ್; ಹಾಸನ ಡಿಸಿ ಲತಾ ಕುಮಾರಿ ಸ್ಟೇಟಸ್ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ