
ಬೆಂಗಳೂರು (ನ.11): ರಾಜ್ಯ ಧಾರ್ಮಿಕ ದತ್ತಿ ಇಲಾಖೆಯು ರೈಲ್ವೆ ಇಲಾಖೆ ಸಹಯೋಗದಲ್ಲಿ ‘ಭಾರತ್ ಗೌರವ್’ ರೈಲಿನಲ್ಲಿ ಆಯೋಜಿಸಿರುವ ‘ಕಾಶಿಯಾತ್ರೆ’ಕಾರ್ಯಕ್ರಮದ ಮೊದಲ ಯಾತ್ರೆ ಶುಕ್ರವಾರ ನ. 11ರಂದು ಬೆಂಗಳೂರಿನಿಂದ ಆರಂಭವಾಗಲಿದೆ. ಮೊದಲ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.
ರಾಜ್ಯದ ನಾನಾ ಭಾಗಗಳ 547 ಮಂದಿ ಯಾತ್ರಾರ್ಥಿಗಳು ಮೊದಲ ರೈಲಿನಲ್ಲಿ ತೆರಳುತ್ತಿದ್ದು, ಮುಂದಿನ ಎಂಟು ದಿನಗಳ ಕಾಲ ಕಾಶಿ, ಅಯೋಧ್ಯೆ ಹಾಗೂ ಪ್ರಯಾಗ್‌ರಾಜ್‌ನ ಹಿಂದು ಧಾರ್ಮಿಕ ಸ್ಥಳಗಳ ಪುಣ್ಯದರ್ಶನ ಪಡೆಯಲಿದ್ದಾರೆ. 20 ಸಾವಿರ ರು. ವೆಚ್ಚದ ಈ ಯಾತ್ರೆಗೆ ರಾಜ್ಯ ಸರ್ಕಾರ ಯಾತ್ರಾರ್ಥಿಗಳಿಗೆ ಐದು ಸಾವಿರ ರು. ಸಹಾಯಧನ ನೀಡುತ್ತಿದ್ದು, 15 ಸಾವಿರ ರು.ಗಳನ್ನು ಯಾತ್ರಾರ್ಥಿಗಳು ಪಾವತಿಸಿದ್ದಾರೆ. ಪ್ರಯಾಣಿಕರಿಗೆ ಸ್ಲೀಪರ್ 3ಎಸಿ ಆಸನ ನೀಡಲಾಗುತ್ತದೆ. ಊಟ, ವಸತಿ, ಸ್ಥಳಗಳ ಭೇಟಿ ಎಲ್ಲವನ್ನು ಐಆರ್‌ಸಿಟಿಸಿ ಸಿಬ್ಬಂದಿಯೇ ನಿರ್ವಹಿಸಲಿದ್ದಾರೆ.
ದಕ್ಷಿಣದ ಮೊದಲ ವಂದೇ ಭಾರತ್ ರೈಲಿಗೆ ಇಂದು ಮೋದಿ ಚಾಲನೆ
3ನೇ ಯಾತ್ರೆಗೆ ಬೇಡಿಕೆ: ಕಾಶಿಯಾತ್ರೆಗೆ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಆಸನ ಬುಕ್ಕಿಂಗ್ ಮಾಡಿಕೊಳ್ಳಬೇಕು. ಕಾರ್ಯಕ್ರಮದ ಎರಡನೇ ಯಾತ್ರೆಯು ನ.23ಕ್ಕೆ ನಿಗದಿಯಾಗಿತ್ತು. ಈಗಾಗಲೇ ರೈಲಿನ ಎಲ್ಲ 547 ಆಸನಗಳು ಭರ್ತಿಯಾಗಿವೆ ಎಂದು ಮುಜರಾಯಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮೂರನೇ ಯಾತ್ರೆಯನ್ನು ಶೀಘ್ರದಲ್ಲಿಯೇ ಆರಂಭಿಸಬೇಕು ಎಂಬ ಬೇಡಿಕೆ ರಾಜ್ಯದ ಪ್ರವಾಸಿಗರಿಂದ ಕೇಳಿಬಂದಿದೆ.
ರೈಲು ನಿಲುಗಡೆ ನಿಲ್ದಾಣ: ಬೆಂಗಳೂರು, ಬೀರೂರು, ಹಾವೇರಿ, ಹುಬ್ಬಳ್ಳಿ, ಬೆಳಗಾವಿ ಹಾಗೂ ರಾಯಭಾಗ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ. ರೈಲು ಹತ್ತುವವರು ಮತ್ತು ಇಳಿಯುವವರು ಬುಕ್ಕಿಂಗ್ ಸಮಯದಲ್ಲಿ ಈ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಎಂಟು ದಿನಗಳ ಯಾತ್ರೆ ಹೀಗಿರಲಿದೆ:
1ನೇ ದಿನ - ಮಧ್ಯಾಹ್ನ 1ಕ್ಕೆ ಬೆಂಗಳೂರಿನಿಂದ ಯಾತ್ರೆ ಆರಂಭ
2ನೇ ದಿನ - ರೈಲು ಪ್ರಯಾಣ
3ನೇ ದಿನ - ಮಧ್ಯಾಹ್ನ ವಾರಾಣಸಿ (ಕಾಶಿ) ತಲುಪಿ ವಿಶ್ರಾಂತಿ
4ನೇ ದಿನ - ವಾರಾಣಸಿ ತುಳಸಿ ಮಂದಿರ, ಸಂಕಟ ಮೋಚ್ ಹನುಮಾನ್ ಮಂದಿರ ಭೇಟಿ. ಬಳಿಕ ಗಂಗಾ ಸ್ನಾನ, ಕಾಶಿ ವಿಶ್ವನಾಥ ದೇವಸ್ಥಾನ ಭೇಟಿ, ಗಂಗಾರತಿ ವೀಕ್ಷಣೆ.
5ನೇ ದಿನ - ವಾರಾಣಸಿಯಿಂದ ಅಯೋಧ್ಯೆಗೆ ಪ್ರಯಾಣ. ರಾಮಜನ್ಮ ಭೂಮಿ ದೇವಸ್ಥಾನ, ಹನುಮಾನ ಗರ್ಹಿ, ಸರಾಯು ಘಾಟ್ ಭೇಟಿ ನೀಡಿ ಅಲ್ಲಿಂದ ಪ್ರಯಾಗ್‌ರಾಜ್‌ಗೆ ಪ್ರಯಾಣ.
6ನೇ ದಿನ - ಪ್ರಯಾಗ್ ರಾಜ್ ತ್ರಿವೇಣಿ ಸಂಗಮ, ಹನುಮಾನ್ ದೇವಸ್ಥಾನ. ಮಧ್ಯಾಹ್ನ 1ಕ್ಕೆ ರಾಜ್ಯದತ್ತ ಪ್ರಯಾಣ.
7ನೇ ದಿನ - ರೈಲು ಪ್ರಯಾಣ
8ನೇ ದಿನ - ಮಧ್ಯಾಹ್ನ 1.30ಕ್ಕೆ ಬೆಂಗಳೂರಿಗೆ ಆಗಮನ.
ಯಾತ್ರೆಯ ವಿಶೇಷ: 8 ದಿನದ ಯಾತ್ರೆ. ವಾರಾಣಸಿ, ಅಯೋಧ್ಯೆ, ಪ್ರಯಾಗ್‌ರಾಜ್‌ನಲ್ಲಿ ಹಲವು ಸ್ಥಳಗಳ ಭೇಟಿ. ರೈಲಿನಲ್ಲಿ 3 ಎಸಿ ಸ್ಲೀಪರ್ ದರ್ಜೆ ಸೀಟು. ಊಟ, ವಸತಿ, ಭೇಟಿ ಎಲ್ಲವೂ ರೈಲ್ವೆಯಿಂದ ನಿರ್ವಹಣೆ. ರಾಜ್ಯದ 6 ಸ್ಥಳಗಳಲ್ಲಿ ರೈಲು ಹತ್ತಲು, ಇಳಿಯಲು ಅವಕಾಶ.
ಅಭಿವೃದ್ಧಿಗೆ ಪ್ರೇರಣೆ ಆಗಲಿ ಎಂದು ಕೆಂಪೇಗೌಡ ಪ್ರತಿಮೆ ಸ್ಥಾಪನೆ: ಸಿಎಂ ಬೊಮ್ಮಾಯಿ
ಪ್ರಧಾನಿ ನರೇಂದ್ರ ಮೋದಿ ಅವರು ಮರು ನಿರ್ಮಿಸಿರುವ ‘ದಿವ್ಯ ಕಾಶಿ- ಭವ್ಯಕಾಶಿ’ಯನ್ನು ರಾಜ್ಯದ ಭಕ್ತಾದಿಗಳು ಕಣ್ತುಂಬಿಕೊಳ್ಳಬೇಕು ಎಂಬ ಉದ್ದೇಶದಿಂದ ರೈಲ್ವೆ ಇಲಾಖೆ ಸಹಯೋಗದೊಂದಿಗೆ ಈ ವಿಶೇಷ ಪ್ಯಾಕೇಜ್ ಟೂರ್ ಆಯೋಜಿಸಲಾಗಿದೆ. ಪ್ರಧಾನ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಯಾತ್ರೆಗೆ ಚಾಲನೆ ಸಿಗುತ್ತಿದೆ. ರಾಜ್ಯದ ಜನರು ಇದರ ಉಪಯೋಗ ಪಡೆದುಕೊಳ್ಳಬೇಕು.
-ಶಶಿಕಲಾ ಜೊಲ್ಲೆ, ಮುಜರಾಯಿ ಸಚಿವೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ