ಸಿಎಂ ಮುಂದೆ ಮತ್ತೆ ಲಾಕ್‌ಡೌನ್‌ ಚರ್ಚೆ!

By Kannadaprabha News  |  First Published Jul 5, 2020, 7:52 AM IST

ಸಿಎಂ ಮುಂದೆ ಮತ್ತೆ ಲಾಕ್‌ಡೌನ್‌ ಚರ್ಚೆ!| ಮೊದಲು ಬೆಂಗಳೂರಲ್ಲಿ ಇದನ್ನು ಕೆಲ ದಿನ ಜಾರಿಗೆ ತನ್ನಿ|  ನಂತರ ಸ್ಥಿತಿ ಕೈಮೀರಿದ ಜಿಲ್ಲೆಗಳಲ್ಲಿ ಒಂದು ವಾರ ಲಾಕ್‌ಡೌನ್‌ ಮಾಡಿ|ಆರ್ಥಿಕ ನಷ್ಟಆಗಲ್ಲ, ಸ್ಥಿತಿ ನಿಯಂತ್ರಣಕ್ಕೆ ಬರುತ್ತೆ: ತಜ್ಞರು| ಆರ್ಥಿಕ ಇಲಾಖೆ ಜತೆ ಚರ್ಚಿಸಿ ಈ ಬಗ್ಗೆ ನಿರ್ಧರಿಸೋಣ ಎಂದ ಸಿಎಂ


ಲಿಂಗರಾಜು ಕೋರಾ

ಬೆಂಗಳೂರು(ಜು.05): ‘ಕೊರೋನಾ ನಿಯಂತ್ರಣಕ್ಕೆ ಮತ್ತೆ ಇಡೀ ರಾಜ್ಯವನ್ನೇ ಲಾಕ್‌ಡೌನ್‌ ಮಾಡಿದರೆ ಆರ್ಥಿಕವಾಗಿ ಅಧೋಗತಿ ತಲುಪಬೇಕಾಗುತ್ತದೆ, ಸರ್ಕಾರ ನಡೆಸುವುದೂ ಕಷ್ಟವಾಗುತ್ತದೆ. ಅದರ ಬದಲು ಕೋವಿಡ್‌ ಸೋಂಕಿತರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಲಾಕ್‌ಡೌನ್‌ ಮಾಡಿದರೆ ಹೇಗೆ?’

Latest Videos

undefined

- ಇಂತಹದ್ದೊಂದು ಗಂಭೀರ ಚರ್ಚೆ ಕೂಡ ಸರ್ಕಾರದ ಉನ್ನತ ಮಟ್ಟದಲ್ಲಿ ನಡೆದಿದೆ.

ಸ್ವತಃ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಇತ್ತೀಚಿನ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಯಾವ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ತೀವ್ರಗೊಂಡು ಹಾಸಿಗೆ ಸಮಸ್ಯೆ, ಆಂಬ್ಯುಲೆನ್ಸ್‌ ಸಮಸ್ಯೆ, ಸಿಬ್ಬಂದಿ ಕೊರತೆ, ಸಮರ್ಪಕ ಚಿಕಿತ್ಸೆ ನೀಡಲು ಸಾಧ್ಯವಾಗದೆ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎನ್ನುವಾಗ ಆ ಜಿಲ್ಲೆಯನ್ನು ಮಾತ್ರ ಕೆಲ ದಿನಗಳ ಕಾಲ ಲಾಕ್‌ಡೌನ್‌ ಮಾಡಬೇಕು. ಇದರಿಂದ ತಕ್ಕಮಟ್ಟಿಗೆ ಸೋಂಕು ಕಡಿಮೆಯಾಗುತ್ತದೆ. ಬಳಿಕ ಲಾಕ್‌ಡೌನ್‌ ತೆರವುಗೊಳಿಸಿದರೆ ಪರಿಸ್ಥಿತಿ ನಿಭಾಯಿಸಬಹುದು. ಇದರಿಂದ ಸಾವು ನೋವುಗಳ ಸಂಖ್ಯೆಯೂ ಕಡಿಮೆಯಾಗುತ್ತದೆ ಎಂದು ಕೆಲ ತಜ್ಞರು ಹಾಗೂ ಅಧಿಕಾರಿಗಳು ತಮ್ಮ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಬೆಂಗಳೂರಿನಿಂದ ಜನರ ಗುಳೆ: ಮನೆ ಖಾಲಿ ಮಾಡಿ ತಮ್ಮ ಊರಿಗೆ ಪ್ರಯಾಣ!

ಈ ರೀತಿ ಒಂದು ಅವಧಿಗೆ ಒಂದೋ, ಎರಡೋ ಜಿಲ್ಲೆಯನ್ನು ಲಾಕ್‌ಡೌನ್‌ ಮಾಡುವುದರಿಂದ ಸರ್ಕಾರಕ್ಕೂ ಅಷ್ಟುದೊಡ್ಡ ಮಟ್ಟಆರ್ಥಿಕ ನಷ್ಟವೂ ಆಗುವುದಿಲ್ಲ. ಇಡೀ ರಾಜ್ಯಯವನ್ನು ಲಾಕ್‌ಡೌನ್‌ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ಮತ್ತು ಕೋವಿಡ್‌ ಪರಿಸ್ಥಿತಿ ಎರಡನ್ನೂ ನಿಭಾಯಿಸಲು ಈ ಪರ್ಯಾಯ ಮಾರ್ಗ ಅನುಸರಿಸುವುದು ಸೂಕ್ತ ಎಂದು ಪ್ರಮುಖವಾಗಿ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳೇ ಮುಖ್ಯಮಂತ್ರಿ ಅವರ ಮುಂದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.

ನಿಯಂತ್ರಣ ತಪ್ಪುತ್ತಿದೆ ಬೆಂಗಳೂರು!

ಆರೋಗ್ಯ ಇಲಾಖೆಯ ಅಧಿಕಾರಿ ಮೂಲಗಳ ಪ್ರಕಾರ, ಸದ್ಯ ತೀವ್ರ ರೀತಿಯಲ್ಲಿ ಸೋಂಕು ಹೆಚ್ಚಾಗುತ್ತಿರುವುದು ರಾಜಧಾನಿ ಬೆಂಗಳೂರಿನಲ್ಲಿ. ಜೊತೆಗೆ ಬಳ್ಳಾರಿ, ದಕ್ಷಿಣ ಕನ್ನಡ, ಕಲಬುರಗಿ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲೂ ಸೋಂಕು ಹೆಚ್ಚುತ್ತಿದೆ.

ಬೆಂಗಳೂರಿನಲ್ಲಿ ಇದೇ ರೀತಿ ಸೋಂಕು ಹೆಚ್ಚಾದರೆ ಇನ್ನೊಂದು ವಾರದಲ್ಲಿ ಪರಿಸ್ಥಿತಿ ಸರ್ಕಾರದ ನಿಯಂತ್ರಣವನ್ನೇ ತಪ್ಪಿಹೋಗುತ್ತದೆ. ಹಾಗಾಗಿ ಮೊದಲು ರಾಜಧಾನಿಯಲ್ಲಿ ಕೆಲ ದಿನಗಳ ಲಾಕ್‌ಡೌನ್‌ ಮಾಡಬೇಕು. ಆ ನಂತರ ಸೋಂಕು ಹೆಚ್ಚಿರುವ ಇತರೆ ಜಿಲ್ಲೆಗಳನ್ನು ನೋಡಿಕೊಂಡು ಹಂತ ಹಂತವಾಗಿ ದೀರ್ಘ ಕಾಲ ಅಲ್ಲದಿದ್ದರೂ ಕನಿಷ್ಠ ಒಂದು ವಾರ ಕಾಲ ಲಾಕ್‌ಡೌನ್‌ ಅನುಸರಿಸಿದರೆ ಪರಿಸ್ಥಿತಿ ನಿಭಾಯಿಸಲು ಸಹಕಾರಿಯಾಗುತ್ತದೆ. ಜೊತೆಗೆ ಸರ್ಕಾರಕ್ಕೂ ಅಷ್ಟೇನೂ ಆರ್ಥಿಕ ಸಂಕಷ್ಟಎದುರಾಗುವುದಿಲ್ಲ ಎಂದು ತಜ್ಞರು ಹಾಗೂ ಅಧಿಕಾರಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಸೋಂಕು-ಸಾವಲ್ಲಿ ಕೊರೋನಾ ದಾಖಲೆ: ಒಂದೇ ದಿನ 42 ಮಂದಿ ಸಾವು, 1839 ಕೇಸ್‌!

ಆದರೆ, ಮುಖ್ಯಮಂತ್ರಿ ಅವರು ಈ ರೀತಿ ಕೆಲ ಜಿಲ್ಲೆಗಳನ್ನು ಮಾತ್ರ ಅದರಲ್ಲೂ ರಾಜಧಾನಿಯನ್ನು ಲಾಕ್‌ಡೌನ್‌ ಮಾಡಿದರೆ ಸರ್ಕಾರಕ್ಕೆ ಎಷ್ಟುಆರ್ಥಿಕ ಹೊರೆ ಹೆಚ್ಚಾಗಬಹುದು. ಸರ್ಕಾರ ನಿಭಾಯಿಸಲು ಯಾವುದೇ ತೊಂದರೆ ಆಗುವುದಿಲ್ಲವೇ ಎಂಬ ಬಗ್ಗೆ ಆರ್ಥಿಕ ಇಲಾಖೆಯಿಂದ ಮಾಹಿತಿ ಪಡೆಯುತ್ತೇನೆ. ಆ ನಂತರ ಈ ಬಗ್ಗೆ ಕೂಲಂಕುಷವಾಗಿ ಮತ್ತೊಮ್ಮೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರೋಣ ಎಂದು ಹೇಳಿದ್ದಾರೆ ಎಂದು ಸಭೆಯಲ್ಲಿದ್ದ ಮೂಲಗಳು ತಿಳಿಸಿವೆ.

click me!