PM Narendra Modi: ಡಬಲ್‌ ಎಂಜಿನ್‌ನಿಂದ ಅಭಿವೃದ್ಧಿ: ಹಲವು ಯೋಜನೆಗಳಿಗೆ ಚಾಲನೆ

Published : Jun 21, 2022, 05:10 AM IST
PM Narendra Modi: ಡಬಲ್‌ ಎಂಜಿನ್‌ನಿಂದ ಅಭಿವೃದ್ಧಿ: ಹಲವು ಯೋಜನೆಗಳಿಗೆ ಚಾಲನೆ

ಸಾರಾಂಶ

ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಈ ಡಬಲ್‌ ಎಂಜಿನ್‌ ಸರ್ಕಾರವನ್ನು ಟೀಕಿಸುವ ವಿರೋಧಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳ ಪಟ್ಟಿ ಮೂಲಕವೇ ಉತ್ತರ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಬೆಂಗಳೂರು/ಮೈಸೂರು (ಜೂ.21): ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಡಬಲ್‌ ಎಂಜಿನ್‌ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ. ಈ ಡಬಲ್‌ ಎಂಜಿನ್‌ ಸರ್ಕಾರವನ್ನು ಟೀಕಿಸುವ ವಿರೋಧಿಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಿರುವ ಯೋಜನೆಗಳ ಪಟ್ಟಿ ಮೂಲಕವೇ ಉತ್ತರ ಕೊಡಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಸೋಮವಾರ ಬೆಂಗಳೂರು ಮತ್ತು ಮೈಸೂರಿನ ಸಮಾರಂಭಗಳಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಾ ನಂತರದಲ್ಲಿ ದೇಶದ ಆಡಳಿತ ನಡೆಸಿದವರು ನೀಡಿದ ಯೋಜನೆಗಳಿಗೂ ಕಳೆದ ಎಂಟು ವರ್ಷಗಳಲ್ಲಿ ನಾವು ನೀಡಿದ ಯೋಜನೆಗಳಿಗೂ ಹೋಲಿಕೆ ಮಾಡಿ ನೋಡಿದರೆ ಫಲಿತಾಂಶ ತಿಳಿಯುತ್ತದೆ. ಈ ವಿಷಯ ವಿರೋಧಿಗಳಿಗೆ ಗೊತ್ತಿದ್ದರೂ ಕ್ಷುಲ್ಲಕ ಕಾರಣಕ್ಕಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಸದಾ ಟೀಕಿಸುತ್ತಿದ್ದಾರೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಗ್ಗುವುದಿಲ್ಲ. ಅದಕ್ಕಾಗಿ ನಿಮ್ಮ ಶಕ್ತಿಯನ್ನು ನಮಗೆ ಧಾರೆಯೆರಬೇಕು ಎಂದರು.

ಉಕ್ರೇನ್‌ನಲ್ಲಿ ಮಡಿದ ನವೀನ್ ಪೋಷಕರ ಭೇಟಿ ಮಾಡಿ ಸಾಂತ್ವನ ಹೇಳಿದ ಪ್ರಧಾನಿ ಮೋದಿ!

ಈ ಹಿಂದೆ ಕರ್ನಾಟಕದಲ್ಲಿ 16 ಕಿ.ಮೀ. ರೈಲ್ವೆ ವಿದ್ಯುದೀಕರಣ ಕಾಮಗಾರಿಗೆ 10 ವರ್ಷ ತೆಗೆದುಕೊಳ್ಳಲಾಗಿತ್ತು. ಆದರೆ ನಮ್ಮ ಸರ್ಕಾರ ಬಂದ ಬಳಿಕ ಕೇವಲ 8 ವರ್ಷದಲ್ಲಿ 1600 ಕಿ.ಮೀ. ವಿದ್ಯುದೀಕರಣ ಮಾಡಲಾಗಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಕರ್ನಾಟಕದ ರೈಲು ಮಾರ್ಗದಲ್ಲಿ 1600 ಕಿ.ಮೀ. ವಿದ್ಯುದೀಕರಣ ಯೋಜನೆ ಪೂರ್ಣಗೊಳ್ಳಲಿದೆ. ಡಬಲ್‌ ಎಂಜಿನ್‌ ಸರ್ಕಾರದ ಆಡಳಿತ ವೈಖರಿಗೆ ಇದು ಉದಾಹರಣೆಯಷ್ಟೆಎಂದರು.

ಕೇಂದ್ರದಲ್ಲಿ ನಮ್ಮ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಬಡವರು, ರೈತರು, ಕೃಷಿಕರು, ಕಾರ್ಮಿಕರ ಪರ ಹತ್ತು ಹಲವು ಯೋಜನೆ ಜಾರಿ ಮಾಡಿರುವುದು ಒಂದೆಡೆಯಾದರೆ, ಸಾಮಾಜಿಕ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿಯೂ ಕೂಡ ಮಹತ್ವದ ಹೆಜ್ಜೆ ಇರಿಸಿದ್ದೇವೆ. ಈವರೆಗೆ ಐದು ಸಾವಿರ ಕಿಲೋ ಮೀಟರ್‌ ರಸ್ತೆಯನ್ನು ಉನ್ನತೀಕರಿಸಲಾಗಿದ್ದರೆ, ಮತ್ತಷ್ಟುರಸ್ತೆಗಳನ್ನು ಅಭಿವೃದ್ದಿ ಮಾಡಲಾಗಿದೆ. ಇನ್ನು ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಪುರಸ್ಕೃತ ಯೋಜನೆಗಳು ಸಂಪೂರ್ಣವಾಗಿ ಅನುಷ್ಠಾನಗೊಂಡ ಬಳಿಕ ಕರ್ನಾಟಕದ ಇಡೀ ಚಿತ್ರಣವೇ ಬದಲಾಗಲಿದೆ. ಇಡೀ ರಾಜ್ಯದ ಉದ್ಯಮ ನಿರೀಕ್ಷೆಗೂ ಮೀರಿ ಬೆಳವಣಿಗೆ ಕಾಣಲಿದೆ ಎಂದು ಅವರು ಹೇಳಿದರು.

ರಾಜ್ಯಕ್ಕೆ ನಿರೀಕ್ಷೆಗೂ ಮೀರಿದ ಪಾಲು- ಮೋದಿ: ಕೇಂದ್ರ ಸರ್ಕಾರದ ಆಯವ್ಯಯದಲ್ಲಿ ಕರ್ನಾಟಕ ರಾಜ್ಯಕ್ಕೆ ನಿರೀಕ್ಷೆಗೂ ಮೀರಿದ ಪಾಲು ನೀಡಲಾಗಿದೆ. ಈ ಎಲ್ಲಾ ಯೋಜನೆಗಳು ಸಂಪೂರ್ಣವಾಗಿ ಅನುಷ್ಠಾನಗೊಂಡ ಬಳಿಕ ಇಡೀ ದೇಶದ ನಕ್ಷೆಯಲ್ಲಿ ಕರ್ನಾಟಕ ಎದ್ದು ಕಾಣಲಿದೆ. ಇಂತಹ ಅಭಿವೃದ್ಧಿ ಯೋಜನೆಗಳನ್ನು ನೀವು ಕಾಣಬೇಕಿದ್ದಲ್ಲಿ ನಿಮ್ಮ ಆಶೀರ್ವಾದ ನಮಗೆ ಬೇಕು. ಅದು ನಮಗೆ ಕೆಲಸ ಮಾಡಲು ಉತ್ತೇಜನ ನೀಡಿದಂತಾಗುತ್ತದೆ ಎಂದು ಅವರು ತಿಳಿಸಿದರು.

ಉದ್ಯಾನನಗರಿ ಬೆಂಗಳೂರು ದೇಶದ ಲಕ್ಷಾಂತರ ಯುವ ಜನರಲ್ಲಿ ಕನಸುಗಳನ್ನು ಅರಳಿಸುತ್ತಿದೆ. ಬೆಂಗಳೂರಿನ ಸಂಚಾರ ದಟ್ಟಣೆಗೆ ಮುಕ್ತಿ ನೀಡಲು, ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಡಬಲ್‌ ಎಂಜಿನ್‌ ಸರ್ಕಾರ ಸದಾ ಬದ್ಧವಾಗಿದೆ. ಬೆಂಗಳೂರು ಕನಸುಗಳ ನಗರ. ದೇಶದ ಕನಸುಗಳನ್ನು ಬೆಂಗಳೂರು ಸಾಕಾರಗೊಳಿಸುವ ನಗರವಾಗಿ ಹೊರಹೊಮ್ಮಿದೆ. ಬೆಂಗಳೂರು ಅಭಿವೃದ್ಧಿಗೆ ಮತ್ತು ಜನರ ಸೇವೆಗೆ ಪ್ರತಿಕ್ಷಣವನ್ನೂ ಮೀಸಲಿರಿಸಿದ್ದೇನೆ ಎಂದು ಹೇಳಿದರು.

ಬೆಂಗಳೂರು ಮಹಾನಗರದ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಮೆಟ್ರೋ ರೈಲು ಯೋಜನೆ, ಉಪನಗರ ರೈಲ್ವೆ ಯೋಜನೆ, ವರ್ತುಲ ರಸ್ತೆ ನಿರ್ಮಾಣದಂತಹ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಗಳು ಅನುಷ್ಠಾನಕ್ಕೆ ಬಂದರೆ ಸಂಚಾರ ದಟ್ಟಣೆ ಪ್ರಯಾಣದ ಅವಧಿ ಕಡಿತಗೊಂಡು ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಿವೆ. ಬೆಂಗಳೂರು ಶ್ರೇಷ್ಠ ಭಾರತದ ನಿಜವಾದ ಪ್ರತಿಬಿಂಬವಾಗಿದೆ. ನಗರದ ಪ್ರಗತಿಯು ಲಕ್ಷಗಟ್ಟಲೆ ಕನಸುಗಳ ಪ್ರಗತಿಯೊಂದಿಗೆ ತಳಕು ಹಾಕಿಕೊಂಡಿದೆ. ಬೆಂಗಳೂರು ನಗರ ಯೋಚನೆ ಲಹರಿಯನ್ನು ಬದಲಿಸುವ ಶಕ್ತಿ ಇದೆ. ಜನರು ತಮ್ಮ ಮನಸ್ಥಿತಿಯನ್ನು ಬದಲಾಯಿಸುವುದನ್ನು ಕಲಿಸುತ್ತದೆ ಎಂದರು.

PM Modi in Mysuru ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಪ್ರಧಾನಿ ಮೋದಿ!

ಸ್ವಾರ್ಚ್‌ಅಪ್‌ ಮತ್ತು ನಾವೀನ್ಯತೆಯ ಹಾದಿಯು ಸುಲಭವಲ್ಲ. ಕಳೆದ ಎಂಟು ವರ್ಷಗಳಿಂದ ದೇಶವನ್ನು ಈ ಹಾದಿಯಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮ ವಹಿಸಲಾಗುತ್ತಿದೆ. ಹಲವಾರು ತೀರ್ಮಾನಗಳು ಮತ್ತು ಸುಧಾರಣೆಗಳು ತಾತ್ಕಾಲಿಕವಾಗಿ ಅಹಿತಕರವಾಗಬಹುದು. ಆದರೆ, ಕಾಲಾನಂತರದಲ್ಲಿ ಅವುಗಳ ಪ್ರಯೋಜನಗಳನ್ನು ದೇಶ ಅನುಭವಿಸಲಿದೆ. ಸುಧಾರಣೆಗಳ ಹಾದಿಯೇ ನಮ್ಮನ್ನು ಹೊಸ ಗುರಿ ಮತ್ತು ಹೊಸ ಸಂಕಲ್ಪಗಳತ್ತ ಕೊಂಡೊಯ್ಯಬಲ್ಲದು ಎಂದು ಅಭಿಪ್ರಾಯಪಟ್ಟರು. ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಸೇರಿದಂತೆ ರಾಜ್ಯದ ಸಚಿವರು ಹಾಗೂ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!
ಗ್ರಾಪಂ ಅಧ್ಯಕ್ಷರೂ ಮತ್ತು ಹಸಿರು ಪೆನ್ನೂ...!