ಕೊರೋನಾ ಲಸಿಕೆ ವಿತರಣೆ: ರಾಜ್ಯದಲ್ಲಿ ಎಲ್ಲೆಲ್ಲಿ ಸಿಗುತ್ತೆಂದು ಮಾಹಿತಿ ಕೊಟ್ಟ ಸುಧಾಕರ್

By Suvarna News  |  First Published Jan 15, 2021, 6:01 PM IST

ದೇಶೆದೆಲ್ಲೆಡೆ ನಾಳೆಯಿಂದ ಅಂದ್ರೆ ಜನವರಿ 16ರಿಂದ ಕೊರೋನಾ ಲಸಿಕೆ ವಿತರಣೆಯಾಗಲಿದೆ. ಇನ್ನು ರಾಜ್ಯದಲ್ಲೂ ಸಹ ಆಗುತ್ತಿದ್ದು, ಎಲ್ಲೆಲ್ಲಿ ಲಸಿಕೆ ಸಿಗುತ್ತೆ ಎನ್ನುವುದರ ಬಗ್ಗೆ ಆರೋಗ್ಯ ಸಚಿವರು ಮಾಹಿತಿ ನೀಡಿದ್ದಾರೆ.


ಬೆಂಗಳೂರು, (ಜ.15): ರಾಜ್ಯದ 243 ಕಡೆಗಳಲ್ಲಿ ಶನಿವಾರ (ಜನವರಿ 16) ಕೊರೊನಾ ಲಸಿಕೆ ನೀಡುತ್ತಿದ್ದು, ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜು ಸೇರಿದಂತೆ 10 ಕಡೆಗಳಲ್ಲಿ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಕೊರೋನಾ ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ನಾಳೆ  (ಶನಿವಾರ) ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ವಿತರಣೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

Tap to resize

Latest Videos

ಬೆಂಗಳೂರಿಗೆ ಬಂತು ಕೊರೋನಾ ತಡೆಗೆ ರಾಮಬಾಣ, ಪರಿಶೀಲಿಸಿದ ಆರೋಗ್ಯ ಸಚಿವ

 ಬೆಂಗಳೂರು ಒಂದರಲ್ಲೇ 10 ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುವುದು. ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲೂ ನೀಡಲಾಗುವುದು. ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯದ 237 ಕೇಂದ್ರ ಹಾಗೂ ಕೋವ್ಯಾಕ್ಸಿನ್ ಲಸಿಕೆಯನ್ನು ಬಳ್ಳಾರಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ದಾವಣಗೆರೆ ಕೇಂದ್ರಗಳಲ್ಲಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಲಸಿಕೆ ನೀಡಲು ಮೊದಲಿಗೆ ಜನಪ್ರತಿನಿಧಿಗಳನ್ನೇ ಆರಿಸಬಹುದಿತ್ತು. ಆದರೆ ಕೊರೋನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವವರಿಗೆ ಮೊದಲ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲಾಗುತ್ತಿದೆ. ಬಳಿಕ ಇತರೆ ರೋಗಗಳಿಂದ ಬಳಲುವವರಿಗೆ ಲಸಿಕೆ ನೀಡಲಾಗುವುದು ಎಂದರು.

7,17,439 ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತದೆ. ಮೊದಲ ದಿನ 24,300 ಮಂದಿಗೆ ನೀಡುವ ಗುರಿ ಇದೆ. ನಮ್ಮಲ್ಲಿ ಒಟ್ಟು 8,14,500 ಡೋಸ್ ಲಸಿಕೆ ಲಭ್ಯವಿದ್ದು, ಒಂದು ವಾರದೊಳಗೆ ಮೊದಲ ಹಂತದ ವಿತರಣೆ ಪ್ರಕ್ರಿಯೆ ಮುಗಿಯುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಸರ್ಕಾರಿ ಮಾಹಿತಿ ಮಾತ್ರ ನಂಬಿ
ಲಸಿಕೆಯಿಂದ ಅಡ್ಡಪರಿಣಾಮ ಉಂಟಾದರೆ, ಸ್ಥಳದಲ್ಲೇ ತುರ್ತು ಚಿಕಿತ್ಸೆ ವ್ಯವಸ್ಥೆ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡಿ ಜನಸಾಮಾನ್ಯರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಸರ್ಕಾರದ ಸಾಮಾಜಿಕ ಜಾಲತಾಣಗಳಿಂದ ಬಿಡುಗಡೆ ಮಾಡುವ ಮಾಹಿತಿ ಮಾತ್ರ ಅಧಿಕೃತ ಹಾಗೂ ಸತ್ಯ ಎಂದು ಸುಧಾಕರ್ ಸ್ಪಷ್ಟಪಡಿಸಿದರು.

ಇತರೆ ಅಂಶಗಳು  ಹೇಳಿದ ಸಚಿವರು
 ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿ, ಪೊಲೀಸರು, ಪೌರಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಲಸಿಕೆ ಸಂಪೂರ್ಣ ಸುರಕ್ಷಿತ. ಮೊದಲ ಡೋಸ್ ಪಡೆದ 28 ದಿನಗಳ ನಂತರ 2ನೇ ಡೋಸ್ ನೀಡಲಾಗುತ್ತದೆ. ಜನರು ಯಾವುದೇ ಆತಂಕವಿಲ್ಲದೆ ವಿಶ್ವಾಸದಿಂದ ಲಸಿಕೆ ಪಡೆಯಿರಿ ಎಂದು ಕರೆ ನೀಡಿದರು.

ರಾಜ್ಯದಲ್ಲಿ 10 ವಾಕ್-ಇನ್ ಕೂಲರ್, 4 ವಾಕ್-ಇನ್ ಫ್ರೀಜರ್, 3,210 ಐಎಲ್ ಆರ್, 3,312 ಕೋಲ್ಡ್ ಬಾಕ್ಸ್, 46,591 ಲಸಿಕೆ ಕ್ಯಾರಿಯರ್, 2,25,749 ಐಸ್ ಪ್ಯಾಕ್ ಇದೆ ಎಂದು ಹೇಳಿದರು.

click me!