ಕೊರೋನಾ: ರಾಜ್ಯ ಬಿಜೆಪಿ ಸೇವೆಗೆ ಮೋದಿ ಭೇಷ್‌!

By Kannadaprabha News  |  First Published Jul 5, 2020, 8:54 AM IST

ಕೊರೋನಾ: ರಾಜ್ಯ ಬಿಜೆಪಿ ಸೇವೆಗೆ ಮೋದಿ ಭೇಷ್‌| ಕೊರೋನಾ ಲಾಕ್‌ಡೌನ್‌ ಸಂದರ್ಭದಲ್ಲಿ ಉತ್ತಮ ಕಾರ್ಯ| ಸಂಕಷ್ಟದಲ್ಲಿದ್ದವರಿಗೆ ಆಹಾರ, ದಿನಸಿ, ಔಷಧ ಪೂರೈಕೆ ಶ್ಲಾಘನೀಯ: ಪ್ರಧಾನಿ| ‘ಸೇವೆಯೇ ಸಂಘಟನೆ’ ಸಂವಾದ| ಬಿಎಸ್‌ವೈ ಉಪಸ್ಥಿತಿಯಲ್ಲಿ ಮೋದಿಗೆ ವಿವರ ನೀಡಿದ ರವಿಕುಮಾರ್‌


ಬೆಂಗಳೂರು(ಜು.05): ಕೊರೋನಾ ವೈರಸ್‌ ಲಾಕ್‌ಡೌನ್‌ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಹಾಗೂ ಸರ್ಕಾರ ಒಟ್ಟಾಗಿ ಉತ್ತಮ ಕಾರ್ಯ ನಿರ್ವಹಣೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ‘ಸೇವೆಯೇ ಸಂಘಟನೆ’ ಅಭಿಯಾನದ ಅವಲೋಕನಾ ಸಭೆಯಲ್ಲಿ ವಿಡಿಯೋ ಮೂಲಕ ಕರ್ನಾಟಕ ಸೇರಿದಂತೆ 7 ವಿವಿಧ ರಾಜ್ಯಗಳ ಬಿಜೆಪಿ ನಾಯಕರ ಜತೆ ಶನಿವಾರ ಸಂವಾದ ನಡೆಸಿದರು. ಈ ವೇಳೆ, ‘ಸೋಂಕಿನ ಭಯವಿಲ್ಲದೇ ಸಂಕಷ್ಟಕ್ಕೊಳಗಾದ ಜನರಿಗೆ ರಾಜ್ಯ ಬಿಜೆಪಿ ಕಾರ್ಯಕರ್ತರು ಲಕ್ಷಾಂತರ ಜನರಿಗೆ ಸಹಾಯ ಮಾಡಿದ್ದಾರೆ’ ಎಂದು ರಾಜ್ಯ ಬಿಜೆಪಿ ಪರವಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌ ಅವರು ಸೇವಾ ಚಟುವಟಿಕೆ ಕುರಿತು ಮಾಹಿತಿ ನೀಡಿದರು.

Tap to resize

Latest Videos

undefined

ಕೊರೋನಾ ಸೋಂಕಿನ ಅಬ್ಬರ: ದೇಶದಲ್ಲೀಗ ಕರ್ನಾಟಕ ನಂ.7 ರಾಜ್ಯ!

ಪ್ರಧಾನಿ ಶ್ಲಾಘನೆ:

ಈ ಕುರಿತಂತೆ ಸಂವಾದದ ಬಳಿಕ ಸುದ್ದಿಗೋಷ್ಠಿಯಲ್ಲಿ ಉದ್ದೇಶಿಸಿ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು, ‘ಯಡಿಯೂರಪ್ಪ ನೇತೃತ್ವದ ಸರ್ಕಾರ ಲಾಕ್‌ಡೌನ್‌ ವೇಳೆ ಕಷ್ಟದಲ್ಲಿದ್ದವರಿಗೆ ಆಹಾರ ಪೊಟ್ಟಣ, ದಿನಸಿ ಹಾಗೂ ಔಷಧಿ ಪೂರೈಸುವಲ್ಲಿ ಉತ್ತಮ ನಿರ್ವಹಣೆ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ನನಗೆ ಈಗಾಗಲೇ ಮಾಹಿತಿ ಬಂದಿದೆ ಎಂದು ಪ್ರಧಾನಿ ಅವರು ಅಭಿನಂದನೆ ಸಲ್ಲಿಸಿದರು’ ಎಂದರು.

‘ಜನಸಂಘ ಮತ್ತು ಬಿಜೆಪಿ ಸ್ಥಾಪನೆ ಅಧಿಕಾರಕ್ಕಾಗಿ ಅಲ್ಲ, ನಮ್ಮ ಗುರಿ ರಾಷ್ಟ್ರದ ಹಿತಕ್ಕಾಗಿ. ಸೇವಾ ಕಾರ್ಯದ ಮೂಲಕ ಅಭಿವೃದ್ಧಿ ಮಾಡುವುದೇ ಜನಸಂಘದ ಕಲ್ಪನೆ. ಕಾರ್ಯಕರ್ತನಿಗೆ ಮೊದಲು ರಾಷ್ಟ್ರ. ಹೀಗಾಗಿ ಪ್ರತಿಯೊಬ್ಬರ ರಕ್ಷಣೆಗೆ ನಿಲ್ಲುವುದು ಕಾರ್ಯಕರ್ತನ ಕೆಲಸ. ಈ ಹಿನ್ನೆಲೆಯಲ್ಲಿ ಸೇವಾಕಾರ್ಯ, ಚಿಂತನೆ ಮೂಲಕ ಸಮಾಜ ಸೇವೆ ಮಾಡಬೇಕು. ಸಮಾಜ ಸೇವೆ ಮೂಲಕ ರಾಜಕಾರಣ ಮಾಡಬೇಕು ಎಂದು ಕರೆ ನೀಡಿದರು. ಆ ಕಾರ್ಯವನ್ನು ದಿಲ್ಲಿಯಿಂದ ಹಳ್ಳಿವರೆಗೆ ಪ್ರತಿಯೊಬ್ಬ ಕಾರ್ಯ ಮಾಡಿದ್ದಾನೆ ಎಂಬ ಎರಡೂವರೆ ಗಂಟೆಗಳ ಕಾಲ ಸಂದೇಶ ನೀಡಿದರು’ ಎಂದು ವಿವರಿಸಿದರು.

ಸಿಎಂ ಮುಂದೆ ಮತ್ತೆ ಲಾಕ್‌ಡೌನ್‌ ಚರ್ಚೆ!

ಸಾವಿರಾರು ಜನರಿಗೆ ಸಹಾಯ- ರವಿಕುಮಾರ್‌:

BJP Karyakartas from every level in party’s organisation across the country joined in programme.

Service is the soul of BJP. pic.twitter.com/8cUpQQNjsg

— BJP (@BJP4India)

‘ಲಾಕ್‌ಡೌನ್‌ ವೇಳೆ ಸಂಕಷ್ಟಕ್ಕೊಳಗಾದ ಬಡವರು, ಶ್ರಮಿಕರು, ವಲಸೆ ಕಾರ್ಮಿಕರು ಸೇರಿದಂತೆ ಲಕ್ಷಾಂತರ ಜನರಿಗೆ ಬಿಜೆಪಿ ಕಾರ್ಯಕರ್ತರು ಸೋಂಕಿನ ಭಯವಿಲ್ಲದೆ ನೆರವಿನ ಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾರೆ’ ಎಂದು ಮೋದಿ ಹಾಗೂ ನಡ್ಡಾ ಅವರ ಎದುರು ರವಿಕುಮಾರ್‌ ಹೇಳಿದರು.

‘ನಿರ್ಗತಿಕರಿಗೆ, ಕೊಳಚೆಪ್ರದೇಶದ ನಿವಾಸಿಗಳಿಗೆ, ಬಡವರಿಗೆ, ವಲಸೆ ಕಾರ್ಮಿಕರಿಗೆ ಆಹಾರ ಕಿಟ್‌, ಊಟದ ವ್ಯವಸ್ಥೆ, ಮಾಸ್ಕ್‌ ಸೇರಿದಂತೆ ಅಗತ್ಯ ಸೇವೆಗಳನ್ನು ಒದಗಿಸಲಾಯಿತು. ಸಂಕಷ್ಟಕ್ಕೊಳಗಾಗಿರುವವರಿಗೆ ಯಾವ ರೀತಿಯಲ್ಲಿ ನೆರವು ನೀಡಬೇಕು ಎಂಬುದರ ಬಗ್ಗೆ 728 ಆಡಿಯೋ ಸಂವಾದ ನಡೆಸಿದ್ದು, 335 ವಿಡಿಯೋ ಸಂವಾದಗಳನ್ನು ನಡೆಸಲಾಗಿದೆ. 1.54 ಕೋಟಿಯಷ್ಟುಆಹಾರ ಪೊಟ್ಟಣ, 49 ಸಾವಿರ ಆಹಾರ ಧಾನ್ಯಗಳ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಸಂಕಷ್ಟಕ್ಕೆ ಸಿಲುಕಿದ ಜಾರ್ಖಂಡ್‌, ಉತ್ತರಪ್ರದೇಶ ಸೇರಿದಂತೆ ಇತರೆ ಹೊರ ರಾಜ್ಯದವರಿಗೆ ಅಗತ್ಯ ಸಹಾಯ ನೀಡಲಾಗಿದೆ. ಲಾಕ್‌ಡೌನ್‌ ವೇಳೆ ಔಷಧಿಗಾಗಿ ಪರದಾಡುತ್ತಿದ್ದ 1.40 ಲಕ್ಷ ಮಂದಿಗೆ ಅಗತ್ಯ ಔಷಧಿಗಳನ್ನು ತಲುಪಿಸುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಿದ್ದಾರೆ. ಯುವ ಮೋರ್ಚಾದ ಸದಸ್ಯರು ಸರಿಯಾಗಿ ಯೋಜನೆ ರೂಪಿಸಿ ಔಷಧಿಗಳನ್ನು ತಲುಪಿಸುವ ಕೆಲಸ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಇನ್ನು, ಪಕ್ಷದ ಮಹಿಳಾ ಮೋರ್ಚಾ ಸದಸ್ಯರು ಎನ್‌ಜಿಓ ಸಂಸ್ಥೆಗಳ ಸಹಯೋಗದಲ್ಲಿ ಮಾಸ್ಕ್‌ಗಳನ್ನು ಸಿದ್ಧಪಡಿಸಿ 1.42 ಕೋಟಿ ಮಾಸ್ಕ್‌ಗಳನ್ನು ತಲುಪಿಸುವ ಕಾರ್ಯ ಮಾಡಿದ್ದಾರೆ. ಪಿಎಂ ಕೇರ್‌ ಫಂಡ್‌ಗಾಗಿ 11.78 ಲಕ್ಷ ಜನರನ್ನು ಸಂಪರ್ಕಿಸಿ ದೇಣಿಗೆ ಸಂಗ್ರಹಿಸಲಾಗಿದೆ. ಕೊರೋನಾ ವಾರಿಯರ್ಸ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತರು, ಪೊಲೀಸರು, ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಇತರರಿಗೆ ಸನ್ಮಾನಿಸಿ ಗೌರವಿಸಲಾಗಿದೆ’ ಎಂದರು.

‘ರಾಜ್ಯದಲ್ಲಿ ಮತ್ತೊಂದು ವಿಶೇಷವೆಂದರೆ ಸ್ಮಶಾನದಲ್ಲಿ ಕೆಲಸ ಮಾಡುತ್ತಿರುವ ಸಂಘವು ಒಂದು ದಿನ ವೇತನವನ್ನು ಮುಖ್ಯಮಂತ್ರಿಯವರ ಪರಿಹಾರ ನಿಧಿಗೆ 20 ಲಕ್ಷ ರು. ದೇಣಿಗೆ ನೀಡಿದೆ. ಕಡು ಬಡವರಾದರೂ ಸಹ ಸರ್ಕಾರಕ್ಕೆ ಆರ್ಥಿಕ ನೆರವು ಒದಗಿಸಿ ಮಾನವೀಯತೆ ಮೆರೆದಿದ್ದಾರೆ. ರಕ್ತದಾನ ಶಿಬಿರಗಳನ್ನು ನಡೆಸಲಾಗಿದ್ದು, 85 ಶಿಬಿರಗಳನ್ನು ನಡೆಸಲಾಯಿತು. ಇದರಲ್ಲಿ 2320 ಮಂದಿ ರಕ್ತದಾನ ಮಾಡಿದ್ದಾರೆ. 1.30 ಲಕ್ಷ ವಲಸೆ ಕಾರ್ಮಿಕರಿಗೆ ಸೌಲಭ್ಯಗಳನ್ನು ಒದಗಿಸಲಾಗಿದೆ. 2.31 ಲಕ್ಷ ಮಾಸ್ಕ್‌ ವಿತರಣೆ ಮತ್ತು 3.61 ಲಕ್ಷ ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ. ಜನರಿಗೆ ಸಹಾಯ ಮಾಡಲು ಪಕ್ಷವು ಸಹಾಯವಾಣಿ ಕೇಂದ್ರ ಆರಂಭಿಸಿತು. ಸಹಾಯವಾಣಿ ಮೂಲುಖ 1.04 ಲಕ್ಷ ದೂರುಗಳು ಸ್ವೀಕೃತಗೊಂಡಿದ್ದು, 73 ಸಾವಿರ ದೂರುಗಳನ್ನು ಆಲಿಸಿ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಲಾಗಿದೆ’ ಎಂದು ವಿವರಿಸಿದರು.

‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ರಾಜ್ಯ ಸರ್ಕಾರವು ಸವಾಲಾಗಿ ಪರಿಗಣಿಸಿ ಯಶಸ್ವಿಯಾಗಿ ಪೂರೈಸಲಾಗಿದೆ. ದೇಶದ ಹಲವು ರಾಜ್ಯಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ರದ್ದುಗೊಳಿಸಿತು. ಆದರೆ, ರಾಜ್ಯ ಸರ್ಕಾರವು ಸರಿಯಾದ ರೂಪುರೇಷೆ ರೂಪಿಸಿ ಪರೀಕ್ಷೆಯನ್ನು ನಡೆಸಲಾಯಿತು. ಶೇ.98.90 ವಿದ್ಯಾರ್ಥಿಗಳು ಭಾಗವಹಿಸಿ ಪರೀಕ್ಷೆ ಬರೆದಿದ್ದು, ಯಾವುದೇ ಸಮಸ್ಯೆಯಾಗದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು’ ಎಂದು ಹೇಳಿದರು.

ಯಡಿಯೂರಪ್ಪ, ಕಟೀಲ್‌, ಉಪಮುಖ್ಯಮಂತ್ರಿಗಳಾದ ಗೊವಿಂದ್‌ ಕಾರಜೋಳ, ಲಕ್ಷ್ಮಣ್‌ ಸವದಿ, ಅಶ್ವತ್ಥ ನಾರಾಯಣ, ಸಚಿವರಾದ ಜಗದೀಶ್‌ ಶೆಟ್ಟರ್‌, ಆರ್‌.ಅಶೋಕ್‌ ಇತರರು ಭಾಗವಹಿಸಿದ್ದರು.

ಶನಿವಾರ ಪ್ರಧಾನಿ ಮೋದಿಯವರು ನಡೆಸಿದ ಸೇವೆಯೇ ಸಂಘಟನೆ ವೀಡಿಯೋ ಸಂವಾದದಲ್ಲಿ ಸಿಎಂ ಯಡಿಯೂರಪ್ಪ, ಪಕ್ಷದ ಅಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌, ಸಚಿವರಾದ ಗೋವಿಂದ ಕಾರಜೋಳ, ಅಶೋಕ್‌, ಶೆಟ್ಟರ್‌ ಇತರರಿದ್ದರು.

click me!