ಚಂದ್ರಯಾನ-3 ಯಶಸ್ವಿಗೊಳಿಸಿ ದೇಶದ ಕೀರ್ತಿಪಾತಾಕೆ ಹಾರಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಬೆಂಗಳೂರು (ಆ.26): ಚಂದ್ರಯಾನ-3 ಯಶಸ್ವಿಗೊಳಿಸಿ ದೇಶದ ಕೀರ್ತಿಪಾತಾಕೆ ಹಾರಿಸಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅಲ್ಲಿ ತುಸು ಹೊತ್ತು ವಿಶ್ರಾಂತಿ ಪಡೆಯಲಿರುವ ಅವರು, ನಂತರ ಪೀಣ್ಯದಲ್ಲಿರುವ ಇಸ್ರೋ ಪ್ರಧಾನ ಕಚೇರಿಗೆ ತೆರಳಲಿದ್ದಾರೆ.
ಇಸ್ರೋ ಟೆಲಿಮೆಟ್ರಿ ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ ಮಿಷನ್ ಕಂಟ್ರೋಲ್ ಕಾಂಪ್ಲೆಕ್ಸ್‌ನಲ್ಲಿ ಚಂದ್ರಯಾನ-3 ಮಿಷನ್‌ನಲ್ಲಿ ತೊಡಗಿರುವ ಇಸ್ರೋ ತಂಡದ ವಿಜ್ಞಾನಿಗಳನ್ನು ಭೇಟಿ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಪೋಸ್ಟರ್‌ಗಳು ಮತ್ತು ರಾಷ್ಟ್ರಧ್ವಜದೊಂದಿಗೆ ಸ್ಥಳೀಯರು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ ಬೀದಿಗಳಲ್ಲಿ ಜಮಾಯಿಸಿದ್ದಾರೆ.
ಬೆಂಗಳೂರು ಇಸ್ರೋ ಕೇಂದ್ರಕ್ಕೆ ಇಂದು ಮೋದಿ: ಇಸ್ರೋ ವಿಜ್ಞಾನಿಗಳ ಭೇಟಿ
ಗ್ರೀಕ್ ದೇಶದಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ರಾಜ್ಯ ಬಿಜೆಪಿ ನಾಯಕರು ಸ್ವಾಗತಿಸಿದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದರಾದ ತೇಜಸ್ವಿ ಸೂರ್ಯ, ಎಸ್.ಮುನಿಸ್ವಾಮಿ, ಶಾಸಕರಾದ ಭೈರತಿ ಬಸವರಾಜ್, ಮಂಜುಳಾ ಲಿಂಬಾವಳಿ ಪ್ರಧಾನಿಯವರನ್ನು ಸ್ವಾಗತಿಸಿದರು. ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಸಾರ್ವಜನಿಕರು ರಾಷ್ಟ್ರಧ್ವಜ ಹಿಡಿದು ಜೈಕಾರ ಹಾಕುತ್ತಿದ್ದು, ಕಲಾತಂಡಗಳಿಂದ ಅದ್ಭುತ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಜಾಲಹಳ್ಳಿ ಕ್ರಾಸ್ ಬಳಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮುಟ್ಟಿದ್ದು, ಅಭಿಮಾನಿಗಳು ಡೊಳ್ಳು ಭಾರಿಸಿ ಸಂಭ್ರಮ ಪಡುತ್ತಿದ್ದಾರೆ. ಮೋದಿ ನೋಡಲು ಜನ ಜಮಾಯಿಸುತ್ತಿದ್ದು, ಭಾರತದ ಧ್ವಜ ಹಿಡಿದು, ಭಾರತ್ ಮಾತಾಕಿ ಜೈ ಎಂದು ಘೋಷಣೆ ಕೂಗಿ ಸಂಭ್ರಮಿಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಮೋದಿ ಗುಣಗಾನ ಮಾಡುತ್ತಿದ್ದು, ಇಸ್ರೋ ವಿಜ್ಞಾನಿಗಳ ಪರವಾದ ಘೋಷಣೆ ಕೂಗಲಾಗುತ್ತಿದೆ. ಮೋದಿ ಆಗಮನಕ್ಕೆ ಕಾದು ನಿಂತ ಜನರು ಎಲ್ಲೆಲ್ಲೂ ರಾಷ್ಟ್ರಧ್ವಜವನ್ನು ಹಾರಿಸುತ್ತಿದ್ದಾರೆ.
ಬೆಂಗಳೂರಿಗೆ ಮೋದಿ ಆಗಮನ ಹಿನ್ನೆಲೆ: ಇಸ್ರೋ ರಸ್ತೆ ಪೊಲೀಸ್ ‘ವಶ’
ಇಸ್ರೋಗೆ ಮೋದಿ ಭೇಟಿ ಹಿನ್ನೆಲೆ ಸ್ವಾಗತ ಕೋರಿ ಫ್ಲೆಕ್ಸ್ ಗಳನ್ನು ಇಸ್ರೋ ಸಂಸ್ಥೆಯಿಂದ ಅಳವಡಿಕೆ ಮಾಡಲಾಗಿದೆ. ಹೆಚ್‌ಎಎಲ್ ಏರ್ಪೋರ್ಟ್ ಇಂದ ಪೀಣ್ಯಾ ಇಸ್ರೋವರಗೆ ಅಳವಡಿಸಲಾಗಿದ್ದು, ಮೋದಿ ಪ್ರದಾನಿ ಸಾಗುವ ಮಾರ್ಗದ ರಸ್ತೆಯ ಎರಡು ಬದಿಗಳಲ್ಲಿ ಸ್ವಾಗತ ಕೋರಿ ಫ್ಲೆಕ್ಸ್ ಗಳನ್ನು ಹಾಕಲಾಗಿದೆ. ಇನ್ನು ಸಿಸ್ಟಮ್ ಸರ್ಕಲ್ ಬಳಿ ಸಾರ್ವಜನಿಕರು ಆಗಮಿಸುತ್ತಿದ್ದು, ಭಾರತ್ ಮಾತಾಕಿ ಜೈ, ವಂದೇ ಮಾತರಂ ಘೋಷಣೆ ಹಾಕಿದ್ದು,ಈ ವೇಳೆ ಸಾರ್ವಜನಿಕರ ಜೊತೆ ಭಾಸ್ಕರ್ ರಾವ್ ನಿಂತಿದ್ದಾರೆ.