
ಬೆಂಗಳೂರು (ನ.11): ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ನಗರದಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ಉದ್ಘಾಟನೆ, ಕೆಂಪೇಗೌಡ ಕಂಚಿನ ಪ್ರತಿಮೆ ಲೋಕಾರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಹೀಗಾಗಿ ಕಾರ್ಯಕ್ರಮ ನಡೆಯುವ ಸ್ಥಳಗಳು ಸೇರಿದಂತೆ ಪ್ರಧಾನಿಯ ಸಂಚಾರವಿರುವ ಸ್ಥಳಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಅವರೇ ಭದ್ರತೆಯ ಉಸ್ತುವಾರಿ ವಹಿಸಿದ್ದಾರೆ. ಇವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಸುಬ್ರಹ್ಮಣ್ಯೇಶ್ವರ ರಾವ್, ಜಂಟಿ ಪೊಲೀಸ್ ಆಯುಕ್ತ ಡಾ. ಬಿ.ಆರ್.ರವಿಕಾಂತೇಗೌಡ, ರಮಣಗುಪ್ತ ಸೇರಿದಂತೆ ಐವರು ಡಿಸಿಪಿಗಳು ಭದ್ರತೆ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಸುಗಮ ಸಂಚಾರ ಹಾಗೂ ಭದ್ರತೆ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ಪ್ರಧಾನಿ ಮೋದಿ ಅವರ ಸಂಚಾರವಿರುವ ಮಾರ್ಗಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಅಭಿವೃದ್ಧಿಗೆ ಪ್ರೇರಣೆ ಆಗಲಿ ಎಂದು ಕೆಂಪೇಗೌಡ ಪ್ರತಿಮೆ ಸ್ಥಾಪನೆ: ಸಿಎಂ ಬೊಮ್ಮಾಯಿ
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಹಮ್ಮಿಕೊಂಡಿರುವ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಅಲ್ಲದೆ, ಈ ಸಮಾವೇಶದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸುಮಾರು ನಾಲ್ಕು ಲಕ್ಷ ಜನರು ಭಾಗಿಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಮಾವೇಶ ನಡೆಯುವ ಸ್ಥಳದಲ್ಲಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಭದ್ರತೆಗೆ ನಾಗರಿಕ ಪೊಲೀಸ್, ಸಿಎಆರ್, ಡಿಎಆರ್, ಕೆಎಸ್‌ಆರ್‌ಪಿ, ಗೃಹರಕ್ಷಕ ದಳ ಸೇರಿದಂತೆ ವಿಶೇಷ ಪಡೆಗಳನ್ನು ಬಳಸಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಬಂದು ವಾಪಾಸ್ ಆಗುವವರೆಗೂ ನಗರ ಹಾಗೂ ನಗರದ ಹೊರವಲಯದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಲಿದ್ದಾರೆ.
ಪಾದಚಾರಿಗಳ ಸುರಕ್ಷತೆಗಾಗಿ ಪ್ರತ್ಯೇಕ ಇನ್‌ಸ್ಪೆಕ್ಟರ್: ಮಾಜಿ ಸಚಿವ ಎಸ್.ಸುರೇಶ್‌ಕುಮಾರ್ ಅವರ ಮನವಿ ಹಿನ್ನಲೆಯಲ್ಲಿ ನಗರ ವ್ಯಾಪ್ತಿ ಪಾದಚಾರಿಗಳು ಮತ್ತು ಸೈಕಲ್ ಬಳಕೆದಾರರ ಸುರಕ್ಷತೆಗೆ ಪ್ರತ್ಯೇಕವಾಗಿ ಪೊಲೀಸರ ನಿಯೋಜನೆ ಸಂಬಂಧ ಅಧಿಕಾರಿಗಳ ಜತೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಮಾಲೋಚಿಸಿದರು. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಗುರುವಾರ ಸಭೆ ನಡೆಸಿದ ಸಚಿವರು, ನಗರದಲ್ಲಿ ಸಂಚಾರ ದಟ್ಟಣೆಯಿಂದ ಪಾದಚಾರಿಗಳು, ಹಿರಿಯ ನಾಗರಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಕುರಿತು ಮಾಹಿತಿ ಪಡೆದರು.
ಬೆಂಗಳೂರಿಗೆ ಮೋದಿ ಆಗಮನ: ಸಂಚಾರದಲ್ಲಿ ವ್ಯತ್ಯಯ, ಮನೆಯಿಂದ ಹೊರಡುವಾಗ ಹುಷಾರು!
ಈ ಸಭೆಯಲ್ಲಿ ಸುರೇಶ್ ಕುಮಾರ್, ಸಿಐಡಿಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಉಮೇಶ್ ಕುಮಾರ್ ಹಾಗೂ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಡಾ.ಬಿ.ಆರ್.ರವಿಕಾಂತೇಗೌಡ ಉಪಸ್ಥಿತರಿದ್ದರು. ಇತ್ತೀಚಿಗೆ ಪಾದಚಾರಿಗಳು ಮತ್ತು ಸೈಕಲ್ ಬಳಕೆದಾರರ ಸುರಕ್ಷತೆಗೆ ಸಂಚಾರ ವಿಭಾಗದ ನಾಲ್ಕು ಡಿಸಿಪಿ ವಲಯ ಮಟ್ಟದಲ್ಲಿ ಓರ್ವ ಪೊಲೀಸ್ ಇನ್ಸ್‌ಪೆಕ್ಟರ್ ಅನ್ನು ನಿಯೋಜಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಸುರೇಶ್‌ಕುಮಾರ್ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಸಚಿವರು, ಮಾಜಿ ಸಚಿವರ ಉಪಸ್ಥಿತಿಯಲ್ಲೇ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ